ಇಂದಿನ ಆಧುನಿಕ ಜೀವನಶೈಲಿಯಲ್ಲಿ ಅನಾರೋಗ್ಯ ಇಲ್ಲದವರೇ ಅಪರೂಪವೆನ್ನುವಂತಾಗಿದೆ. ದಿನಕ್ಕೊಂದು ಥೈರಾಯ್ಡ್ ಮಾತ್ರೆ, ಸಕ್ಕರೆ ಕಾಯಿಲೆಯ ಔಷಧಿ ಅಥವಾ ಇನ್ನಾವುದೇ ಹಾರ್ಮೋನ್ ಸಂಬಂಧಿತ ಮಾತ್ರೆಗಳನ್ನು ತಿನ್ನುವುದು ಸಾಮಾನ್ಯವಾಗಿಬಿಟ್ಟಿದೆ. ಹಾರ್ಮೋನುಗಳು ಏರುಪೇರಾದಾಗ ದೇಹದಲ್ಲಿ ಅಷ್ಟಿಷ್ಟು ಸಮಸ್ಯೆಗಳು ಉಂಟಾಗುವುದಿಲ್ಲ. ಒಂದು ಸಮಸ್ಯೆ ಮತ್ತೊಂದಕ್ಕೆ ಎಳೆದೊಯ್ಯುವಂತೆ ರೋಗಗಳ ಸರಪಳಿಯೇ ಸೃಷ್ಟಿಯಾಗುತ್ತದೆ. ಆದರೆ, ಇದಕ್ಕೆಲ್ಲಾ ಪರಿಹಾರವೇನು? ಸರಳವಾಗಿ ನಮ್ಮ ಆಹಾರವನ್ನು ಸುಧಾರಿಸುವುದೇ ಅತ್ಯುತ್ತಮ ಉತ್ತರ!
ಬೆಳಗಿನ ಉಪಹಾರವನ್ನು ಸರಿಯಾದ ರೀತಿಯಲ್ಲಿ ಸೇವಿಸಿದರೆ ದಿನವಿಡೀ ರಕ್ತದಲ್ಲಿ ಸಕ್ಕರೆಯ ಮಟ್ಟದ ಏರಿಳಿತವನ್ನು ನಿಯಂತ್ರಿಸಬಹುದು. ಇದರಿಂದ ಇನ್ಸುಲಿನ್ ಎಂಬ ಪ್ರಮುಖ ಹಾರ್ಮೋನಿನ ಮಟ್ಟ ಸಮತೋಲನದಲ್ಲಿರುತ್ತದೆ. ಹಾಗಾದರೆ, ಆರೋಗ್ಯಕರ ಬೆಳಗಿನ ತಿಂಡಿ ಹೇಗಿರಬೇಕು? ಅದರಲ್ಲಿ ಆರೋಗ್ಯಕರ ಕೊಬ್ಬು, ಪ್ರೊಟೀನ್, ಸಂಕೀರ್ಣ ಪಿಷ್ಟಗಳು, ನಾರು, ವಿಟಮಿನ್ ಮತ್ತು ಮಿನರಲ್ಗಳ ಸಮತೋಲನ ಇರಬೇಕು.
ಹಾರ್ಮೋನ್ ಸಮತೋಲನಕ್ಕೆ ಬೇಕಾದ 5 ಪ್ರಮುಖ ಆಹಾರಗಳು
1. ಪ್ರೊಟೀನ್ ಭರಿತ ಆಹಾರಗಳು
ಹಾರ್ಮೋನುಗಳ ಸ್ರವಿಸುವಿಕೆಗೆ ಅಗತ್ಯವಾದ ಅಮೈನೋ ಆಮ್ಲಗಳು ಪ್ರೊಟೀನ್ಗಳಿಂದಲೇ ದೊರೆಯುತ್ತವೆ. ನಮಗೆ ಬೇಕಾದ 9 ಬಗೆಯ ಅಮೈನೋ ಆಮ್ಲಗಳನ್ನು ದೇಹವು ತನ್ನಷ್ಟಕ್ಕೇ ಉತ್ಪಾದಿಸಲಾರದು. ಅವುಗಳನ್ನು ಆಹಾರದ ಮೂಲಕವೇ ಪೂರೈಸಬೇಕು. ಮೊಟ್ಟೆ, ಗ್ರೀಕ್ ಮೊಸರು, ಕಿನೋವಾ, ಸೋಯಾ, ಮೀನು ಮತ್ತು ಕೋಳಿಮಾಂಸ – ಇವು ಪ್ರೊಟೀನ್ನ ಅತ್ಯುತ್ತಮ ಮೂಲಗಳು. ಬೆಳಗಿನ ಹೊತ್ತು ಇವನ್ನು ಸೇವಿಸಿದರೆ ದೇಹಕ್ಕೆ ಬೇಕಾದ ಶಕ್ತಿ ದೊರೆಯುತ್ತದೆ.
2. ಆರೋಗ್ಯಕರ ಕೊಬ್ಬುಗಳು
ಹಾರ್ಮೋನುಗಳ ಉತ್ಪಾದನೆಗೆ ಆರೋಗ್ಯಕರ ಕೊಬ್ಬು ಅತ್ಯಗತ್ಯ. ಆವಕಾಡೊ (ಬೆಣ್ಣೆ ಹಣ್ಣು), ಬಾದಾಮಿ, ವಾಲ್ನಟ್, ಅಗಸೆಬೀಜ, ಚಿಯಾ ಬೀಜಗಳು, ಕೊಬ್ಬರಿ ಮತ್ತು ಆಲಿವ್ ಎಣ್ಣೆಗಳು ಉತ್ತಮ ಕೊಬ್ಬಿಗೆ ಉದಾಹರಣೆಗಳು. ಇವು ರುಚಿಯಲ್ಲಿ ಮಾತ್ರವಲ್ಲದೆ, ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸಿ, ದೇಹಕ್ಕೆ ಶಕ್ತಿಯನ್ನು ಒದಗಿಸಿ, ಜೀರ್ಣಾಂಗಗಳ ಸಾಮರ್ಥ್ಯವನ್ನು ವೃದ್ಧಿಸುತ್ತವೆ.
3. ಸಂಕೀರ್ಣ ಪಿಷ್ಟಗಳು ಮತ್ತು ನಾರು
ನಾರಿನಂಶವಿರುವ ಆಹಾರಗಳು ಇನ್ಸುಲಿನ್ನಂಥ ಹಾರ್ಮೋನುಗಳನ್ನು ನಿಯಂತ್ರಣದಲ್ಲಿಡುತ್ತವೆ. ವಿವಿಧ ಬಣ್ಣಗಳ ತರಕಾರಿಗಳು ಮತ್ತು ಹಣ್ಣುಗಳು ಉತ್ಕರ್ಷಣ ನಿರೋಧಕಗಳು ಮತ್ತು ನಾರಿನಂಶವನ್ನು ಒದಗಿಸುತ್ತವೆ. ಓಟ್ಸ್, ಬ್ರೌನ್ ರೈಸ್, ಕ್ವಿನೋವಾ, ರಾಗಿ, ಗೋಧಿ, ಕಡಲೆಕಾಯಿ, ಬೀನ್ಸ್ – ಇವು ಸಂಕೀರ್ಣ ಪಿಷ್ಟಗಳಿಗೆ ಉತ್ತಮ ಉದಾಹರಣೆಗಳು.
4. ಸಾಕಷ್ಟು ನೀರು
ದೇಹದಲ್ಲಿ ನೀರಿನ ಕೊರತೆಯಾದರೆ ಹಾರ್ಮೋನುಗಳ ಸ್ರವಿಸುವಿಕೆಯಲ್ಲಿ ತೀವ್ರ ಏರಿಳಿತವಾಗುತ್ತದೆ. ವಿಶೇಷವಾಗಿ ಎಂಡೋಕ್ರೈನ್ ಗ್ರಂಥಿಗಳ ಮೇಲೆ ನಿರ್ಜಲೀಕರಣವು ತೀವ್ರ ಪರಿಣಾಮ ಬೀರುತ್ತದೆ. ದಿನದ ಆರಂಭಕ್ಕೆ ಒಂದು ಲೋಟ ಬೆಚ್ಚಗಿನ ನೀರು ಕುಡಿಯಿರಿ. ದಿನವಿಡೀ ಕನಿಷ್ಠ 8-10 ಗ್ಲಾಸು ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ.
5. ಮೈಂಡ್ಫುಲ್ ಈಟಿಂಗ್ (ಸಾವಧಾನಿಕ ಆಹಾರ)
ನಾವು ತಿನ್ನುವಾಗ ಏನು ತಿನ್ನುತ್ತಿದ್ದೇವೆ, ಅದರ ರುಚಿ, ಬಣ್ಣ, ಘಮ, ಎಷ್ಟು ತಿನ್ನುತ್ತಿದ್ದೇವೆ, ಅಷ್ಟು ಸಾಕೇ ಎಂಬ ಪ್ರಶ್ನೆಗಳಿಗೆ ಉತ್ತರಿಸಬೇಕು. ಸಾವಧಾನದಿಂದ, ಶ್ರದ್ಧೆಯಿಂದ ಊಟ ಮಾಡಿದಾಗ ಆಹಾರವು ಸರಿಯಾಗಿ ಜೀರ್ಣವಾಗಿ ಹಾರ್ಮೋನುಗಳ ಸಮತೋಲನಕ್ಕೆ ಸಹಾಯಕವಾಗುತ್ತದೆ.
