ನಿಮ್ಮ ಲಿವರ್ ಆರೋಗ್ಯವಾಗಿರಲು ಬೆಳಿಗ್ಗೆ ಈ ಅಭ್ಯಾಸ ಮಾಡಿ!

Untitled design 2025 11 06t071514.671

ಯಕೃತ್ತು ಅಥವಾ ಲಿವರ್ ನಮ್ಮ ದೇಹದ ಅತ್ಯಂತ ಶ್ರಮಪಡುವ ಅಂಗಗಳಲ್ಲಿ ಒಂದು. ಇದು ಆಹಾರದ ಜೀರ್ಣಕ್ರಿಯೆಗೆ ಸಹಾಯಮಾಡುತ್ತದೆ, ರಕ್ತವನ್ನು ಶುದ್ಧಗೊಳಿಸುತ್ತದೆ, ಟಾಕ್ಸಿನ್‌ಗಳನ್ನು ಹೊರಹಾಕುತ್ತದೆ ಹಾಗೂ ಚಯಾಪಚಯವನ್ನು ನಿಯಂತ್ರಿಸುತ್ತದೆ. ನಿಮ್ಮ ಲಿವರ್ ಆರೋಗ್ಯವನ್ನು ಸೂಪರ್ ಆಗಿಡಲು ಬೆಳಗ್ಗೆ ರೂಢಿಸಿಕೊಳ್ಳಬೇಕಾದ 6 ಅಭ್ಯಾಸಗಳನ್ನು ತಿಳಿದುಕೊಳ್ಳೋಣ.

ವ್ಯಾಯಾಮ

ಯಕೃತ್ತನ್ನು ಹರ್ಷದಿಂದ ಕಾರ್ಯನಿರ್ವಹಿಸಲು ಸಕ್ರಿಯ ಜೀವನಶೈಲಿ ಅತ್ಯಗತ್ಯ. ಬೆಳಿಗ್ಗೆ 30 ನಿಮಿಷ ವಾಕಿಂಗ್‌, ಜಾಗಿಂಗ್‌ ಅಥವಾ ಯೋಗ ಮಾಡುವುದರಿಂದ ದೇಹದ ಕೊಬ್ಬು ಕಡಿಮೆಯಾಗುತ್ತದೆ ಮತ್ತು ಲಿವರ್‌ನಲ್ಲಿ ಕೊಬ್ಬು ಸೇರುವುದನ್ನು ತಡೆಯುತ್ತದೆ.

ಬೆರ್ರಿ ಹಣ್ಣು 

ಲಿವರ್ ಆರೋಗ್ಯದಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಬೆಳಿಗ್ಗೆ ಉಪಾಹಾರದಲ್ಲಿ ಬೆರ್ರಿ ಹಣ್ಣುಗಳನ್ನು ಸೇರಿಸಿಕೊಳ್ಳಿ. ಸ್ಟ್ರಾಬೆರಿ, ಬ್ಲೂಬೆರಿ ಅಥವಾ ಬ್ಲ್ಯಾಕ್‌ಬೆರಿ ಯಾವುದಾದರೂ ಇರಬಹುದು. ಇವುಗಳಲ್ಲಿ ಇರುವ ಆಂಥೋಸಯಾನಿನ್‌ಗಳು ಆಂಟಿ ಆಕ್ಸಿಡೆಂಟ್‌ಗಳಾಗಿ ಕಾರ್ಯನಿರ್ವಹಿಸಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡದಿಂದ ಲಿವರ್‌ನ್ನು ರಕ್ಷಿಸುತ್ತವೆ. ಓಟ್‌ಮೀಲ್‌ ಅಥವಾ ಮೊಸರಿನಲ್ಲಿ ಒಂದು ಹಿಡಿ ಬೆರ್ರಿ ಹಣ್ಣು ಹಾಕಿ ಸೇವಿಸಿ.

ಕಾಫಿ

ಹೌದು, ಕಾಫಿ ನಿಮ್ಮ ಲಿವರ್‌ಗೆ ನಿಜವಾದ ಸ್ನೇಹಿತ. ದಿನಕ್ಕೆ 2–3 ಕಪ್‌ ಬ್ಲ್ಯಾಕ್‌ ಕಾಫಿ ಕುಡಿಯುವವರಲ್ಲಿ ದೀರ್ಘಕಾಲದ ಲಿವರ್‌ ಕಾಯಿಲೆಯ ಅಪಾಯವು ಸುಮಾರು 20–49% ರಷ್ಟು ಕಡಿಮೆಯಾಗುತ್ತದೆ. ಕಾಫಿಯಲ್ಲಿರುವ ಬಯೋಆಕ್ಟಿವ್ ಸಂಯುಕ್ತಗಳು ಲಿವರ್‌ನಲ್ಲಿ ಉಂಟಾಗುವ ಹಾನಿಯನ್ನು ತಡೆಯುತ್ತವೆ. ಆದರೆ ಸಕ್ಕರೆ ಅಥವಾ ಹಾಲು ಸೇರಿಸದೇ ಬ್ಲ್ಯಾಕ್‌ ಕಾಫಿ ಸೇವಿಸುವುದೇ ಉತ್ತಮ.

ಒಂದು ಹಿಡಿ ನಟ್ಸ್‌ 

ಬಾದಾಮಿ, ವಾಲ್ನಟ್‌ ಮುಂತಾದ ನಟ್ಸ್‌ಗಳು ಲಿವರ್‌ಗಾಗಿ ಸೂಪರ್‌ಫುಡ್‌. ಇವುಗಳಲ್ಲಿ ಆರೋಗ್ಯಕರ ಕೊಬ್ಬು, ವಿಟಮಿನ್ E ಮತ್ತು ಆಂಟಿ–ಆಕ್ಸಿಡೆಂಟ್‌ಗಳು ಇದ್ದು ಲಿವರ್‌ನ ಉರಿಯೂತವನ್ನು ತಡೆಯುತ್ತವೆ. ಪ್ರತಿದಿನ ಬೆಳಿಗ್ಗೆ ಸುಮಾರು 28 ಗ್ರಾಂ ನಟ್ಸ್‌ ಸೇವಿಸುವ ಅಭ್ಯಾಸವು ಫ್ಯಾಟಿ ಲಿವರ್ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಶುದ್ಧ ನೈರ್ಮಲ್ಯ ಪಾಲನೆ

ಲಿವರ್‌ ಕಾಯಿಲೆಗಳಲ್ಲಿ ಹೆಪಟೈಟಿಸ್ A ಮತ್ತು B ವೈರಸ್‌ಗಳು ಪ್ರಮುಖ ಕಾರಣ. ಈ ವೈರಸ್‌ಗಳು ಕಳಪೆ ನೈರ್ಮಲ್ಯದಿಂದ ಹರಡುತ್ತವೆ. ಆದ್ದರಿಂದ ಬೆಳಿಗ್ಗೆ ಎದ್ದ ತಕ್ಷಣ ಮತ್ತು ಊಟದ ಮೊದಲು ಕೈಗಳನ್ನು ಕನಿಷ್ಠ 20 ಸೆಕೆಂಡ್‌ಗಳ ಕಾಲ ಸೋಪಿನಿಂದ ತೊಳೆಯುವ ಅಭ್ಯಾಸ ಬೆಳೆಸಿಕೊಳ್ಳಿ. ಶುದ್ಧ ನೀರು ಕುಡಿಯಿರಿ, ಅಡುಗೆ ಮಾಡುವ ಮೊದಲು ಮತ್ತು ಶೌಚಾಲಯದಿಂದ ಬಂದ ನಂತರ ಕೈ ತೊಳೆಯುವುದು ಮರೆಯಬೇಡಿ.

ಸಮತೋಲಿತ ಆಹಾರ ಮತ್ತು ಹೈಡ್ರೇಶನ್

ಲಿವರ್‌ ಆರೋಗ್ಯಕ್ಕಾಗಿ ಪೋಷಕಾಂಶಗಳಿಂದ ಸಮೃದ್ಧವಾದ ಆಹಾರ ಅಗತ್ಯ. ಹಣ್ಣು, ತರಕಾರಿ, ಸಂಪೂರ್ಣ ಧಾನ್ಯ, ಮತ್ತು ಕಡಿಮೆ ಕೊಬ್ಬಿನ ಪ್ರೋಟೀನ್‌ಗಳನ್ನು ನಿಮ್ಮ ಬೆಳಗಿನ ಆಹಾರದಲ್ಲಿ ಸೇರಿಸಿಕೊಳ್ಳಿ. ಸಂಸ್ಕರಿಸಿದ ಆಹಾರ, ಅತಿಯಾದ ಸಕ್ಕರೆ ಮತ್ತು ಆಲ್ಕೋಹಾಲ್‌ನಿಂದ ದೂರವಿರಿ. ಬೆಳಿಗ್ಗೆ ಎದ್ದ ತಕ್ಷಣ ಒಂದು ಗ್ಲಾಸ್‌ ಬಿಸಿ ನೀರು ಕುಡಿಯುವುದರಿಂದ ದೇಹದ ಡಿಟಾಕ್ಸಿಫಿಕೇಶನ್ ಪ್ರಕ್ರಿಯೆ ಸುಗಮವಾಗುತ್ತದೆ.

ಲಿವರ್ ಆರೋಗ್ಯ ನಿಮ್ಮ ದಿನದ ಆರಂಭದ ಮೇಲೆ ಅವಲಂಬಿತವಾಗಿದೆ. ವ್ಯಾಯಾಮ, ಪೌಷ್ಟಿಕ ಉಪಾಹಾರ, ಕಾಫಿಯಂತಹ ಸರಳ ಅಭ್ಯಾಸಗಳು ಮತ್ತು ನೈರ್ಮಲ್ಯ ಪಾಲನೆಯಿಂದ ನಿಮ್ಮ ಲಿವರ್‌ನ್ನು ಕಾಯ್ದುಕೊಳ್ಳಬಹುದು.

Exit mobile version