ವಾಷಿಂಗ್ಟನ್/ಟೆಹ್ರಾನ್: ಅಮೆರಿಕ (US) ಮತ್ತು ಇರಾನ್ (Iran) ನಡುವಿನ ಉದ್ವಿಗ್ನತೆ ಮತ್ತೊಮ್ಮೆ ತಾರಕಕ್ಕೇರಿದೆ. ಆಯಕಟ್ಟಿನ ಹಾರ್ಮುಜ್ (Hormuz) ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರದ ಮೇಲಿನ ನಿಯಂತ್ರಣಕ್ಕಾಗಿ ಉಭಯ ದೇಶಗಳ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಈ ಹಿನ್ನೆಲೆ ಅಮೆರಿಕ ಮಿಲಿಟರಿ ಇರಾನ್ ಮೇಲೆ ಭೀಕರ ವಾಯುದಾಳಿ ನಡೆಸಿದೆ.
ಅಮೆರಿಕದ ಭೀಕರ ವಾಯುದಾಳಿ
ಜಲಸಂಧಿಯಲ್ಲಿ ಇರಾನ್ ನಡೆಸುತ್ತಿರುವ ನಿರಂತರ ಹಡಗುಗಳ ಮೇಲಿನ ದಾಳಿಗೆ ಪ್ರತಿಯಾಗಿ ಅಮೆರಿಕ ಸೋಮವಾರ ಬೆಳ್ಳಂಬೆಳಗ್ಗೆ ಇರಾನ್‌ನ ಹಲವು ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಭೀಕರ ವಾಯುದಾಳಿ ನಡೆಸಿದೆ. ವಾಣಿಜ್ಯ ಹಡಗುಗಳ ಮುಕ್ತ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವ ಇರಾನ್‌ಮ ಸೈನಿಕ ಸಾಮರ್ಥ್ಯವನ್ನು ಕುಂದಿಸುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ರಕ್ಷಣಾ ಪಡೆ ಸ್ಪಷ್ಟಪಡಿಸಿದೆ.
ಜಲಸಂಧಿಯ ಸಮೀಪವಿರುವ ಇರಾನ್‌ನ ಬಂದರ್ ಅಬ್ಬಾಸ್ ಮತ್ತು ಕೇಶ್ ದ್ವೀಪ ಸೇರಿದಂತೆ ಇರಾನ್‌ನ ಕರಾವಳಿ ತೀರದ ಸುಮಾರು 140ಕ್ಕೂ ಹೆಚ್ಚು ರಕ್ಷಣಾ ನೆಲೆಗಳು, ಕ್ಷಿಪಣಿ ಉಡಾವಣಾ ಕೇಂದ್ರಗಳು ಮತ್ತು ಇರಾನ್ ರೆವಲ್ಯೂಷನರಿ ಗಾರ್ಡ್ಸ್ನ ಬೋಟ್‌ಗಳ ಮೇಲೆ ಅಮೆರಿಕದ ಯುದ್ಧವಿಮಾನಗಳು ಹಾಗೂ ಡ್ರೋನ್‌ಗಳು ಬಾಂಬ್‌ಗಳ ಮಳೆಗರೆದಿವೆ. ಈ ದಾಳಿಯಲ್ಲಿ ಹಲವಾರು ಇರಾನ್‌ನ ಮಿಲಿಟರಿ ಸ್ಥಾಪನೆಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಇರಾನ್‌ನ ಪ್ರತೀಕಾರದ ಕ್ಷಿಪಣಿ ದಾಳಿ
ಅಮೆರಿಕದ ಭೀಕರ ದಾಳಿಯಿಂದ ಕೆರಳಿರುವ ಇರಾನ್, ಪ್ರತಿಯಾಗಿ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳು ಹಾಗೂ ಅದಕ್ಕೆ ಬೆಂಬಲ ನೀಡುತ್ತಿರುವ ಗಲ್ಫ್ ದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಕತಾರ್, ಬಹ್ರನ್, ಕುವೈತ್, ಜೋರ್ಡಾನ್ ಮತ್ತು ಒಮಾನ್ ದೇಶಗಳತ್ತ ಇರಾನ್ ಕ್ಷಿಪಣಿಗಳನ್ನು ಉಡಾಯಿಸಿದ್ದು, ಈ ಪ್ರದೇಶಗಳಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ.
ಕತಾರ್ ಮತ್ತು ಕುವೈತ್ ದೇಶಗಳು ಇರಾನ್ನಿಂದ ಬಂದ ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ತಿಳಿಸಿದ್ದು, ಈ ಘಟನೆಯಲ್ಲಿ ಸಾರ್ವಜನಿಕರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಬಹ್ರೇನ್‌ನಲ್ಲಿರುವ ಅಮೆರಿಕದ ನೌಕಾಪಡೆಯ 5ನೇ ಫ್ಲೀಟ್ ಬೇಸ್ ಅನ್ನು ಗುರಿಯಾಗಿಸಿಕೊಂಡೂ ಇರಾನ್ ದಾಳಿ ನಡೆಸಿದೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಕಮಾಂಡರ್, “ಅಮೆರಿಕದ ಆಕ್ರಮಣಕಾರಿ ಕೃತ್ಯಕ್ಕೆ ಸೂಕ್ತ ಉತ್ತರ ನೀಡಲಾಗಿದೆ. ಮುಂದಿನ ಎಚ್ಚರಿಕೆಯೂ ಇದಾಗಿದೆ” ಎಂದು ಹೇಳಿದ್ದಾರೆ.
ಜಲಸಂಧಿ ಬಂದ್ ಎಂದ ಇರಾನ್, ತೆರೆದಿದೆ ಎಂದ ಟ್ರಂಪ್
ಅಮೆರಿಕದ ಹಸ್ತಕ್ಷೇಪ ಕೊನೆಗೊಳ್ಳುವವರೆಗೂ ಹೊರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ ಮತ್ತು ಇದರ ಸಂಪೂರ್ಣ ನಿಯಂತ್ರಣ ನಮ್ಮದೇ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೇರ್ ಗಲಿಬಾಫ್ ಘೋಷಿಸಿದ್ದಾರೆ. “ಏಕಪಕ್ಷೀಯ ಒಪ್ಪಂದಗಳ ದಿನಗಳು ಮುಗಿದಿವೆ. ಅಮೆರಿಕವು ತನ್ನ ದಬ್ಬಾಳಿಕೆಯ ನೀತಿಯನ್ನು ಕೈಬಿಡಬೇಕು” ಎಂದು ಅವರು ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.
ಆದರೆ ಇರಾನ್‌ನ ಈ ವಾದವನ್ನು ತಳ್ಳಿಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, “ಜಲಸಂಧಿ ಮುಕ್ತವಾಗಿಯೇ ಇದೆ ಮತ್ತು ನಾವು ಇರಾನ್ ಮೇಲೆ ಭೀಕರವಾಗಿ ಬಾಂಬ್ ದಾಳಿ ನಡೆಸಿದ್ದೇವೆ. ಯಾವುದೇ ದೇಶವು ಅಂತಾರಾಷ್ಟ್ರೀಯ ಜಲಮಾರ್ಗವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಅಮೆರಿಕದ ರಕ್ಷಣಾ ಸಚಿವಾಲಯವೂ, “ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮುಕ್ತ ಸಂಚಾರವನ್ನು ಖಾತ್ರಿಪಡಿಸಲು ನಾವು ಬದ್ಧರಾಗಿದ್ದೇವೆ” ಎಂದು ತಿಳಿಸಿದೆ.
ಶಾಂತಿ ಒಪ್ಪಂದಕ್ಕೆ ಭೀತಿ
ವಿಶ್ವದ ಒಟ್ಟು ತೈಲ ಮತ್ತು ನೈಸರ್ಗಿಕ ಅನಿಲದ ಸರಬರಾಜಿನಲ್ಲಿ ಶೇಕಡಾ 20 ರಷ್ಟು ಪಾಲು ಹೊರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಪ್ರತಿದಿನ ಸುಮಾರು 20 ಮಿಲಿಯನ್ ಬ್ಯಾರೆಲ್ ತೈಲವು ಈ ಜಲಸಂಧಿಯ ಮೂಲಕ ಸಾಗಣೆಯಾಗುತ್ತಿದ್ದು, ಇದು ವಿಶ್ವದ ಅತ್ಯಂತ ಪ್ರಮುಖ ತೈಲ ಮಾರ್ಗವಾಗಿದೆ. ಈ ಜಲಸಂಧಿ ಮುಚ್ಚಲ್ಪಟ್ಟರೆ, ವಿಶ್ವದ ತೈಲ ಬೆಲೆಗಳು ಏರಿಕೆಯಾಗಿ ಜಾಗತಿಕ ಆರ್ಥಿಕತೆಯು ತೀವ್ರ ಹೊಡೆತಕ್ಕೆ ಒಳಗಾಗುವ ಸಾಧ್ಯತೆ ಇದೆ.
ಇರಾನ್ ಮತ್ತು ಅಮೆರಿಕ ನಡುವೆ ಕಳೆದ ತಿಂಗಳು ನಡೆದಿದ್ದ ತಾತ್ಕಾಲಿಕ ಕದನ ವಿರಾಮ ಒಪ್ಪಂದದ ಮಧ್ಯಭಾಗದಲ್ಲಿ ಈ ಸಂಘರ್ಷ ಸಂಭವಿಸಿದೆ. ಉಭಯ ದೇಶಗಳ ನಡುವಿನ ಈ ಭೀಕರ ಸಂಘರ್ಷದಿಂದಾಗಿ ಯುದ್ಧವನ್ನು ಶಾಶ್ವತವಾಗಿ ಕೊನೆಗೊಳಿಸಲು ನಡೆಯುತ್ತಿದ್ದ ಶಾಂತಿ ಮಾತುಕತೆಗಳು ಸಂಪೂರ್ಣವಾಗಿ ಹಳಿತಪ್ಪುವ ಭೀತಿ ಎದುರಾಗಿದೆ.
ಈ ನಡುವೆ ವಿಶ್ವಸಂಸ್ಥೆಯ ಮುಖ್ಯಸ್ಥರು ಉಭಯ ದೇಶಗಳೂ ಸಂಯಮ ಕಾಯ್ದುಕೊಳ್ಳಬೇಕು ಮತ್ತು ರಾಜತಾಂತ್ರಿಕ ಮಾತುಕತೆಯ ಮೂಲಕ ಬಿಕ್ಕಟ್ಟು ಪರಿಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. “ಯುದ್ಧವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ಎಲ್ಲಾ ಪಕ್ಷಗಳು ಶಾಂತಿಯುತ ಮಾತುಕತೆಗೆ ಮುಂದಾಗಬೇಕು” ಎಂದು ಅವರು ಹೇಳಿದ್ದಾರೆ.
