ಬೆಂಗಳೂರು: ನಾಳೆ ಏನಾಗುತ್ತದೋ ಎನ್ನುವುದು ಇಂದು ರಾತ್ರಿ ನೀವು ಏನು ಮಾಡುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿದೆ. ಇದು ಕೇವಲ ಮಾತಲ್ಲ, ವೈಜ್ಞಾನಿಕ ಸತ್ಯ. ಆಧುನಿಕ ಜೀವನಶೈಲಿಯಲ್ಲಿ ನಾವು ಬೆಳಗಿನಿಂದ ಸಂಜೆಯವರೆಗೆ ಓಡುತ್ತಲೇ ಇರುತ್ತೇವೆ. ಆದರೆ, ರಾತ್ರಿ ಮಲಗುವ ಮುನ್ನ ಅನುಸರಿಸುವ ಕೆಲವು ಸರಳ ನಿಯಮಗಳು ನಮ್ಮ ಯಶಸ್ಸು, ಆರೋಗ್ಯ ಮತ್ತು ನೆಮ್ಮದಿಯನ್ನು ದುಪ್ಪಟ್ಟುಗೊಳಿಸಬಲ್ಲವು. ತಜ್ಞರು ಶಿಫಾರಸು ಮಾಡುವ ಕೆಲವು ಪ್ರಮುಖ ಬದಲಾವಣೆಗಳು ಇಲ್ಲಿವೆ:
1. ಮೊಬೈಲ್, ಲ್ಯಾಪ್‌ಟಾಪ್‌ನಿಂದ ದೂರವಿರಿ
ಮಲಗುವ ಕನಿಷ್ಠ 30 ನಿಮಿಷಗಳ ಮೊದಲು ಮೊಬೈಲ್, ಟಿವಿ ಮತ್ತು ಲ್ಯಾಪ್‌ಟಾಪ್‌ಗಳನ್ನು ದೂರವಿಡಿ. ಇವುಗಳಿಂದ ಹೊರಬರುವ ‘ಬ್ಲೂ ಲೈಟ್’ ನಮ್ಮ ಮೆದುಳಿನಲ್ಲಿ ನಿದ್ರೆ ತರಿಸುವ ‘ಮೆಲಟೋನಿನ್’ ಹಾರ್ಮೋನ್ ಉತ್ಪಾದನೆಯನ್ನು ಕುಂಠಿತಗೊಳಿಸುತ್ತದೆ. ಇದರಿಂದ ನಿದ್ರಾಹೀನತೆ ಉಂಟಾಗುತ್ತದೆ. ಬದಲಿಗೆ, ನಿಮ್ಮಿಷ್ಟದ ಓಮದು ಪುಸ್ತಕ ಓದುವುದು ಅಥವಾ ಲಘು ಸಂಗೀತ ಕೇಳುವುದು ಮೆದುಳಿಗೆ ಪೂರ್ಣ ವಿಶ್ರಾಂತಿ ನೀಡುತ್ತದೆ.
2. ನಾಳೆಯ ಯೋಜನೆ
ಮಲಗುವ ಮುನ್ನ 5 ನಿಮಿಷ ಬೆಳಗ್ಗೆಯಿಂದ ನಡೆದ ಘಟನೆಗಳನ್ನು ಮೆಲುಕು ಹಾಕಿ. ನೀವು ಮಾಡಿದ ಸಾಧನೆ, ಎದುರಿಸಿದ ಸವಾಲು ಮತ್ತು ಕಲಿತ ಪಾಠಗಳ ಬಗ್ಗೆ ಯೋಚಿಸಿ. ನಂತರ, ಮರುದಿನ ಮಾಡಬೇಕಾದ ಪ್ರಮುಖ ಕೆಲಸಗಳ ಪಟ್ಟಿಯನ್ನು (To-Do List) ಸಿದ್ಧಪಡಿಸಿ. ಇದರಿಂದ ಬೆಳಿಗ್ಗೆ ಎದ್ದ ತಕ್ಷಣ ಯಾವುದೇ ಗೊಂದಲವಿಲ್ಲದೆ ಕೆಲಸ ಆರಂಭಿಸಬಹುದು. ಇದು ನಿಮ್ಮ ಟೈಮ್ ಮ್ಯಾನೇಜ್‌ಮೆಂಟ್ ಕೌಶಲ್ಯವನ್ನು ಹೆಚ್ಚಿಸುತ್ತದೆ.
3. ಹಗುರವಾದ ಆಹಾರ
ಆರೋಗ್ಯಕರ ಜೀವನಕ್ಕೆ ರಾತ್ರಿ ಊಟ ಹಗುರವಾಗಿರಲಿ. ಮಲಗುವ ಕನಿಷ್ಠ 2 ಗಂಟೆಗಳ ಮೊದಲು ಆಹಾರ ಸೇವಿಸುವುದು ಜೀರ್ಣಕ್ರಿಯೆಗೆ ಪೂರಕ. ಮಲಗುವ ಸಮಯವನ್ನು ಪ್ರತಿದಿನ ಒಂದೇ ರೀತಿ ಕಾಯ್ದುಕೊಳ್ಳಿ. ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯವರೆಗಿನ ನಿದ್ರೆ ದೇಹದ ಬಾಡಿ ಕ್ಲಾಕ್ ಅನ್ನು ಸರಿಪಡಿಸುತ್ತದೆ, ಇದರಿಂದ ದಿನವಿಡೀ ನೀವು ಆಕ್ಟಿವ್ ಆಗಿರಬಹುದು.
4. ಧ್ಯಾನ ಮತ್ತು ಉಸಿರಾಟದ ವ್ಯಾಯಾಮ
ಇಡೀ ದಿನದ ಒತ್ತಡವನ್ನು ಹೊರಹಾಕಲು 5 ನಿಮಿಷದ ಧ್ಯಾನ ಮಾಡುವುದು ಉತ್ತಮ. ದೀರ್ಘವಾಗಿ ಉಸಿರಾಡುವುದರಿಂದ ಮೆದುಳಿಗೆ ಆಮ್ಲಜನಕದ ಪೂರೈಕೆಯಾಗಿ ಆತಂಕ ಕಡಿಮೆಯಾಗುತ್ತದೆ. ಇದು ಶಾಂತವಾದ ಮತ್ತು ಆಳವಾದ ನಿದ್ರೆಗೆ ಜಾರಲು ಸಹಾಯ ಮಾಡುತ್ತದೆ.
5. ಕೃತಜ್ಞತಾ ಭಾವ
ದಿನದ ಕೊನೆಯಲ್ಲಿ ನಿಮಗೆ ಸಂತೋಷ ನೀಡಿದ ಕನಿಷ್ಠ ಮೂರು ವಿಷಯಗಳನ್ನು ನೆನಪಿಸಿಕೊಳ್ಳಿ. ನನ್ನ ಜೀವನ ಸುಂದರವಾಗಿದೆ ಎಂಬ ಸಕಾರಾತ್ಮಕ ಭಾವನೆಯೊಂದಿಗೆ ಕಣ್ಣು ಮುಚ್ಚಿದರೆ, ಉಪಪ್ರಜ್ಞೆ ಮನಸ್ಸು (Subconscious Mind) ರಾತ್ರಿಯಿಡೀ ಅದೇ ಪಾಸಿಟಿವ್ ವಿಚಾರಗಳನ್ನು ಪ್ರೊಸೆಸ್ ಮಾಡುತ್ತದೆ. ಇದು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ.
ನೆನಪಿಡಿ, ರಾತ್ರಿ ನಾವು ರೂಢಿಸಿಕೊಳ್ಳುವ ಸಣ್ಣಪುಟ್ಟ ಶಿಸ್ತಿನಿಂದ ನಮ್ಮ ಜೀವನ ಬದಲಾಗಬಹುದು. ಇಂದೇ ಈ ಅಭ್ಯಾಸಗಳನ್ನು ಪಾಲಿಸಲು ಶುರುಮಾಡಿ, ನಿಮ್ಮ ವ್ಯಕ್ತಿತ್ವದಲ್ಲಿ ಆಗುವ ಬದಲಾವಣೆಯನ್ನು ಗಮನಿಸಿ.
