ಆಪತ್ಬಾಂಧವ NDRF ಯೋಧರ ಮಾನಸಿಕ ಆರೋಗ್ಯಕ್ಕಾಗಿ ‘ಪ್ರಾಜೆಕ್ಟ್ ನಿರ್ಮಲ್’ ಜಾರಿ, ಏನಿದು ಯೋಜನೆ?

Your paragraph text 2026 10 08T133731.222

ಬೆಂಗಳೂರು: ಪ್ರಕೃತಿ ವಿಕೋಪ, ಪ್ರವಾಹ, ಭೂಕಂಪ ಹಾಗೂ ಇನ್ನಿತರ ವಿಪತ್ತುಗಳ ಸಮಯದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹಗಲಿರುಳು ಶ್ರಮಿಸುವ ಎನ್‌ಡಿಆರ್‌ಎಫ್ ಸಿಬ್ಬಂದಿ ಮತ್ತು ಅವರ ಕುಟುಂಬಸ್ಥರ ಮಾನಸಿಕ ಆರೋಗ್ಯವನ್ನು ಕಾಪಾಡಲು ಮಹತ್ವದ ಹೆಜ್ಜೆಯನ್ನಿಡಲಾಗಿದೆ.

ಎನ್‌ಡಿಆರ್‌ಎಫ್ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ (ಎಮ್‌ಡಬ್ಲ್ಯೂಡಬ್ಲ್ಯೂಎ) ಹಾಗೂ ಆದಿತ್ಯ ಬಿರ್ಲಾ ಎಜುಕೇಶನ್ ಟ್ರಸ್ಟ್‌ನ (ಎಬಿಇಟಿ) ಪ್ರಸಿದ್ಧ ಮಾನಸಿಕ ಆರೋಗ್ಯ ಸೇವಾ ಸಂಸ್ಥೆಯಾದ ‘ಎಂಪವರ್’ ಜಂಟಿಯಾಗಿ, ಯೋಧರಿಗಾಗಿ ‘ಪ್ರಾಜೆಕ್ಟ್ ನಿರ್ಮಲ್’ ಎಂಬ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿವೆ. ಈ ಕುರಿತು ಎರಡೂ ಸಂಸ್ಥೆಗಳ ನಡುವೆ ಒಪ್ಪಂದ ಏರ್ಪಟ್ಟಿದೆ.

ಏಕೆ ಈ ಯೋಜನೆ? ಏನಿದರ ಉದ್ದೇಶವೇನು?

ದಿಢೀರ್ ಕಾರ್ಯಾಚರಣೆಗಳು, ಪ್ರಾಣಾಪಾಯದ ಸನ್ನಿವೇಶಗಳು ಮತ್ತು ನಿರಂತರ ದೈಹಿಕ ಶ್ರಮದಿಂದಾಗಿ ಎನ್‌ಡಿಆರ್‌ಎಫ್ ಯೋಧರು ತೀವ್ರ ಒತ್ತಡಕ್ಕೆ ಒಳಗಾಗುತ್ತಾರೆ. ಅವರ ಈ ವೃತ್ತಿಪರ ಒತ್ತಡವನ್ನು ನಿರ್ವಹಿಸಲು ಹಾಗೂ ಮಾನಸಿಕ ಆರೋಗ್ಯದ ಬಗೆಗಿನ ಕಳಂಕವನ್ನು ಹೋಗಲಾಡಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

‘ಪ್ರಾಜೆಕ್ಟ್ ನಿರ್ಮಲ್’ ಅಡಿಯಲ್ಲಿ ಸಿಗುವ ಸೌಲಭ್ಯಗಳೇನು?

ನಿಯಮಿತ ತಪಾಸಣೆ ಮತ್ತು ಕೌನ್ಸೆಲಿಂಗ್: ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ, ನಿಯಮಿತ ಮಾನಸಿಕ ತಪಾಸಣೆ, ವೈಯಕ್ತಿಕ ಮತ್ತು ಗುಂಪು ಆಪ್ತಸಮಾಲೋಚನೆ ನೀಡಲಾಗುತ್ತದೆ.

24/7 ಸಹಾಯವಾಣಿ: ಯೋಧರು ಮತ್ತು ಅವರ ಕುಟುಂಬದವರಿಗಾಗಿ ತಜ್ಞರು ನಿರ್ವಹಿಸುವ ದಿನದ 24 ಗಂಟೆಯೂ ಲಭ್ಯವಿರುವ ‘ಬಹುಭಾಷಾ ಟೆಲಿ-ಕೌನ್ಸೆಲಿಂಗ್ ಸಹಾಯವಾಣಿ’ಯನ್ನು (Helpline) ಆರಂಭಿಸಲಾಗುತ್ತಿದೆ.

ಆತ್ಮಹತ್ಯೆ ತಡೆ ಮತ್ತು ಬಿಕ್ಕಟ್ಟು ನಿರ್ವಹಣೆ: ಯೋಧರು ಖಿನ್ನತೆಗೆ ಒಳಗಾದಾಗ ತಕ್ಷಣದ ಸ್ಪಂದನೆ ಮತ್ತು ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಅಗತ್ಯ ಬೆಂಬಲ ಒದಗಿಸಲಾಗುತ್ತದೆ.

ಪ್ರಾದೇಶಿಕ ಕೇಂದ್ರಗಳು: ದೇಶಾದ್ಯಂತ ಈ ಸೇವೆಯನ್ನು ಒದಗಿಸಲು ಪ್ರಮುಖ ಪ್ರಾದೇಶಿಕ ಕೇಂದ್ರಗಳಲ್ಲಿ ಹಬ್-ಆಧಾರಿತ ವಿಶೇಷ ತಂಡಗಳನ್ನು ರಚಿಸಲಾಗುತ್ತಿದೆ.

ಯೋಜನೆಯ ಕುರಿತು ಮಾತನಾಡಿರುವ ಎನ್‌ಡಬ್ಲ್ಯೂಡಬ್ಲ್ಯೂಎ ಅಧ್ಯಕ್ಷೆ ಪ್ರೀತಿ ಆನಂದ್, “ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗುವ ಸಿಬ್ಬಂದಿ ಮತ್ತು ಅವರ ಕುಟುಂಬಗಳ ಭಾವನಾತ್ಮಕ ಯೋಗಕ್ಷೇಮಕ್ಕೆ ಆದ್ಯತೆ ನೀಡುವುದು, ಪಡೆಯ ನೈತಿಕ ಸ್ಥೈರ್ಯ ಮತ್ತು ಕಾರ್ಯಪಟುತ್ವವನ್ನು ಹೆಚ್ಚಿಸಲು ಅತ್ಯಗತ್ಯವಾಗಿದೆ,” ಎಂದರು.

ಎಂಪವರ್ ಸಂಸ್ಥಾಪಕಿ ಮತ್ತು ಆದಿತ್ಯ ಬಿರ್ಲಾ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷೆ ನೀರಜಾ ಬಿರ್ಲಾ ಮಾತನಾಡಿ, “ದೇಶಕ್ಕಾಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಮುಂಚೂಣಿ ಕಾರ್ಯಕರ್ತರಿಗೆ ವ್ಯವಸ್ಥಿತ ಮಾನಸಿಕ ಆರೋಗ್ಯ ಬೆಂಬಲವನ್ನು ಒದಗಿಸಲು ‘ಪ್ರಾಜೆಕ್ಟ್ ನಿರ್ಮಲ್’ ಒಂದು ಪ್ರಮುಖ ಹೆಜ್ಜೆಯಾಗಿದೆ. ಯೋಧರ ಮಾನಸಿಕ ಆರೋಗ್ಯಕ್ಕೆ ಸ್ಪಂದಿಸುತ್ತಿರುವ ಎನ್‌ಡಿಆರ್‌ಎಫ್ ಕಾರ್ಯ ಶ್ಲಾಘನೀಯ,” ಎಂದು ಹರ್ಷ ವ್ಯಕ್ತಪಡಿಸಿದರು.

‘ಎಂಪವರ್’ ಸಂಸ್ಥೆಯು ಭದ್ರತಾ ಪಡೆಗಳ ಜೊತೆ ಕೆಲಸ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈಗಾಗಲೇ ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಸಿಆರ್‌ಪಿಎಫ್ ಮತ್ತು ಮಹಾರಾಷ್ಟ್ರ ಪೊಲೀಸ್ ಪಡೆಗಳೊಂದಿಗೆ ಯಶಸ್ವಿಯಾಗಿ ಕೆಲಸ ಮಾಡಿದ ಸುದೀರ್ಘ ಅನುಭವವನ್ನು ಹೊಂದಿದೆ.

ದಕ್ಷಿಣ ಏಷ್ಯಾದ ಅತಿದೊಡ್ಡ ಖಾಸಗಿ ಮಾನಸಿಕ-ಆರೋಗ್ಯ ಉಪಕ್ರಮಗಳಲ್ಲಿ ಒಂದಾಗಿರುವ ಎಂಪವರ್, ಇಲ್ಲಿಯವರೆಗೆ 80 ಲಕ್ಷಕ್ಕೂ ಹೆಚ್ಚು ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತಂದಿದೆ.

Exit mobile version