ಶಂಖಪುಷ್ಪ ಚಹಾದಲ್ಲಿದೆ ಅಚ್ಚರಿಯ ಗುಣಗಳು: ಚಳಿಗಾಲದಲ್ಲಿ ನಿಮ್ಮ ಆರೋಗ್ಯ ರಕ್ಷಕ

Untitled design 2025 11 12T071616.368

ನಮ್ಮ ಮನೆಯ ಅಂಗಳ, ಬಾಲ್ಕನಿ, ಅಥವಾ ಟೆರೆಸ್‌ನಲ್ಲೇ ಬೆಳೆದಿರುವ ಗಿಡಗಳಲ್ಲಿ ಅನೇಕ ಔಷಧೀಯ ಗುಣಗಳು ಅಡಗಿವೆ. ಅವುಗಳಲ್ಲಿ ಪ್ರಮುಖವಾದದ್ದು ಶಂಖಪುಷ್ಪ (Clitoria ternatea) ಗಿಡ ಒಂದು. ಈ ನೇರಳೆ ಬಣ್ಣದ ಸುಂದರ ಹೂವು ಕೆಲವೆಡೆ ಒಂದೇ ಎಸಳು, ಕೆಲವೆಡೆ ಸುರುಳಿಯಾದ ಹಲವು ಎಸಳುಗಳಿಂದ ಕೂಡಿರುತ್ತದೆ.

ಏಷ್ಯಾ ಖಂಡದ ಈ ಸಸ್ಯ, ಭಾರತೀಯ ಆಯುರ್ವೇದ ಮತ್ತು ಚೀನೀ ವೈದ್ಯಶಾಸ್ತ್ರಗಳಲ್ಲಿ ಪ್ರಾಚೀನ ಕಾಲದಿಂದಲೇ ಬಳಕೆಯಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಇದರ ಹೂಗಳಿಂದ ತಯಾರಾಗುವ ‘ಬ್ಲೂ ಟೀ’ ಅಥವಾ ಶಂಖಪುಷ್ಪ ಚಹಾ ವಿಶ್ವದಾದ್ಯಂತ ಜನಪ್ರಿಯವಾಗಿದೆ. ಕಣ್ಣಿಗೆ ಕಣ್ತುಂಬು ನೇರಳೆ ಬಣ್ಣದ ಈ ಚಹಾ ಕೇವಲ ಸುಂದರವಲ್ಲ, ಆರೋಗ್ಯದ ಖಜಾನೆಯೂ ಹೌದು. ವಿಶೇಷವಾಗಿ ಚಳಿ-ಮಳೆಯ ಕಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವನ್ನು ಚುರುಕುಗೊಳಿಸುತ್ತದೆ.

ಮೆದುಳಿನ ಶಕ್ತಿವರ್ಧಕ

ಶಂಖಪುಷ್ಪವನ್ನು “ಮೆದುಳಿನ ಚೋದಕ” ಎಂದು ಕರೆಯುತ್ತಾರೆ. ಇದು ನೆನಪಿನ ಶಕ್ತಿ ಹೆಚ್ಚಿಸಿ, ಮನೋಭಾವ ಸುಧಾರಿಸಿ, ಒತ್ತಡ ಮತ್ತು ಖಿನ್ನತೆಯನ್ನು ತಗ್ಗಿಸುತ್ತದೆ. ಆಯುರ್ವೇದ ಪರಿಣಿತರ ಪ್ರಕಾರ ಇದು ಅಲ್‌ಜೈಮರ್ಸ್‌ ರೋಗದ ವಿರುದ್ಧ ಸಹಾಯಕರಾಗಬಹುದು ಎಂಬುದಾಗಿ ಸಂಶೋಧನೆಗಳು ಸೂಚಿಸುತ್ತಿವೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಈ ಹೂವಿನಲ್ಲಿ ಅಡಗಿರುವ ಆಂಥೋಸಯನಿನ್‌ಗಳು ಅತ್ಯಂತ ಶಕ್ತಿಶಾಲಿ ಆಂಟಿಆಕ್ಸಿಡೆಂಟ್‌ಗಳು. ಇವು ದೇಹದ ಉರಿಯೂತ, ಕೀಲುನೋವುಗಳನ್ನು ಶಮನಗೊಳಿಸುತ್ತವೆ. ನಿಯಮಿತ ಸೇವನೆಯಿಂದ ದೇಹದ ರಕ್ಷಣಾ ಶಕ್ತಿಯನ್ನು ವೃದ್ಧಿಸಿ, ಕ್ಯಾನ್ಸರ್‌ನಂತಹ ಗಂಭೀರ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.

ಮಧುಮೇಹಿಗಳಿಗೆ ಉತ್ತಮ

ಶಂಖಪುಷ್ಪ ಹೂವಿನ ಚಹಾದಲ್ಲಿ ಇರುವ ಹೈಪೋಗ್ಲೈಸೆಮಿಕ್‌ ಗುಣಗಳು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿ. ಜೊತೆಗೆ ಯಕೃತ್ತಿನ ಆರೋಗ್ಯವನ್ನೂ ಕಾಪಾಡುತ್ತದೆ. ದೇಹದಲ್ಲಿ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿಯೂ ಇದಕ್ಕಿದೆ.

ಶ್ವಾಸಕೋಶಕ್ಕೆ ಶಕ್ತಿ

ಚಳಿಗಾಲದ ಕೆಮ್ಮು, ನೆಗಡಿ, ಅಸ್ತಮಾ ಮುಂತಾದ ಸಮಸ್ಯೆಗಳಿಗೆ ಈ ನೀಲಿ ಚಹಾ ಸಹಜ ಪರಿಹಾರ. ಶಂಖಪುಷ್ಪವು ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಸುಧಾರಿಸಿ, ದೇಹದ ನಿಶ್ಶಕ್ತಿಯನ್ನು ಹೋಗಲಾಡಿಸುತ್ತದೆ. ನಿಯಮಿತವಾಗಿ ಈ ಚಹಾ ಕುಡಿಯುವುದರಿಂದ ಶ್ವಾಸಕೋಶ ಬಲಿಷ್ಠವಾಗುತ್ತದೆ.

ಕಣ್ಣಿನ ಆರೈಕೆ

ಈ ಹೂವಿನಲ್ಲಿ ಇರುವ ಆಂಥೋಸಯನಿನ್‌ಗಳು ಕಣ್ಣಿನ ಭಾಗಕ್ಕೆ ರಕ್ತಸಂಚಾರವನ್ನು ಹೆಚ್ಚಿಸುತ್ತವೆ. ಇದರಿಂದ ದೃಷ್ಟಿ ಮಂದವಾಗುವುದು, ಕಣ್ಣುಗಳ ಆಯಾಸ, ಅಥವಾ ರೆಟಿನಾ ಹಾನಿ ಮೊದಲಾದ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ. ದಿನದ ಒತ್ತಡದ ಕೆಲಸದ ನಂತರ ಈ ಚಹಾ ಕುಡಿಯುವುದರಿಂದ ಕಣ್ಣುಗಳಿಗೆ ವಿಶ್ರಾಂತಿ ದೊರೆಯುತ್ತದೆ.

ಜ್ವರ-ನೋವಿಗೆ ನೈಸರ್ಗಿಕ ಪರಿಹಾರ

ಶಂಖಪುಷ್ಪ ಹೂವಿನ ಚಹಾವನ್ನು ನೈಸರ್ಗಿಕ ಪ್ಯಾರಾಸೆಟಮಾಲ್‌ ಎಂದೇ ಕರೆಯುತ್ತಾರೆ. ಜ್ವರ ಅಥವಾ ಮೈಕೈ ನೋವಿನ ಸಂದರ್ಭದಲ್ಲಿ ಇದು ಆರಾಮ ನೀಡುತ್ತದೆ. ದೇಹದ ರಕ್ತಸಂಚಾರವನ್ನು ಸುಧಾರಿಸಿ, ಶಕ್ತಿ ಪುನಃ ತುಂಬುತ್ತದೆ. ಗಂಭೀರ ಆರೋಗ್ಯ ಸಮಸ್ಯೆಗಳಿಗಾಗಿ ವೈದ್ಯಕೀಯ ಸಲಹೆ ಅಗತ್ಯ.

ಈ ಸರಳ ಗಿಡದಲ್ಲಿ ಅಡಗಿರುವ ಔಷಧೀಯ ಶಕ್ತಿ ಅಚ್ಚರಿ ಹುಟ್ಟಿಸುತ್ತದೆ. ಚಳಿ-ಮಳೆಯ ದಿನಗಳಲ್ಲಿ ಶಂಖಪುಷ್ಪ ಹೂವಿನ ಚಹಾವನ್ನು ದಿನನಿತ್ಯ ಅಳವಡಿಸಿಕೊಂಡರೆ ಆರೋಗ್ಯವೂ ಸೌಂದರ್ಯವೂ ಎರಡೂ ಕೈಯಲ್ಲಿ ಸಿಗುತ್ತವೆ. ಆದರೆ ಗರ್ಭಿಣಿಯರು ಅಥವಾ ಔಷಧ ಸೇವಿಸುತ್ತಿರುವವರು ವೈದ್ಯರ ಸಲಹೆ ಪಡೆದು ಮಾತ್ರ ಉಪಯೋಗಿಸುವುದು ಒಳಿತು.

Exit mobile version