ವಾಷಿಂಗ್ಟನ್, ಮಾರ್ಚ್ 18: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ನಡೆಸುತ್ತಿರುವ ಯುದ್ಧ ತೀವ್ರಗೊಂಡಿರುವ ಹಿನ್ನೆಲೆ, ಅಮೆರಿಕದ ಅತ್ಯಾಧುನಿಕ ಮತ್ತು ಅತಿದೊಡ್ಡ ಯುದ್ಧನೌಕೆಯಾದ ಯುಎಸ್ ಎಸ್ ಗೆರಾಲ್ಡ್ ಫೋರ್ಡ್ (USS Gerald R. Ford) ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಹಲವು ಸಿಬ್ಬಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಆರಂಭದಲ್ಲಿ ಈ ಬೆಂಕಿಗೆ ಇರಾನ್ ಕ್ಷಿಪಣಿ ಅಥವಾ ಡ್ರೋನ್ ದಾಳಿ ಕಾರಣವಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು. ಆದರೆ, ಅಮೆರಿಕ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿರುವ ಪ್ರಕಾರ ಇದು ಆಕಸ್ಮಿಕವಾಗಿ ಉಂಟಾದ ಬೆಂಕಿ ಅವಘಡವಾಗಿದ್ದು, ಯಾವುದೇ ಶತ್ರು ದಾಳಿ ನಡೆದಿಲ್ಲ ಎಂದು ತಿಳಿಸಲಾಗಿದೆ.
ಯುದ್ಧನೌಕೆಯ ಒಳಭಾಗದಲ್ಲಿ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ನೌಕಾಪಡೆಯ ಸಿಬ್ಬಂದಿ ತುರ್ತು ಕ್ರಮ ಕೈಗೊಂಡು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಅವಘಡದಲ್ಲಿ ನೌಕೆಯ ಒಳಗಿನ ಸುಮಾರು 100ಕ್ಕೂ ಹೆಚ್ಚು ಬೆಡ್‌ಗಳು ಹಾಗೂ ಪ್ರಮುಖ ಉಪಕರಣಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ ಎಂದು ತಿಳಿದುಬಂದಿದೆ.
ಈ ಬೆಂಕಿ ಅವಘಡದಲ್ಲಿ ಕೆಲವು ಸಿಬ್ಬಂದಿ ಗಾಯಗೊಂಡಿದ್ದು, ಅವರಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಗಾಯಾಳುಗಳ ಸ್ಥಿತಿ ಸ್ಥಿರವಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. USS Gerald R. Ford ಯುಎಸ್ ನೌಕಾಪಡೆಯ ಅತ್ಯಾಧುನಿಕ ಯುದ್ಧನೌಕೆಗಳಲ್ಲಿ ಒಂದಾಗಿದೆ. ಇದು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಹೊಂದಿದೆ.
ಈ ಯುದ್ಧನೌಕೆಯು ಈ ಹಿಂದೆ ಹಲವು ಪ್ರಮುಖ ಸೈನಿಕ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದೆ. ವಿಶೇಷವಾಗಿ ವೆನೆಜುವೆಲಾದಲ್ಲಿ ನಡೆದ ಕಾರ್ಯಾಚರಣೆಗಳಲ್ಲಿ ಈ ನೌಕೆಯ ಪಾತ್ರ ವಹಿಸಿದೆ. ಆದರೆ, ಇದೇ ನೌಕೆಯಲ್ಲಿ ಈ ಹಿಂದೆಯೂ ಕೆಲವು ತಾಂತ್ರಿಕ ಸಮಸ್ಯೆಗಳು ವರದಿಯಾಗಿದ್ದವು. ವಿಶೇಷವಾಗಿ ಸೌಕರ್ಯ ಸಂಬಂಧಿತ ಸಮಸ್ಯೆಗಳ ಬಗ್ಗೆ ನೌಕಾಪಡೆಯ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದ ಘಟನೆಗಳು ನಡೆದಿವೆ.
ಘಟನೆಯ ನಂತರ ಅಮೆರಿಕ ನೌಕಾಪಡೆ ತಕ್ಷಣ ಕ್ರಮ ಕೈಗೊಂಡಿದ್ದು, ನೌಕೆಯನ್ನು ರಿಪೇರಿ ಕಾರ್ಯಗಳಿಗಾಗಿ ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. ಸಂಪೂರ್ಣ ತಾಂತ್ರಿಕ ಪರಿಶೀಲನೆ ನಡೆಸಲಾಗುತ್ತಿದೆ.
