ಇರಾನ್-ಅಮೆರಿಕ ಶಾಂತಿ ಒಪ್ಪಂದ ಪೂರ್ಣ: ಹಾರ್ಮುಜ್ ಜಲಸಂಧಿ ಮತ್ತೆ ಓಪನ್ ಎಂದ ಟ್ರಂಪ್

Untitled design 2026 06 15T111225.669

ವಾಷಿಂಗ್ಟನ್: ಹಲವು ತಿಂಗಳುಗಳಿಂದ ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದ್ದ ಅಮೆರಿಕ ಹಾಗೂ ಇರಾನ್ ನಡುವಿನ ಉದ್ವಿಗ್ನತೆಗೆ ತೆರೆ ಬೀಳುವ ಸೂಚನೆಗಳು ಕಂಡುಬಂದಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ ಜೊತೆ ಶಾಂತಿ ಒಪ್ಪಂದವನ್ನು ಅಂತಿಮಗೊಳಿಸಿರುವುದಾಗಿ ಘೋಷಿಸಿದ್ದಾರೆ. ವಿಶ್ವದ ಅತ್ಯಂತ ಕಾರ್ಯತಂತ್ರದ ಜಲಮಾರ್ಗಗಳಲ್ಲೊಂದಾದ ಹಾರ್ಮುಜ್ ಜಲಸಂಧಿಯನ್ನು ಸಂಚಾರಕ್ಕೆ ಮತ್ತೆ ತೆರೆಯಲಾಗುವುದು ಮತ್ತು ಅಮೆರಿಕದ ನೌಕಾ ದಿಗ್ಬಂಧನವನ್ನು ತಕ್ಷಣ ಹಿಂತೆಗೆಯಲಾಗುವುದು ಎಂದು ತಿಳಿಸಿದ್ದಾರೆ.

ಟ್ರಂಪ್‌ನ ‘ಟ್ರೂತ್ ಸೋಶಿಯಲ್’ ಪೋಸ್ಟ್

ಟ್ರಂಪ್ ತಮ್ಮ ಸತ್ಯ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ (Truth Social) ಬರೆದಿದ್ದಾರೆ: “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನೊಂದಿಗಿನ ಒಪ್ಪಂದವು ಈಗ ಪೂರ್ಣಗೊಂಡಿದೆ. ಎಲ್ಲರಿಗೂ ಅಭಿನಂದನೆಗಳು! ಹಾರ್ಮುಜ್ ಜಲಸಂಧಿಯನ್ನು ‘ಟೋಲ್-ಫ್ರೀ’ (ಶುಲ್ಕರಹಿತ) ಆಗಿ ತೆರೆಯಲು ನಾನು ಸಂಪೂರ್ಣ ಅಧಿಕಾರ ನೀಡುತ್ತೇನೆ. ಅದೇ ಸಮಯದಲ್ಲಿ, ಯುನೈಟೆಡ್ ಸ್ಟೇಟ್ಸ್ ನೌಕಾ ದಿಗ್ಬಂಧನವನ್ನು ತಕ್ಷಣ ತೆಗೆದುಹಾಕಲು ಅಧಿಕಾರ ನೀಡುತ್ತೇನೆ. ವಿಶ್ವದ ಹಡಗುಗಳೇ, ನಿಮ್ಮ ಎಂಜಿನ್‌ಗಳನ್ನು ಪ್ರಾರಂಭಿಸಿ. ತೈಲ ಹರಿಯಲಿ.” ಎಂದಿದ್ದಾರೆ. 

ಕಳೆದ ಕೆಲವು ತಿಂಗಳುಗಳಿಂದ ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯಿಂದಾಗಿ ವಿಶ್ವದ ತೈಲ ಪೂರೈಕೆಯಲ್ಲಿ ಶೇ.20ರಷ್ಟು ಕುಸಿತವಾಗಿತ್ತು. ಭಾರತದಂತಹ ತೈಲ ಆಮದುದಾರ ರಾಷ್ಟ್ರಗಳು ತೀವ್ರ ಸಂಕಷ್ಟವನ್ನು ಎದುರಿಸಿದ್ದವು.

ಪಾಕಿಸ್ತಾನ ಪ್ರಧಾನಿ ಸ್ಪಂದನೆ

ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಸಹ ತಮ್ಮ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಈ ಸುದ್ದಿ ಬಗ್ಗೆ ಪೋಸ್ಟ್‌ ಮಾಡಿದ್ದಾರೆ.  “ಮಾತುಕತೆಗಳ ನಂತರ ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದವನ್ನು ತಲುಪಲಾಗಿದೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ. ಲೆಬನಾನ್‌ ಸೇರಿದಂತೆ ಎಲ್ಲಾ ಕಡೆ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣ ಮತ್ತು ಶಾಶ್ವತವಾಗಿ ಕೊನೆಗೊಳಿಸುವುದಾಗಿ ಎರಡೂ ರಾಷ್ಟ್ರಗಳು ಘೋಷಿಸಿವೆ” ಎಂದು ಅವರು ಬರೆದುಕೊಂಡಿದ್ದಾರೆ. ಶುಕ್ರವಾರ ಸ್ವಿಟ್ಜರ್ಲೆಂಡ್‌‌ನಲ್ಲಿ ಎರಡೂ ಕಡೆಯವರು ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂಬ ಮಾಹಿತಿಯನ್ನೂ ಷರೀಫ್ ಹಂಚಿಕೊಂಡಿದ್ದಾರೆ.

ಹಾರ್ಮುಜ್ ಪ್ರಾಮುಖ್ಯತೆ

ಹಾರ್ಮುಜ್ ಜಲಸಂಧಿಯು ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿಯನ್ನು ಸಂಪರ್ಕಿಸುವ, ಕೇವಲ 33 ಕಿ.ಮೀ. ಅಗಲವಿರುವ ಪ್ರದೇಶವಾಗಿದೆ. ಪ್ರತಿದಿನ ಸುಮಾರು 20 ಮಿಲಿಯನ್ ಬ್ಯಾರೆಲ್ ತೈಲವು ಈ ಮಾರ್ಗದ ಮೂಲಕ ಸಾಗುತ್ತದೆ. ಕಳೆದ ವರ್ಷ ಫೆಬ್ರವರಿ 28ರಂದು ಪ್ರಾರಂಭವಾದ ಮಿಲಿಟರಿ ಘರ್ಷಣೆಯ ನಂತರ ಇರಾನ್ ಈ ಮಾರ್ಗವನ್ನು ಮುಚ್ಚಿತ್ತು. ಪ್ರತಿಕ್ರಿಯೆಯಾಗಿ ಏಪ್ರಿಲ್ನಲ್ಲಿ ಪಾಕಿಸ್ತಾನದಲ್ಲಿ ನಡೆದ ಮಾತುಕತೆಗಳು ವಿಫಲವಾದ ಬಳಿಕ ಅಮೆರಿಕ ಇರಾನಿನ ಬಂದರುಗಳ ಮೇಲೆ ನೌಕಾ ದಿಗ್ಬಂಧನವನ್ನು ಹೇರಿತ್ತು.

ಭಾರತದ ಮೇಲೆ ಪರಿಣಾಮ

ಈ ಬೆಳವಣಿಗೆಯು ಭಾರತಕ್ಕೆ ದೊಡ್ಡ ಪರಿಹಾರ ತಂದಿದೆ. ಭಾರತದ ತೈಲ ಮತ್ತು ನೈಸರ್ಗಿಕ ಅನಿಲ ಪೂರೈಕೆಯಲ್ಲಿ ತೀವ್ರ ಕೊರತೆ ಉಂಟಾಗಿತ್ತು. ಹಾರ್ಮುಜ್ ಮುಚ್ಚಿದ್ದರಿಂದ ಪೆಟ್ರೋಲ್, ಡೀಸೆಲ್ ಬೆಲೆಗಳು ದಾಖಲೆಯ ಮಟ್ಟಕ್ಕೆ ಏರಿದ್ದವು. ಜಲಸಂಧಿ ಮತ್ತೆ ತೆರೆದರೆ ಭಾರತದ ಇಂಧನ ಬೆಲೆಗಳಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ. ತಕ್ಷಣಕ್ಕೆ ಹಾರ್ಮುಜ್ ಸಂಪೂರ್ಣವಾಗಿ ಯಾವಾಗ ತೆರೆಯುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಟ್ರಂಪ್‌ನ ಆದೇಶದ ನಂತರ ನೌಕಾ ದಿಗ್ಬಂಧನವನ್ನು ತೆಗೆಯಲಾಗುತ್ತಿದೆ.

Exit mobile version