ಇರಾನ್ ಹೊಸ ನಾಯಕನ ಸುಳಿವು ಕೊಟ್ಟರೆ 92 ಕೋಟಿ ರೂ. ರಿವಾರ್ಡ್‌..! ಮೊಜ್ತಾಬಾ ಖಮೇನಿಗಾಗಿ ಅಮೆರಿಕ ಬಿಗ್ ಪ್ಲಾನ್

Untitled design 2026 03 14T082402.693

ಪಶ್ಚಿಮ ಏಷ್ಯಾದ ರಾಜಕೀಯ ಚಿತ್ರಣ ಕ್ಷಣಕ್ಷಣಕ್ಕೂ ಭೀಕರ ಸ್ವರೂಪ ಪಡೆಯುತ್ತಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಹತ್ಯೆಯಾದ ಬೆನ್ನಲ್ಲೇ, ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಮೊಜ್ತಾಬಾ ಖಮೇನಿ (Mojtaba Khamenei) ವಿರುದ್ಧ ಅಮೆರಿಕ ಕಣ್ಣು ಹಾಕಿದೆ. ಮೊಜ್ತಾಬಾ ಖಮೇನಿ ಬಗ್ಗೆ ಸುಳಿವು ನೀಡಿದವರಿಗೆ ಬರೋಬ್ಬರಿ 10 ಮಿಲಿಯನ್ ಡಾಲರ್ (ಸುಮಾರು 92.47 ಕೋಟಿ ರೂಪಾಯಿ) ನಗದು ಬಹುಮಾನ ನೀಡುವುದಾಗಿ ಅಮೆರಿಕದ ವಿದೇಶಾಂಗ ಇಲಾಖೆ ಘೋಷಿಸಿದೆ.

ಅಮೆರಿಕದ ‘ರಿವಾರ್ಡ್ಸ್ ಫಾರ್ ಜಸ್ಟೀಸ್’ ಕಾರ್ಯಕ್ರಮ

ಅಮೆರಿಕದ ಡಿಪ್ಲೊಮ್ಯಾಟಿಕ್ ಸೆಕ್ಯುರಿಟಿ ಸರ್ವಿಸ್ ಅಡಿಯಲ್ಲಿ ನಡೆಯುವ ‘ರಿವಾರ್ಡ್ಸ್ ಫಾರ್ ಜಸ್ಟೀಸ್’ (RFJ) ಅಭಿಯಾನವು ಮೊಜ್ತಾಬಾ ಖಮೇನಿ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಗೆ ಸಂಬಂಧಿಸಿದ ಹಲವು ಉನ್ನತ ಮಟ್ಟದ ಅಧಿಕಾರಿಗಳ ಭಾವಚಿತ್ರಗಳನ್ನು ಬಿಡುಗಡೆ ಮಾಡಿದೆ. ಈ ವ್ಯಕ್ತಿಗಳು ವಿಶ್ವದಾದ್ಯಂತ ಭಯೋತ್ಪಾದಕ ಚಟುವಟಿಕೆಗಳನ್ನು ಯೋಜಿಸುವ ಮತ್ತು ಕಾರ್ಯಗತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂಬುದು ಅಮೆರಿಕದ ಗಂಭೀರ ಆರೋಪವಾಗಿದೆ. ಹೀಗಾಗಿ ಖಮೇನಿ ಸೇರಿದಂತೆ ತಮ್ಮ ಲಿಸ್ಟ್‌ನಲ್ಲಿರುವ ಇತರೆ ವ್ಯಕ್ತಿಗಳ ಮಾಹಿತಿ ನೀಡುವವರ ಗೌಪ್ಯತೆಯನ್ನು ಕಾಪಾಡಲು ಟಾರ್ (Tor) ಆಧಾರಿತ ಟಿಪ್‌ಲೈನ್ ಅಥವಾ ಸಿಗ್ನಲ್ ಆ್ಯಪ್ ಮೂಲಕ ಮಾಹಿತಿ ಹಂಚಿಕೊಳ್ಳಲು ಸೂಚಿಸಲಾಗಿದೆ.

ಟ್ರಂಪ್ ಅಂತಿಮ ಎಚ್ಚರಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಕುರಿತು ಅತ್ಯಂತ ಕಠಿಣ ಸಂದೇಶ ರವಾನಿಸಿದ್ದಾರೆ. ಇರಾನ್ ಶೀಘ್ರವೇ ಶರಣಾಗಬಹುದು ಎಂದು ನಾವು ನಿರೀಕ್ಷಿಸುತ್ತಿದ್ದೇವೆ. ಒಂದು ವೇಳೆ ಶರಣಾಗತಿಗೆ ಒಪ್ಪದಿದ್ದರೆ, ಮುಂದಿನ ವಾರ ಇರಾನ್ ಮೇಲೆ ಹಿಂದೆಂದೂ ಕಂಡರಿಯದ ಮಟ್ಟದ ಭೀಕರ ದಾಳಿ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ಬೆಳವಣಿಗೆಯು ಕೇವಲ ಎರಡು ದೇಶಗಳ ನಡುವಿನ ಸಂಘರ್ಷವಾಗಿ ಉಳಿಯದೆ, ಇಡೀ ಜಗತ್ತಿನ ತೈಲ ಮಾರುಕಟ್ಟೆ ಮತ್ತು ಭದ್ರತೆಯ ಮೇಲೆ ಪ್ರಭಾವ ಬೀರುತ್ತಿದೆ. ಇರಾನ್ ಹೊಸ ನಾಯಕ ಮೊಜ್ತಾಬಾ ತಲೆತಪ್ಪಿಸಿಕೊಂಡು ಓಡಾಡುತ್ತಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಯಾವ ತಿರುವು ಪಡೆಯುತ್ತದೆ ಎಂಬುದು ಕುತೂಹಲ ಮೂಡಿಸಿದೆ.

Exit mobile version