ಬಲೂಚಿಸ್ತಾನ್ ಸಚಿವರ ಬೆಂಗಾವಲು ವಾಹನದ ಮೇಲೆ ಗುಂಡಿನ ದಾಳಿ: 6 ಮಂದಿಗೆ ಗಾಯ

Untitled design (55)

ಕ್ವೆಟ್ಟಾ ಆಗಸ್ಟ್ 14: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಗೃಹ ಸಚಿವ ಮೀರ್ ಜಿಯಾವುಲ್ಲಾ ಲ್ಯಾಂಗೋವ್ ಅವರ ಬೆಂಗಾವಲು ಪಡೆಯ ಮೇಲೆ ಇಂದು ಶುಕ್ರವಾರ ಭೀಕರ ಗುಂಡಿನ ದಾಳಿ ನಡೆದಿದೆ ಎಂದು ವರದಿಗಳು ತಿಳಿಸಿದೆ. ಮಸ್ತುಂಗ್ ಜಿಲ್ಲೆಯ ಖಾದ್ ಕೋಚಾ ಪ್ರದೇಶದಲ್ಲಿ ನಡೆದ ಈ ದಾಳಿಯಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದು, ಸಚಿವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಅಧಿಕಾರಿಗಳ ಪ್ರಕಾರ, ಲ್ಯಾಂಗೋವ್ ಅವರು ಕಲಾತ್‌ನಿಂದ ಕ್ವೆಟ್ಟಾಗೆ ಪ್ರಯಾಣಿಸುತ್ತಿದ್ದ ವೇಳೆ ಅವರ ಬೆಂಗಾವಲು ವಾಹನಗಳನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯ ವೇಳೆ ಸಚಿವರಿಗೆ ಯಾವುದೇ ಗಾಯವಾಗಿಲ್ಲ ಮತ್ತು ಅವರು ಸುರಕ್ಷಿತರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ದೃಢಪಡಿಸಿದ್ದಾರೆ.

ಇಬ್ಬರ ಸ್ಥಿತಿ ಗಂಭೀರ

ದಾಳಿಯಲ್ಲಿ ಗಾಯಗೊಂಡ ಆರು ಮಂದಿಯನ್ನು ತಕ್ಷಣ ನವಾಬ್ ರೈಸಾನಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಪ್ರಕಾರ, ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಕ್ವೆಟ್ಟಾದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಗಾಯಗೊಂಡವರ ಗುರುತುಗಳನ್ನು ಬಹಿರಂಗಪಡಿಸದಿದ್ದರೂ, ಮೂವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿರುವುದನ್ನು ಅಧಿಕಾರಿಗಳು ದೃಢಪಡಿಸಿದ್ದಾರೆ.

ಭದ್ರತಾ ಪಡೆಗಳಿಂದ ಶೋಧ ಕಾರ್ಯಾಚರಣೆ

ದಾಳಿಯ ತಕ್ಷಣವೇ ಭದ್ರತಾ ಪಡೆಗಳು ಖಾದ್ ಕೋಚಾ ಪ್ರದೇಶವನ್ನು ಸುತ್ತುವರೆದು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿವೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಪ್ರದೇಶದಲ್ಲಿ ಹೆಚ್ಚುವರಿ ಭದ್ರತೆ ನಿಯೋಜಿಸಲಾಗಿದ್ದು, ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಮೀರ್ ಜಿಯಾವುಲ್ಲಾ ಲ್ಯಾಂಗೋವ್ ಅವರು ಬಲೂಚಿಸ್ತಾನ್ ಅವಾಮಿ ಪಕ್ಷ (BAP) ಸದಸ್ಯರಾಗಿದ್ದು, ಈ ವರ್ಷದ ಮಾರ್ಚ್‌ನಲ್ಲಿ ಪ್ರಾಂತೀಯ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದರು.

Exit mobile version