ಟೆಹ್ರಾನ್: ಇರಾನ್‌ನ ಕಚ್ಚಾ ತೈಲ ವ್ಯವಹಾರದ ಹೃದಯಭಾಗ ಎಂದೇ ಕರೆಯಲ್ಪಡುವ ಖಾರ್ಗ್ ದ್ವೀಪದ (Kharg Island) ಮೇಲೆ ಅಮೆರಿಕದ ವಾಯುಪಡೆ ಅತಿದೊಡ್ಡ ಬಾಂಬ್ ದಾಳಿ ನಡೆಸಿದ್ದು, ಇಡೀ ದ್ವೀಪವನ್ನೇ ಸ್ಮಶಾನವಾಗಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ರೂಥ್ ಸೋಶಿಯಲ್ ಜಾಲತಾಣದಲ್ಲಿ ಈ ದಾಳಿಯ ವಿವರಗಳನ್ನು ಹಂಚಿಕೊಂಡಿದ್ದಾರೆ.
ಮಧ್ಯಪ್ರಾಚ್ಯ ಇತಿಹಾಸದ ಶಕ್ತಿಶಾಲಿ ದಾಳಿ
ನನ್ನ ನೇರ ನಿರ್ದೇಶನದ ಮೇರೆಗೆ ಅಮೆರಿಕದ ಸೆಂಟ್ರಲ್ ಕಮಾಂಡ್ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ದಾಳಿ ನಡೆಸಿದೆ. ಇರಾನ್‌ನ ಕಿರೀಟ ರತ್ನ ಖಾರ್ಗ್ ದ್ವೀಪದಲ್ಲಿನ ಪ್ರತಿಯೊಂದು ಮಿಲಿಟರಿ ಗುರಿಯನ್ನು ನಮ್ಮ ಪಡೆಗಳು ಸಂಪೂರ್ಣವಾಗಿ ನಾಶಮಾಡಿವೆ ಎಂದು ಟ್ರಂಪ್ ಘೋಷಿಸಿದ್ದಾರೆ. ಈ ದಾಳಿಯು ಇರಾನ್‌ನ ಇಡೀ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವ ಉದ್ದೇಶ ಹೊಂದಿತ್ತು ಎಂಬುದು ಸ್ಪಷ್ಟವಾಗಿದೆ.
ಖಾರ್ಗ್ ದ್ವೀಪದ ಮಹತ್ವವೇನು ?
ಪರ್ಷಿಯನ್ ಕೊಲ್ಲಿಯಲ್ಲಿರುವ ಈ ಸಣ್ಣ ದ್ವೀಪವು ಇರಾನ್ ಪಾಲಿಗೆ ಬಂಗಾರದ ಮೊಟ್ಟೆ ಇಡುವ ಕೋಳಿಯಂತಿತ್ತು. ಇರಾನ್‌ನ ಒಟ್ಟು ಕಚ್ಚಾ ತೈಲ ರಫ್ತಿನ ಸುಮಾರು 90% ವ್ಯವಹಾರ ಈ ದ್ವೀಪದ ಮೂಲಕವೇ ನಡೆಯುತ್ತಿತ್ತು. ದಿನಕ್ಕೆ ಬರೋಬ್ಬರಿ 7 ಮಿಲಿಯನ್ ಬ್ಯಾರೆಲ್ ತೈಲವನ್ನು ಲೋಡ್ ಮಾಡುವ ಬೃಹತ್ ಮೂಲಸೌಕರ್ಯ ಇಲ್ಲಿತ್ತು. ಇರಾನ್‌ನ ಮುಖ್ಯ ಭೂಭಾಗದಿಂದ 24 ಕಿಲೋಮೀಟರ್ ದೂರದಲ್ಲಿದ್ದ ಈ ದ್ವೀಪವು ತೈಲ ಸಂಗ್ರಹಣೆ ಮತ್ತು ಸಂಸ್ಕರಣೆಯ ಪ್ರಮುಖ ಕೇಂದ್ರವಾಗಿತ್ತು.
ದಾಳಿಗೆ ಕಾರಣವೇನು ?
ಕಳೆದ ಎರಡು ವಾರಗಳಿಂದ ಯುದ್ಧ ನಡೆಯುತ್ತಿದ್ದರೂ, ಅಮೆರಿಕ ಮತ್ತು ಇಸ್ರೇಲ್ ಪಡೆಗಳು ತೈಲ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿರಲಿಲ್ಲ. ಆದರೆ, ಇರಾನ್ ಇತ್ತೀಚೆಗೆ ಮಧ್ಯಪ್ರಾಚ್ಯದ ಇತರ ತೈಲ ಕೇಂದ್ರಗಳ ಮೇಲೆ ದಾಳಿ ಮಾಡಿದ್ದಲ್ಲದೆ, ಜಾಗತಿಕ ಹಡಗು ಸಂಚಾರದ ಪ್ರಮುಖ ಹಾದಿಯಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಬಂದ್ ಮಾಡಿ ಅಮೆರಿಕವನ್ನು ಕೆರಳಿಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ಇರಾನ್‌ನ ಆರ್ಥಿಕ ಶಕ್ತಿಯನ್ನೇ ಉಡೀಸ್ ಮಾಡಿದೆ.
ಅಮೆರಿಕದ ಎಚ್ಚರಿಕೆ
ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಜಗತ್ತು ಹಿಂದೆಂದೂ ನೋಡಿರದ ವೇಗದಲ್ಲಿ ಇರಾನ್ ಮಿಲಿಟರಿಯನ್ನು ಸೋಲಿಸುತ್ತೇವೆ. ಇರಾನ್‌ನ ಸಕಲ ಶಕ್ತಿಯನ್ನು ನಿಷ್ಕ್ರಿಯಗೊಳಿಸುವ ಯೋಜನೆ ಪ್ರಗತಿಯಲ್ಲಿದೆ ಎಂದು ಗುಡುಗಿದ್ದಾರೆ.
ಈ ದಾಳಿಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಗನಕ್ಕೇರುವ ಆತಂಕ ಸೃಷ್ಟಿಯಾಗಿದ್ದು, ಇರಾನ್ ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದು ಈಗ ವಿಶ್ವದ ಕುತೂಹಲಕ್ಕೆ ಕಾರಣವಾಗಿದೆ.
