ವೆನೆಜುವೆಲಾ ಕರಾವಳಿಯ ಸಮೀಪ ಬುಧವಾರ ಸಂಜೆ ಸಂಭವಿಸಿದ ಎರಡು ಭೂಕಂಪಗಳು ಇಡೀ ದೇಶವನ್ನು ಬೆಚ್ಚಿಬೀಳಿಸಿವೆ. ರಿಕ್ಟರ್ ಮಾಪಕದಲ್ಲಿ 7.2 ಮತ್ತು 7.5 ತೀವ್ರತೆಯ ಈ ಭೂಕಂಪಗಳು ಕೇವಲ ಒಂದು ನಿಮಿಷದ ಅಂತರದಲ್ಲಿ ಸಂಭವಿಸಿದ ಪರಿಣಾಮ ಹಲವಾರು ಕಟ್ಟಡಗಳು ಕುಸಿದು ಬಿದ್ದಿವೆ.
ಅಮೆರಿಕದ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ (USGS) ನೀಡಿದ ಮಾಹಿತಿಯ ಪ್ರಕಾರ, ಮೊದಲ ಭೂಕಂಪವು ಮೊರೋನ್ ಪಟ್ಟಣದ ಸಮೀಪ ಸಂಭವಿಸಿದ್ದು, ಭೂಮಿಯ 22 ಕಿಲೋಮೀಟರ್ ಆಳದಲ್ಲಿ ದಾಖಲಾಗಿದೆ. ಅದರ ಬೆನ್ನಲ್ಲೇ 7.5 ತೀವ್ರತೆಯ ಮತ್ತೊಂದು ಪ್ರಬಲ ಭೂಕಂಪವು ಸಂಭವಿಸಿದ್ದು, ಇದರ ಕೇಂದ್ರಬಿಂದು ಮೊರೋನ್‌ನ ನೈಋತ್ಯ ಭಾಗದಲ್ಲಿ ಪತ್ತೆಯಾಗಿದೆ. ರಾಜಧಾನಿ ಕರಾಕಾಸ್ ಸೇರಿದಂತೆ ಹಲವು ನಗರಗಳಲ್ಲಿ ಕಟ್ಟಡಗಳು ತೀವ್ರವಾಗಿ ಅಲುಗಾಡಿದ ಪರಿಣಾಮ, ಜನರು ಭೀತಿಗೊಂಡು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಕೆಲವೆಡೆ ಕಟ್ಟಡಗಳ ಗೋಡೆಗಳು ಕುಸಿದು ಬೀಳುವುದರ ಜೊತೆಗೆ, ರಸ್ತೆಗಳಲ್ಲಿ ಅವಶೇಷಗಳ ರಾಶಿಯೇ ಕಂಡುಬಂದಿದೆ. ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದರಿಂದ ಸಂಚಾರ ಮತ್ತು ಸಂಪರ್ಕ ವ್ಯವಸ್ಥೆಗಳು ಸಂಪೂರ್ಣ ಅಸ್ತವ್ಯಸ್ತವಾಗಿವೆ.
ಭೂಕಂಪದ ತೀವ್ರ ಆಘಾತದ ನಂತರ ಕರಾಕಾಸ್‌ನ ಹಲವು ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಮತ್ತು ವಿದ್ಯುತ್ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಕುಟುಂಬದ ಸದಸ್ಯರನ್ನು ಸಂಪರ್ಕಿಸಲು ಆಗದೆ ಅನೇಕರು ಆತಂಕಕ್ಕೆ ಒಳಗಾಗಿದ್ದಾರೆ. ಈ ಭೀಕರ ಘಟನೆಯ ಹಿನ್ನೆಲೆಯಲ್ಲಿ ವೆನೆಜುವೆಲಾದ ಪ್ರಮುಖ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
ವೆನೆಜುವೆಲಾದಲ್ಲಿ ಇಂತಹ ತೀವ್ರತೆಯ ಭೂಕಂಪಗಳು ಅಪರೂಪವಾಗಿದ್ದು, ಕಳೆದ ಹಲವು ದಶಕಗಳಲ್ಲೇ ಇದು ಅತ್ಯಂತ ಪ್ರಬಲ ಪ್ರಾಕೃತಿಕ ವಿಕೋಪಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಸಾವುನೋವು ಮತ್ತು ಆಸ್ತಿ ಹಾನಿಯ ನಿಖರ ಅಂಕಿ-ಅಂಶಗಳು ಇನ್ನಷ್ಟೇ ಲಭ್ಯವಾಗಬೇಕಿದ್ದು, ದೇಶಾದ್ಯಂತ ಆತಂಕದ ವಾತಾವರಣವು ಮುಂದುವರೆದಿದೆ.
ಈ ಭೂಕಂಪದ ಕಂಪನವು ನೆರೆಯ ಕೊಲಂಬಿಯಾ ಮತ್ತು ಬ್ರೆಜಿಲ್ ದೇಶಗಳಲ್ಲಿಯೂ ಅನುಭವಕ್ಕೆ ಬಂದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿಯೂ ಹಲವು ಕಟ್ಟಡಗಳನ್ನು ಖಾಲಿ ಮಾಡಲಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಈಗಾಗಲೇ ಆರಂಭವಾಗಿದ್ದು, ಹಾನಿಯ ಮೊತ್ತ ಮತ್ತು ವ್ಯಾಪ್ತಿಯ ಕುರಿತು ಸ್ಥಳೀಯ ಅಧಿಕಾರಿಗಳು ಸಮಗ್ರ ಮಾಹಿತಿ ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ.
ಕೊಲಂಬಿಯಾದಲ್ಲೂ ಕಂಪನ
ದೇಶಾದ್ಯಂತ ಭೂಕಂಪದ ಕಂಪನವು ಅನುಭವವಾಗಿದ್ದು, ಪಕ್ಕದ ಕೊಲಂಬಿಯಾ ದೇಶದಲ್ಲಿಯೂ ಭೂಕಂಪದ ಪ್ರಭಾವ ಕಂಡುಬಂದಿದೆ ಎಂದು ವರದಿಯಾಗಿದೆ. ಭೂಕಂಪದಿಂದ ವ್ಯಾಪಕ ಹಾನಿಯಾಗಿರುವುದನ್ನು ವೆನೆಜುವೆಲಾದ ರಕ್ಷಣಾ ಸಚಿವರು ದೃಢಪಡಿಸಿದ್ದಾರೆ.
ಸುನಾಮಿ ಮುನ್ನೆಚ್ಚರಿಕೆ
ಭೂಕಂಪದ ಹಿನ್ನೆಲೆಯಲ್ಲಿ ಸುನಾಮಿ ಅಪ್ಪಳಿಸುವ ಸಾಧ್ಯತೆಯಿರುವುದರಿಂದ ಕರಾವಳಿ ಪ್ರದೇಶಗಳ ಜನರನ್ನು ಎಚ್ಚರಿಸಲಾಗಿದೆ. ಭೂಕಂಪದ ಕೇಂದ್ರಬಿಂದುವು ಸಮುದ್ರಕ್ಕೆ ಸಮೀಪದಲ್ಲಿದ್ದು, ಇದು ಅಪಾಯಕಾರಿ ಅಲೆಗಳನ್ನು ಸೃಷ್ಟಿಸುವ ಆತಂಕವನ್ನು ಹೆಚ್ಚಿಸಿದೆ. ಹಾನಿ ಮತ್ತು ಸಾವುನೋವುಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಭೂಕಂಪದ ಬೆನ್ನಲ್ಲೇ ಸುನಾಮಿ ಎಚ್ಚರಿಕೆಯು ಜನರಲ್ಲಿ ಆತಂಕ ಸೃಷ್ಟಿಸಿದೆ.
ಮನೆಗಳ ಹೊರಗೇ ಉಳಿದ ಜನರು
ಭೂಕಂಪದ ಬಳಿಕ ಸಂಭವಿಸಬಹುದಾದ ನಂತರದ ಕಂಪನಗಳ ಭೀತಿಯಿಂದ ಅಧಿಕಾರಿಗಳು ಜನರಿಗೆ ತಾತ್ಕಾಲಿಕವಾಗಿ ಹೊರಾಂಗಣದಲ್ಲೇ ಉಳಿಯುವಂತೆ ಸೂಚಿಸಿದ್ದಾರೆ. ಸ್ಥಳೀಯ ನಿವಾಸಿ ಮಾತನಾಡಿ, “ಕಟ್ಟಡ ಎಡಬಲಕ್ಕೆ ಭಾರೀ ಪ್ರಮಾಣದಲ್ಲಿ ಅಲುಗಾಡುತ್ತಿತ್ತು. ನಾವು ನಡೆಯುತ್ತಿದ್ದಾಗಲೇ ಭೂಮಿ ನಮ್ಮನ್ನು ತಳ್ಳುತ್ತಿರುವಂತೆ ಅನುಭವವಾಯಿತು. ಮನೆಯೊಳಗಿನ ಬಹುತೇಕ ವಸ್ತುಗಳು ನೆಲಕ್ಕುರುಳಿದವು. ಅದೃಷ್ಟವಶಾತ್ ನಾವು ಸುರಕ್ಷಿತವಾಗಿ ಹೊರಬಂದೆವು ಎಂದು ಹೇಳಿದ್ದಾರೆ.
