ನಾವು ಮುಖದ ಸೌಂದರ್ಯವನ್ನು ಹೆಚ್ಚಿಸಲು ಹಲವಾರು ಸೌಂದರ್ಯವರ್ಧಕಗಳನ್ನು ಬಳಸುತ್ತೇವೆ. ಆದರೆ ತುಟಿಗಳ ಕಾಳಜಿಯ ಬಗ್ಗೆ ಸಾಮಾನ್ಯವಾಗಿ ಮರೆತುಬಿಡುತ್ತೇವೆ. ಇದರಿಂದಾಗಿ ಹೆಚ್ಚಿನವರ ತುಟಿಗಳು ಕಪ್ಪಾಗಿ ಕಾಣಿಸುತ್ತವೆ. ತುಟಿಗಳ ಸೌಂದರ್ಯವು ಮುಖದ ಒಟ್ಟಾರೆ ಆಕರ್ಷಣೆಯನ್ನು ಹೆಚ್ಚಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಮುಖಕ್ಕೆ ಯಾವುದೇ ಮೇಕಪ್ ಅಥವಾ ಪೌಡರ್ ಬಳಸಿದರೂ, ತುಟಿಗಳಿಗೆ ಹಚ್ಚುವ ಲಿಪ್‌ಸ್ಟಿಕ್‌ನಿಂದಲೇ ಮುಖದ ಆಕರ್ಷಣೆಯು ಗಮನಾರ್ಹವಾಗಿ ಹೆಚ್ಚುತ್ತದೆ. ಆದ್ದರಿಂದ ತುಟಿಗಳನ್ನು ಆರೋಗ್ಯಕರವಾಗಿ ಮತ್ತು ಆಕರ್ಷಕವಾಗಿಡಲು ವಿಶೇಷ ಕಾಳಜಿಯ ಅಗತ್ಯವಿದೆ.
ಒಂದುವೇಳೆ ತುಟಿಗಳ ಚರ್ಮ ಕಪ್ಪಾಗಲು ಪ್ರಾರಂಭಿಸಿದರೆ ಅದು ಮುಖದ ಒಟ್ಟಾರೆ ನೋಟದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.ಕಪ್ಪು ತುಟಿಗಳಿಂದಾಗಿ ಮುಖದ ಸೌಂದರ್ಯ ಕಡಿಮೆಯಾಗಬಹುದು. ಹೆಚ್ಚಿನ ಮಹಿಳೆಯರು ಮತ್ತು ಪುರುಷರು ತುಟಿಗಳನ್ನು ಲಿಪ್ ಬಾಮ್ ಅಥವಾ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ, ಇವುಗಳಿಂದ ಕೆಲವೊಮ್ಮೆ ಅಡ್ಡಪರಿಣಾಮಗಳು ಉಂಟಾಗಬಹುದು ಎಂದು ಸೌಂದರ್ಯ ತಜ್ಞರು ಎಚ್ಚರಿಕೆ ನೀಡುತ್ತಾರೆ. ಆದ್ದರಿಂದ, ರಾಸಾಯನಿಕ ಉತ್ಪನ್ನಗಳಿಗಿಂತ ನೈಸರ್ಗಿಕ ಪರಿಹಾರಗಳನ್ನು ಅಳವಡಿಸಿಕೊಳ್ಳುವುದು ಉತ್ತಮ.
ತುಟಿಗಳು ಕಪ್ಪಾಗಲು ಕಾರಣಗಳು
ತುಟಿಗಳ ಬಣ್ಣ ಕಪ್ಪಾಗಲು ಹಲವು ಕಾರಣಗಳಿವೆ:
- ಅತಿಯಾದ ಧೂಮಪಾನ: ಧೂಮಪಾನವು ತುಟಿಗಳ ಚರ್ಮವನ್ನು ಕಪ್ಪಾಗಿಸುತ್ತದೆ.
- ಪೌಷ್ಟಿಕಾಂಶದ ಕೊರತೆ: ಸರಿಯಾದ ಆಹಾರದ ಕೊರತೆಯಿಂದ ತುಟಿಗಳ ಆರೋಗ್ಯ ಕೆಡುತ್ತದೆ.
- ಹಾರ್ಮೋನ್‌ಗಳ ಅಸಮತೋಲನ: ದೇಹದಲ್ಲಿ ಹಾರ್ಮೋನ್‌ಗಳ ಅಸಮತೋಲನವೂ ತುಟಿಗಳ ಬಣ್ಣದ ಮೇಲೆ ಪರಿಣಾಮ ಬೀರುತ್ತದೆ.
- ಔಷಧಿಗಳ ಅಡ್ಡಪರಿಣಾಮ: ಕೆಲವು ಔಷಧಿಗಳು ತುಟಿಗಳ ಕಪ್ಪು ಬಣ್ಣಕ್ಕೆ ಕಾರಣವಾಗಬಹುದು.
- ಅತಿಯಾದ ಲಿಪ್‌ಸ್ಟಿಕ್ ಬಳಕೆ: ರಾಸಾಯನಿಕ ಲಿಪ್‌ಸ್ಟಿಕ್‌ಗಳನ್ನು ದೀರ್ಘಕಾಲ ಬಳಸುವುದರಿಂದ ತುಟಿಗಳ ಚರ್ಮಕ್ಕೆ ಹಾನಿಯಾಗಬಹುದು.
ಈ ಸಮಸ್ಯೆಗಳನ್ನು ತಡೆಗಟ್ಟಲು ಆರೋಗ್ಯಕರ ಜೀವನಶೈಲಿ, ಸಮತೋಲನ ಆಹಾರ ಮತ್ತು ತುಟಿಗಳ ಸರಿಯಾದ ಆರೈಕೆಯನ್ನು ಅಳವಡಿಸಿಕೊಳ್ಳಬೇಕು. ಗಾಢವಾದ ತುಟಿಗಳನ್ನು ಗುಲಾಬಿ ಬಣ್ಣಕ್ಕೆ ತಿರುಗಿಸಲು ಕೆಲವು ಸರಳ ಮನೆ ಮದ್ದುಗಳನ್ನು ಪ್ರಯತ್ನಿಸಬಹುದು. ಇವು ನೈಸರ್ಗಿಕವಾಗಿದ್ದು, ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು.
ಕಪ್ಪು ತುಟಿಗಳಿಗೆ ಸರಳ ಮನೆ ಮದ್ದುಗಳು
-
ಸಕ್ಕರೆ, ನಿಂಬೆ ಮತ್ತು ಆಲಿವ್ ಎಣ್ಣೆಯ ಪೇಸ್ಟ್
1-2 ಚಮಚ ಸಕ್ಕರೆಗೆ ಕೆಲವು ಹನಿ ನಿಂಬೆ ರಸ ಮತ್ತು ಒಂದು ಚಮಚ ಆಲಿವ್ ಎಣ್ಣೆ ಸೇರಿಸಿ ಪೇಸ್ಟ್ ತಯಾರಿಸಿ.ಈ ಪೇಸ್ಟ್ ಅನ್ನು ತುಟಿಗಳ ಮೇಲೆ ಹಚ್ಚಿ, ಕೈಬೆರಳುಗಳಿಂದ ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಅರ್ಧಗಂಟೆ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.ಇದು ತುಟಿಗಳ ಡೆಡ್ ಸ್ಕಿನ್ ತೆಗೆದು ಕಪ್ಪು ಬಣ್ಣವನ್ನು ಕ್ರಮೇಣ ಕಡಿಮೆ ಮಾಡುತ್ತದೆ.
-
ಅಲೋವೆರಾ ಜೆಲ್
ರಾತ್ರಿ ಮಲಗುವ ಮುನ್ನ ತುಟಿಗಳಿಗೆ ಅಲೋವೆರಾ ಜೆಲ್ ಹಚ್ಚಿ, ರಾತ್ರಿಯಿಡೀ ಬಿಡಿ. ಈ ಅಭ್ಯಾಸವನ್ನು ಕೆಲವು ವಾರಗಳವರೆಗೆ ಮುಂದುವರೆಸಿದರೆ, ತುಟಿಗಳು ಗುಲಾಬಿ ಬಣ್ಣಕ್ಕೆ ತಿರುಗುವುದರಜೊತೆಗೆ ಆಕರ್ಷಕವಾಗುತ್ತವೆ.ಇದು ಶುಷ್ಕತೆಯನ್ನು ತಡೆಗಟ್ಟಿ, ತುಟಿಗಳ ಕಾಂತಿಯನ್ನು ಹೆಚ್ಚಿಸುತ್ತದೆ.
-
ರೋಸ್ ವಾಟರ್
ಗುಲಾಬಿ ನೀರನ್ನು ಹತ್ತಿಯ ಸಹಾಯದಿಂದ ತುಟಿಗಳಿಗೆ ಹಚ್ಚಿ, 2-3 ನಿಮಿಷಗಳ ನಂತರ ತೊಳೆಯಿರಿ.ರೋಸ್ ವಾಟರ್ ಹೈಪರ್ ಪಿಗ್ಮೆಂಟೇಶನ್ ಕಡಿಮೆ ಮಾಡಿ, ತುಟಿಗಳ ನೈಸರ್ಗಿಕ ಬಣ್ಣವನ್ನು ಕಾಪಾಡುತ್ತದೆ.
-
ಆಲಿವ್ ಎಣ್ಣೆ ಮತ್ತು ಸಕ್ಕರೆ ಸ್ಕ್ರಬ್
ಒಂದು ಚಮಚ ಆಲಿವ್ ಎಣ್ಣೆಗೆ ಒಂದು ಚಮಚ ಸಕ್ಕರೆ ಬೆರೆಸಿ ತುಟಿಗಳಿಗೆ ಸ್ಕ್ರಬ್ ಮಾಡಿ.ವಾರಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸಿದರೆ, ತುಟಿಗಳ ಕಪ್ಪು ಬಣ್ಣ ಕಡಿಮೆಯಾಗಿ, ಮೃದುತ್ವ ಹೆಚ್ಚುತ್ತದೆ.
-
ಬೀಟ್ರೂಟ್ ರಸ
ಬೀಟ್ರೂಟ್ ರಸ ಅಥವಾ ಪೇಸ್ಟ್ ಅನ್ನು ತುಟಿಗಳಿಗೆ 15-20 ನಿಮಿಷಗಳ ಕಾಲ ಹಚ್ಚಿ, ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ.ಇದು ತುಟಿಗಳಿಗೆ ಗುಲಾಬಿ ಬಣ್ಣವನ್ನು ತಂದುಕೊಡುತ್ತದೆ.
-
ತೆಂಗಿನ ಎಣ್ಣೆ
ಪ್ರತಿದಿನ ರಾತ್ರಿ ತೆಂಗಿನ ಎಣ್ಣೆಯಿಂದ ತುಟಿಗಳಿಗೆ ಲಘುವಾಗಿ ಮಸಾಜ್ ಮಾಡಿ.ಇದು ತುಟಿಗಳಿಗೆ ನೈಸರ್ಗಿಕ ತೇವಾಂಶವನ್ನು ಒದಗಿಸುತ್ತದೆ ಮತ್ತು ಕೆಲವೇ ದಿನಗಳಲ್ಲಿ ಗುಲಾಬಿ ಹೊಳಪನ್ನು ತರುತ್ತದೆ.
-
ಬಾದಾಮಿ ಎಣ್ಣೆ ಮತ್ತು ಜೇನುತುಪ್ಪ
ವಿಟಮಿನ್-ಇ ಸಮೃದ್ಧವಾದ ಬಾದಾಮಿ ಎಣ್ಣೆಗೆ ಜೇನುತುಪ್ಪ ಬೆರೆಸಿ ತುಟಿಗಳಿಗೆ ಹಚ್ಚಿಇದು ತುಟಿಗಳ ಬಣ್ಣವನ್ನು ತಿಳಿಗೊಳಿಸುತ್ತದೆ ಮತ್ತು ಮೃದುತ್ವವನ್ನು ತರುತ್ತದೆ.
ಇತರ ಸಲಹೆಗಳು
- ಸಾಕಷ್ಟು ನೀರು ಕುಡಿಯಿರಿ: ತುಟಿಗಳನ್ನು ಒಳಗಿನಿಂದ ತೇವಾಂಶಯುಕ್ತವಾಗಿಡಲು ದಿನಕ್ಕೆ ಸಾಕಷ್ಟು ನೀರು, ಜೊತೆಗೆ ತೆಂಗಿನಕಾಯಿ ನೀರು ಅಥವಾ ರಸ ಕುಡಿಯಿರಿ.
- ತುಟಿಗಳನ್ನು ನೆಕ್ಕಬೇಡಿ: ತುಟಿಗಳನ್ನು ಪದೇ ಪದೇ ಮುಟ್ಟಬೇಡಿ,ಮುಟ್ಟುವುದರಿಂದ ಸೂಷ್ಕತೆ ಮತ್ತು ಕಪ್ಪು ಬಣ್ಣ ಉಂಟಾಗಬಹುದು. ಒಣಗಿದ ತುಟಿಗಳಿಗೆ ನೈಸರ್ಗಿಕ ಲಿಪ್ ಬಾಮ್ ಬಳಸಿ.
- ಆರೋಗ್ಯಕರ ಆಹಾರ: ಪೌಷ್ಟಿಕ ಆಹಾರವನ್ನು ಸೇವಿಸಿ, ವಿಶೇಷವಾಗಿ ವಿಟಮಿನ್-ಸಿ ಮತ್ತು ಇ ಯುಕ್ತ ಆಹಾರಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ.