ಇರಾನ್ ಮೇಲೆ ಮತ್ತೆ ದಾಳಿಗೆ ಪ್ಲಾನ್ ಮಾಡ್ತಿದ್ಯಾ ಅಮೆರಿಕ..?

Woman dead living relationship age gap kodigehalli (1)

ವಾಷಿಂಗ್ಟನ್ / ಟೆಲ್ ಅವೀವ್ (ಮೇ.1): ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಮತ್ತೆ ಮಹಾಯುದ್ಧದ ಮುನ್ಸೂಚನೆ ಕಾಣಿಸಿಕೊಂಡಿದೆ. ಇರಾನ್ ವಿರುದ್ಧ ಅಮೆರಿಕ ಮತ್ತೊಂದು ಅತಿದೊಡ್ಡ ಮಿಲಿಟರಿ ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿರುವ ಭೀತಿ ಮೂಡಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿಯೇ ಅಮೆರಿಕ ತನ್ನ ಮಧ್ಯಪ್ರಾಚ್ಯ ಮಿತ್ರರಾಷ್ಟ್ರ ಇಸ್ರೇಲ್‌ಗೆ 6,500 ಟನ್ ಯುದ್ಧ ಸಾಮಗ್ರಿ ರವಾನಿಸಿದೆ ಎನ್ನಲಾಗಿದೆ.

ಈ ಮಾಹಿತಿಯನ್ನು ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಅಧಿಕೃತವಾಗಿ ಪ್ರಕಟಿಸಿದೆ. ಸೆಂಟ್ಕಾಮ್ ಪ್ರಕಾರ, ಇಸ್ರೇಲ್‌ನ ರಕ್ಷಣಾ ಪಡೆಗಳಿಗೆ ಅಗಾಧ ಪ್ರಮಾಣದ ಮಿಲಿಟರಿ ಸರಕುಗಳನ್ನು ಸಾಗಿಸಲಾಗಿದೆ. ಇದರಲ್ಲಿ ಯುದ್ಧದ ಮೊಬೈಲ್ ಮಿಲಿಟರಿ ಟ್ರಕ್‌ಗಳು, ಆಕಾಶದಲ್ಲಿ ಗಸ್ತು ತಿರುಗುವ ಅತ್ಯಾಧುನಿಕ ಡ್ರೋನ್‌ಗಳು, ಗುಂಡು ಮದ್ದು, ಬಾಂಬುಗಳು, ಮತ್ತು ವಾಯುದಾಳಿಗೆ ಬೇಕಾದ ಇತರೇ ಸ್ಫೋಟಕ ಸಾಮಗ್ರಿಗಳು ಸೇರಿವೆ.

6,500 ಟನ್ ಸಾಮಗ್ರಿಯ ಅರ್ಥವೇನು?

ಕೇವಲ 24 ಗಂಟೆಗಳಲ್ಲಿ ಹಲವಾರು ಸಾರಿಗೆ ವಿಮಾನಗಳು ಮತ್ತು ಹಡಗುಗಳ ಮೂಲಕ ಈ ಬೃಹತ್ ಪ್ರಮಾಣದ ಸಾಮಗ್ರಿ ಇಸ್ರೇಲ್ ತಲುಪಿದೆ. ತಜ್ಞರ ಹೇಳುವ ಪ್ರಕಾರ, ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಅಗಾಧ ಪ್ರಮಾಣದ ಯುದ್ಧ ಸಾಮಗ್ರಿ ರವಾನೆ ಮಾಡಿದೆ ಎಂದರೆ, ಅಮೆರಿಕ ಯಾವುದೇ ಕ್ಷಣದಲ್ಲಿ ದಾಳಿಗೆ ಸಜ್ಜಾಗಿದೆ ಎಂಬುದನ್ನು ಸೂಚಿಸುತ್ತದೆ. ಹಿಂದೆ ಇರಾನ್ ವಿರುದ್ಧ ನಡೆದ ಯಾವುದೇ ಕಾರ್ಯಾಚರಣೆಗಳಲ್ಲೂ ಇಷ್ಟೊಂದು ತ್ವರಿತ ಗತಿಯಲ್ಲಿ ಸಾಮಗ್ರಿ ರವಾನೆಯಾಗಿರಲಿಲ್ಲ.

ಇರಾನ್ ವಿರುದ್ಧ ಜಲದಿಗ್ಬಂಧನ 

ಅಮೆರಿಕದ ಸೆಂಟ್ರಲ್ ಕಮಾಂಡ್ ಈಗಾಗಲೇ ಹಾರ್ಮುಜ್ ಜಲಸಂಧಿ ಮತ್ತು ಪರ್ಷಿಯನ್ ಕೊಲ್ಲಿಯಲ್ಲಿ ತನ್ನ ಯುದ್ಧನೌಕೆಗಳ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ.

ಇಸ್ರೇಲ್ ಈಗಾಗಲೇ ಗಾಜಾ ಮತ್ತು ಸಿರಿಯಾದಲ್ಲಿ ತನ್ನ ಕಾರ್ಯಾಚರಣೆಗಳನ್ನು ಮುಂದುವರೆಸಿದೆ. ಆದರೆ ಈ ಬಾರಿ, ಅಮೆರಿಕ ನೇರವಾಗಿ ವಾಯುದಾಳಿ ನಡೆಸುವ ಸಾಧ್ಯತೆಗಳನ್ನು ತಳ್ಳಿಹಾಕಲಾಗುತ್ತಿಲ್ಲ. ತಜ್ಞರ ಪ್ರಕಾರ, ಇರಾನಿನ ಪರಮಾಣು ತಾಣಗಳು ಮತ್ತು ಮಿಲಿಟರಿ ಠಾಣೆಗಳನ್ನು ನಾಶಪಡಿಸುವ ಸಂಪೂರ್ಣ ತಯಾರಿಯಲ್ಲಿದೆ ಅಮೆರಿಕ. ಸೆಂಟ್ಕಾಮ್ನ ಹೇಳಿಕೆಯಲ್ಲಿ, ಮಿತ್ರರಾಷ್ಟ್ರಗಳ ರಕ್ಷಣೆ ಮತ್ತು ಪ್ರಾದೇಶಿಕ ಸ್ಥಿರತೆಗಾಗಿ ಈ ಕ್ರಮಗಳು ಅಗತ್ಯ ಎಂದು ಹೇಳಿಕೊಳ್ಳಲಾಗಿದೆ. 

ಇರಾನ್ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದರೆ ಇರಾನಿನ ಮಿಲಿಟರಿ ಮೂಲಗಳ ಪ್ರಕಾರ, ಅಮೆರಿಕದ ಈ ಕ್ರಮಕ್ಕೆ ಸೂಕ್ತ ಉತ್ತರ ನೀಡಲು ತಾವು ಸಂಪೂರ್ಣ ಸಜ್ಜಾಗಿದ್ದೇವೆ ಎಂದು ಎಚ್ಚರಿಕೆ ನೀಡಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ದೊಡ್ಡ ಮಟ್ಟದ ಮಿಲಿಟರಿ ಎನ್‌ಕೌಂಟರ್ ನಡೆಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ವಿಶ್ವಸಂಸ್ಥೆ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಮಾತುಕತೆಯ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಲು ಕರೆ ನೀಡಿವೆ.

Exit mobile version