ಧೂಮಪಾನ (Smoking) ಆರೋಗ್ಯಕ್ಕೆ ಹಾನಿಕಾರಕ ಎಂಬ ಎಚ್ಚರಿಕೆ ನಮಗೆಲ್ಲಾ ತಿಳಿದಿದೆ. ಆದರೆ, ಇತ್ತೀಚಿನ ಸಂಶೋಧನೆಯೊಂದು ಪುರುಷರ ಈ ಚಟವು ಅವರ ಹುಟ್ಟಲಿರುವ ಮಕ್ಕಳ ಜೀವನವನ್ನೇ ಹಾಳುಮಾಡಬಹುದೆಂಬ ಎಂಬ ಭಯಾನಕ ಸತ್ಯವನ್ನು ಬಿಚ್ಚಿಟ್ಟಿದೆ. ತಂದೆ ಧೂಮಪಾನ ಮಾಡುತ್ತಿದ್ದರೆ, ಆ ಪ್ರಭಾವ ಮಕ್ಕಳ ಡಿಎನ್‌ಎ ಮೇಲೆ ಬೀರಲಿದ್ದು, ಭವಿಷ್ಯದಲ್ಲಿ ಮಕ್ಕಳು ಮಧುಮೇಹ ಮತ್ತು ಲಿವರ್ ಸಂಬಂಧಿತ ಗಂಭೀರ ಕಾಯಿಲೆಗಳಿಗೆ ತುತ್ತಾಗುವ ಅಪಾಯವಿದೆ ಎಂದು ಅಧ್ಯಯನ ತಿಳಿಸಿದೆ.
ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ತಜ್ಞ ವೈದ್ಯರು ನಡೆಸಿದ ಈ ಅಧ್ಯಯನವು ಜರ್ನಲ್ ಆಫ್ ದಿ ಎಂಡೋಕ್ರೈನ್ ಸೊಸೈಟಿಯಲ್ಲಿ ಪ್ರಕಟವಾಗಿದೆ. ಸುಮಾರು 1,000 ಧೂಮಪಾನ ಮಾಡುವ ಪುರುಷರನ್ನು ಈ ಸಂಶೋಧನೆಗೆ ಒಳಪಡಿಸಲಾಗಿತ್ತು. ಇದರ ಫಲಿತಾಂಶದ ಪ್ರಕಾರ, ಧೂಮಪಾನ ಮಾಡುವ ತಂದೆಯ ಮಕ್ಕಳು ಟೈಪ್-2 ಮಧುಮೇಹ (Type-2 Diabetes) ಮತ್ತು ಮೆಟಾಬಾಲಿಕ್ ಸಿಂಡ್ರೋಮ್‌ಗಳಿಂದ ಬಳಲುವ ಸಾಧ್ಯತೆ ಹೆಚ್ಚಿದೆ. ವಿಶೇಷವಾಗಿ ಮಕ್ಕಳಲ್ಲಿ ಸಕ್ಕರೆ ಅಂಶವನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯ ಕುಂಠಿತವಾಗುವುದು ಕಂಡುಬಂದಿದೆ.
ತಂದೆ ಸೇವಿಸುವ ನಿಕೋಟಿನ್ ಅಂಶವು ಅವರ ದೇಹದ ಮೆಟಾಬಾಲಿಸಮ್ ಮೇಲೆ ಮಾತ್ರವಲ್ಲದೆ, ವೀರ್ಯಾಣುಗಳ (Sperm) ಗುಣಮಟ್ಟ ಮತ್ತು ರಚನೆಯ ಮೇಲೂ ಪ್ರಭಾವ ಬೀರುತ್ತದೆ. ಧೂಮಪಾನದ ವಿಷಕಾರಿ ಅಂಶಗಳು ವೀರ್ಯಾಣುಗಳಲ್ಲಿ ಕೆಲವು ಎಪಿಜೆನೆಟಿಕ್ ಬದಲಾವಣೆಗಳನ್ನು ಉಂಟುಮಾಡುತ್ತವೆ. ಈ ಬದಲಾವಣೆಗಳು ಮಗು ಜನಿಸಿದಾಗ ಅದರ ದೇಹದ ಇನ್ಸುಲಿನ್ ಕಾರ್ಯನಿರ್ವಹಣೆಯನ್ನು ಏರುಪೇರು ಮಾಡುತ್ತವೆ. ಅಧ್ಯಯನಕ್ಕೆ ಒಳಪಟ್ಟವರ ಪೈಕಿ ಸುಮಾರು 30% ರಷ್ಟು ಮಕ್ಕಳಲ್ಲಿ ಮಧುಮೇಹದ ಆರಂಭಿಕ ಲಕ್ಷಣಗಳು ಮತ್ತು ಲಿವರ್ (ಯಕೃತ್ತು) ಸಂಬಂಧಿತ ದೋಷಗಳು ಪತ್ತೆಯಾಗಿವೆ.
ನಿಕೋಟಿನ್ ಸೇವನೆಯಿಂದ ತಂದೆಯ ದೇಹದಲ್ಲಿ ಉಂಟಾಗುವ ಇನ್ಸುಲಿನ್ ಪ್ರತಿರೋಧವು (Insulin Resistance) ಅನುವಂಶೀಯವಾಗಿ ಮಕ್ಕಳಿಗೆ ವರ್ಗಾವಣೆಯಾಗುವ ಸಾಧ್ಯತೆ ಇರುತ್ತದೆ. ಇದರಿಂದ ಮಕ್ಕಳು ಎಳೆವಯಸ್ಸಿನಲ್ಲೇ ಬೊಜ್ಜು, ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಳ ಮತ್ತು ಜೀರ್ಣಕ್ರಿಯೆಯ ತೊಂದರೆಗಳನ್ನು ಅನುಭವಿಸಬಹುದು. ವಿಜ್ಞಾನಿಗಳ ಪ್ರಕಾರ, ಇದು ಕೇವಲ ಶ್ವಾಸಕೋಶದ ಸಮಸ್ಯೆಯಲ್ಲ, ಬದಲಾಗಿ ಮಗುವಿನ ಸಂಪೂರ್ಣ ಶಾರೀರಿಕ ಬೆಳವಣಿಗೆಯ ಮೇಲೆ ಮರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ.
ತಂದೆಯಾಗಲು ಬಯಸುವ ಪುರುಷರು ಕನಿಷ್ಠ ಪಕ್ಷ ಮಗು ಜನಿಸುವ ಮೊದಲೇ ಧೂಮಪಾನವನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಇದು ಕೇವಲ ನಿಮ್ಮ ವೈಯಕ್ತಿಕ ಆರೋಗ್ಯಕ್ಕೆ ಮಾತ್ರವಲ್ಲ, ನಿಮ್ಮ ಮಗುವಿಗೆ ಕಾಯಿಲೆಗಳಿಲ್ಲದ ಸುಂದರ ಭವಿಷ್ಯವನ್ನು ಉಡುಗೊರೆಯಾಗಿ ನೀಡಲು ಅನಿವಾರ್ಯವಾಗಿದೆ.
