ಬೆಂಗಳೂರು: ದೇಶದ ಹಲವು ಭಾಗಗಳಲ್ಲಿ ಸದ್ಯ ಹವಾಮಾನದಲ್ಲಿ ತೀವ್ರ ಏರಿಳಿತಗಳು ಕಂಡುಬರುತ್ತಿವೆ. ಬೆಳಿಗ್ಗೆ ಸುಡುವ ಬಿಸಿಲು, ಸಂಜೆಯಾಗುತ್ತಿದ್ದಂತೆ ತಂಪಾದ ಗಾಳಿ ಹಾಗೂ ಅಲ್ಲಲ್ಲಿ ಬೀಳುತ್ತಿರುವ ಅಕಾಲಿಕ ಮಳೆಯಿಂದಾಗಿ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಈ ಬದಲಾಗುತ್ತಿರುವ ವಾತಾವರಣಕ್ಕೆ ದೇಹವು ಒಗ್ಗಿಕೊಳ್ಳುವ ಮೊದಲೇ ಅನೇಕರಲ್ಲಿ ಒಣ ಕೆಮ್ಮಿನ (Dry Cough) ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಧೂಳು, ಹೊಗೆ ಮತ್ತು ಹೆಚ್ಚುತ್ತಿರುವ ವಾಯು ಮಾಲಿನ್ಯವು ಈ ಸಮಸ್ಯೆಯನ್ನು ಇನ್ನಷ್ಟು ಹಚ್ಚಾಗಿಸುತ್ತಿದೆ.
ಒಣ ಕೆಮ್ಮು ಉಂಟಾಗಲು ಪ್ರಮುಖ ಕಾರಣಗಳೇನು ?
ವಾತಾವರಣದಲ್ಲಿನ ಸಣ್ಣ ಸಣ್ಣ ಧೂಳಿನ ಕಣಗಳು ಮತ್ತು ಅಲರ್ಜಿ ಕಾರಕಗಳು ಗಂಟಲನ್ನು ಪ್ರವೇಶಿಸಿದಾಗ ಒಣ ಕೆಮ್ಮು ಆರಂಭವಾಗುತ್ತದೆ. ರೋಗನಿರೋಧಕ ಶಕ್ತಿ (Immunity) ಕಡಿಮೆ ಇರುವವರಲ್ಲಿ ಈ ಸಮಸ್ಯೆ ತೀವ್ರವಾಗಿರುತ್ತದೆ. ಒಣ ಕೆಮ್ಮು ಎಂದರೆ ಕಫವಿಲ್ಲದ ಕೆಮ್ಮು, ಇದು ಗಂಟಲಿನಲ್ಲಿ ನಿರಂತರ ಕಚಗುಳಿಯಂತಹ ಅನುಭವ ನೀಡುತ್ತದೆ. ಕೆಮ್ಮು ದೀರ್ಘಕಾಲ ಮುಂದುವರಿದರೆ ಮಾತನಾಡಲು ಕಷ್ಟವಾಗುವುದು ಮಾತ್ರವಲ್ಲದೆ, ರಾತ್ರಿಯ ನಿದ್ರೆಗೂ ಭಂಗ ತರುತ್ತದೆ.
ಒಣ ಕೆಮ್ಮಿನ ಲಕ್ಷಣಗಳು
ಸಾಮಾನ್ಯವಾಗಿ ಒಣ ಕೆಮ್ಮು ಒಮ್ಮೆ ಕಾಣಿಸಿಕೊಂಡರೆ ವ್ಯಕ್ತಿಯ ಶಾರೀರಿಕ ಸ್ಥಿತಿಯ ಮೇಲೆ ಒಂದರಿಂದ ಎರಡು ವಾರಗಳ ಕಾಲ ಕಾಡಬಹುದು.
-
ಗಂಟಲಿನಲ್ಲಿ ಉರಿ ಅಥವಾ ಕರಕರೆ ಭಾವನೆ
-
ನಿರಂತರವಾಗಿ ಕೆಮ್ಮು ಬರುವುದು ಆದರೆ ಕಫ ಬಾರದಿರುವುದು
-
ರಾತ್ರಿ ಮಲಗುವಾಗ ಕೆಮ್ಮಿನ ತೀವ್ರತೆ ಹೆಚ್ಚಾಗುವುದು
-
ಗಂಟಲು ಒಣಗಿದಂತಾಗುವುದು ಮತ್ತು ಎದೆಯಲ್ಲಿ ಸಣ್ಣ ಪ್ರಮಾಣದ ಜಡತ್ವ
ಒಂದು ವೇಳೆ ಕೆಮ್ಮಿನ ಜೊತೆಗೆ ಜ್ವರ, ಉಸಿರಾಟದ ತೊಂದರೆ ಅಥವಾ ವಿಪರೀತ ಸುಸ್ತು ಕಾಣಿಸಿಕೊಂಡರೆ ನಿರ್ಲಕ್ಷಿಸದೆ ತಕ್ಷಣ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ.
ತಡೆಗಟ್ಟುವ ಪರಿಣಾಮಕಾರಿ ಮಾರ್ಗಗಳು
ಒಣ ಕೆಮ್ಮನ್ನು ನಿಯಂತ್ರಿಸಲು ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಕೆಲವು ಮುನ್ನೆಚ್ಚರಿಕೆ ಕ್ರಮಗಳು ಮತ್ತು ಜೀವನಶೈಲಿಯ ಬದಲಾವಣೆಗಳು ಅತ್ಯಗತ್ಯ:
-
ಹೈಡ್ರೇಶನ್: ದಿನಪೂರ್ತಿ ಸಾಕಷ್ಟು ಪ್ರಮಾಣದ ಉಗುರುಬೆಚ್ಚನೆಯ ನೀರನ್ನು ಕುಡಿಯಿರಿ. ಇದು ಗಂಟಲು ಒಣಗದಂತೆ ನೋಡಿಕೊಳ್ಳುತ್ತದೆ ಮತ್ತು ಕಿರಿಕಿರಿ ಕಡಿಮೆ ಮಾಡುತ್ತದೆ.
-
ಉಪ್ಪು ನೀರಿನ ಗಾರ್ಗ್ಲಿಂಗ್: ದಿನಕ್ಕೆ ಕನಿಷ್ಠ ಎರಡು ಬಾರಿ ಉಪ್ಪು ಬೆರೆಸಿದ ಬಿಸಿ ನೀರಿನಿಂದ ಗಂಟಲನ್ನು ಮುಕ್ಕಳಿಸುವುದು (Gargle) ಅತ್ಯಂತ ಹಳೆಯ ಮತ್ತು ಪರಿಣಾಮಕಾರಿ ವಿಧಾನ. ಇದು ಗಂಟಲಿನ ಸೋಂಕನ್ನು ಕಡಿಮೆ ಮಾಡುತ್ತದೆ.
-
ಬಿಸಿ ನೀರಿನ ಆವಿ: ಗಂಟಲು ಮತ್ತು ಶ್ವಾಸಕೋಶದ ಮಾರ್ಗವನ್ನು ಸುಗಮಗೊಳಿಸಲು ಬಿಸಿ ನೀರಿನ ಆವಿಯನ್ನು (Steam Inhalation) ತೆಗೆದುಕೊಳ್ಳಿ.
-
ಆಹಾರ ಕ್ರಮ: ರೋಗನಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್ ಸಿ ಸಮೃದ್ಧವಾಗಿರುವ ಹಣ್ಣುಗಳು, ಶುಂಠಿ ಟೀ, ಜೇನುತುಪ್ಪ ಮತ್ತು ತುಳಸಿ ಎಲೆಗಳ ಸೇವನೆ ಉತ್ತಮ. ತಣ್ಣನೆಯ ಪಾನೀಯಗಳು ಮತ್ತು ಐಸ್‌ಕ್ರೀಂನಿಂದ ದೂರವಿರಿ.
-
ಮಾಲಿನ್ಯದಿಂದ ರಕ್ಷಣೆ: ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದರಿಂದ ಧೂಳು ಮತ್ತು ಮಾಲಿನ್ಯಕಾರಕ ಕಣಗಳು ಗಂಟಲಿಗೆ ಹೋಗುವುದನ್ನು ತಡೆಯಬಹುದು.
ಸಣ್ಣ ಮುನ್ನೆಚ್ಚರಿಕೆಗಳು ನಿಮ್ಮನ್ನು ದೊಡ್ಡ ಆರೋಗ್ಯ ಸಮಸ್ಯೆಯಿಂದ ರಕ್ಷಿಸಬಲ್ಲವು. ಹವಾಮಾನಕ್ಕೆ ತಕ್ಕಂತೆ ನಿಮ್ಮ ಆಹಾರವನ್ನ ಸೇವಿಸಿ. ಈ ಮಾಹಿತಿ ಕೇವಕ ಮಾರ್ಗದರ್ಶನಕ್ಕಾಗಿ ಮಾತ್ರ ಹೆಚ್ಚಿನ ಕೆಮ್ಮು ಅಥವಾ ಇತರೆ ಆರೋಗ್ಯ ಸಮಸ್ಯೆಗಳಿದ್ದರೆ ಕೂಡಲೆ ವೈದ್ಯರನ್ನ ಸಂಪರ್ಕಿಸಿ.
