ವಾಷಿಂಗ್ಟನ್: ಅಮೆರಿಕದಲ್ಲಿ ಉದ್ಯೋಗ ಪಡೆದು ನೆಲೆಸುವ ಕನಸು ಕಾಣುತ್ತಿರುವ ವಿದೇಶಿ ಉದ್ಯೋಗಿಗಳಿಗೆ, ವಿಶೇಷವಾಗಿ ಭಾರತೀಯ ಟೆಕ್ಕಿಗಳಿಗೆ ಅಮೆರಿಕದ ಒಳನಾಡು ಭದ್ರತಾ ಇಲಾಖೆ (DHS) ತೀವ್ರ ಆಘಾತವನ್ನುಂಟುಮಾಡಿದೆ. ಅಮೆರಿಕದ ಒಳನಾಡು ಭದ್ರತಾ ಇಲಾಖೆ (DHS) H-1B cap-subject petitions ಮೇಲೆ ಬರೋಬ್ಬರಿ $103,265 (ಸುಮಾರು ₹86 ಲಕ್ಷಕ್ಕೂ ಹೆಚ್ಚು) ಹೆಚ್ಚುವರಿ ಶುಲ್ಕ ವಿಧಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಈ ಮೊತ್ತವು ಈಗಾಗಲೇ ಜಾರಿಯಲ್ಲಿರುವ ಸಾಮಾನ್ಯ H-1B ಶುಲ್ಕಗಳಿಗೆ ಹೆಚ್ಚುವರಿಯಾಗಿರಲಿದೆ ಎಂದು ಅಧಿಕೃತ ಫೆಡರಲ್ ರಿಜಿಸ್ಟರ್‌ನ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ವಿಶ್ವಪ್ರಸಿದ್ಧ ಕಾರ್ಪೊರೇಟ್ ಇಮಿಗ್ರೇಷನ್ ಸೇವಾ ಸಂಸ್ಥೆಯಾದ ಫ್ರಾಗೋಮೆನ್ (Fragomen) ನೀಡಿರುವ ಮಾಹಿತಿಯ ಪ್ರಕಾರ, ಟ್ರಂಪ್ ಆಡಳಿತವು ಎಚ್-1ಬಿ ಹಾಗೂ ಎಫ್-1 ಒಪಿಟಿ (Optional Practical Training) ಪ್ರೋಗ್ರಾಂಗಳನ್ನು ಗುರಿಯಾಗಿಸಿಕೊಂಡು ಈ ಹೊಸ ಶುಲ್ಕ ನಿಯಮಗಳನ್ನು ಜಾರಿಗೆ ತರಲು ಯೋಜಿಸುತ್ತಿದೆ. ಆಗಸ್ಟ್ ತಿಂಗಳಲ್ಲಿ ವೈಟ್ ಹೌಸ್‌ನ ಮ್ಯಾನೇಜ್‌ಮೆಂಟ್ ಅಂಡ್ ಬಜೆಟ್ ಕಚೇರಿಗೆ (OMB) ಪ್ರಸ್ತಾವನೆಗಳು ಸಲ್ಲಿಕೆಯಾಗಿದ್ದು, ಪರಿಶೀಲನೆಯ ಹಂತವನ್ನು ದಾಟಿವೆ. ಇಷ್ಟೇ ಅಲ್ಲದೆ, ವಿದ್ಯಾರ್ಥಿಗಳಿಂದ ಉದ್ಯೋಗಕ್ಕೆ ಪಾದಾರ್ಪಣೆ ಮಾಡುವ ಎಫ್-1 ಒಪಿಟಿ ಅರ್ಜಿಗಳ ಮೇಲೆಯೂ ಸುಮಾರು 1,00,000 ಡಾಲರ್ ಶುಲ್ಕ ವಿಧಿಸಲು ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸುತ್ತಿದೆ.
ಕಳೆದ ವರ್ಷವೂ ಇಂತಹದ್ದೇ ಶುಲ್ಕ ಹೇರಿಕೆಯ ಪ್ರಯತ್ನ ನಡೆದಿದೆ, ಆದರೂ ನ್ಯಾಯಾಲಯದ ಆದೇಶದ ಕಾರಣದಿಂದ ಅದು ತಡೆಯಲಾಗಿತ್ತು. ಪ್ರಸ್ತುತ ಪ್ರಸ್ತಾವನೆಯು ಈ ಹಿಂದಿನ ಕಾನೂನು ಹೋರಾಟಗಳಿಗೆ ಸಂಬಂಧಿಸಿದ್ದು, ಅಧಿಕೃತ ನಿಯಮಾವಳಿಗಳು ಶೀಘ್ರದಲ್ಲೇ ಬಹಿರಂಗಗೊಳ್ಳಲಿವೆ.
ಭಾರತೀಯರೇ ಅತಿ ಹೆಚ್ಚು ಹಾನಿಗೆ ಗುರಿ
ಈ ಹೊಸ ನಿರ್ಧಾರದಿಂದ ಅತ್ಯಂತ ಹೆಚ್ಚಿನ ಹಾನಿಗೊಳಗಾಗುವುದು ಭಾರತೀಯ ಉದ್ಯೋಗಿಗಳೇ. ಹೆಚ್-1ಬಿ ವೀಸಾ ಪಡೆಯುವವರಲ್ಲಿ ಶೇಕಡಾ 70ಕ್ಕೂ ಹೆಚ್ಚು ಭಾಗವನ್ನು ಭಾರತೀಯರೇ ಆಕ್ರಮಿಸಿಕೊಂಡಿದ್ದಾರೆ. 2024 ರಲ್ಲಿ ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆಗಳ ಸಂಸ್ಥೆಯು (USCIS) ಒಟ್ಟು 3,99,402 ಎಚ್-1ಬಿ ಅರ್ಜಿಗಳನ್ನು ಅನುಮೋದಿಸಿದ್ದು, ಅದರಲ್ಲಿ ಬರೋಬ್ಬರಿ ಶೇಕಡಾ 71 ರಷ್ಟು ಅರ್ಜಿಗಳು ಭಾರತ ಮೂಲದ ಅಭ್ಯರ್ಥಿಗಳಿಗೇ ಲಭಿಸಿದ್ದವು. ಪ್ರಸ್ತುತ ಅಮೆರಿಕದಲ್ಲಿ 52 ಲಕ್ಷಕ್ಕೂ ಅಧಿಕ ಭಾರತೀಯ ಮೂಲದ ಜನರಿದ್ದು, ಈ ಬೃಹತ್ ಶುಲ್ಕ ಏರಿಕೆಯು ಭಾರತೀಯ ಸಮುದಾಯದ ಮೇಲೆ ತೀವ್ರ ಪರಿಣಾಮ ಬೀರಲಿದೆ.
60 ದಿನಗಳ ಗ್ರೇಸ್ ಪೀರಿಯಡ್ ರದ್ದು: ಇನ್ನೊಂದು ಕಠಿಣ ನಿಯಮ
ಶುಲ್ಕ ಹೆಚ್ಚಳ ಮಾತ್ರವಲ್ಲದೆ, ಕೆಲಸ ಕಳೆದುಕೊಳ್ಳುವ ಎಚ್-1ಬಿ ವೀಸಾಧಾರಕರಿಗೆ ಇನ್ನೊಂದು ಕಠಿಣ ನಿಯಮವೂ ಕಾದಿದೆ. ಪ್ರಸ್ತುತ ಉದ್ಯೋಗ ನಷ್ಟವಾದಲ್ಲಿ, ವೀಸಾಧಾರಕರಿಗೆ ಮತ್ತೊಂದು ಕೆಲಸ ಹುಡುಕಿಕೊಳ್ಳಲು ಅಥವಾ ದೇಶ ತೊರೆಯಲು ನೀಡಲಾಗುತ್ತಿದ್ದ 60 ದಿನಗಳ ಕಾಲಾವಕಾಶವನ್ನು (Grace Period) ರದ್ದುಗೊಳಿಸಲು ಇಲಾಖೆ ಪ್ರಸ್ತಾವಿಸಿದೆ. ಈ ಹೊಸ ನಿಯಮ ಜಾರಿಗೆ ಬಂದರೆ, ಉದ್ಯೋಗ ಕಳೆದುಕೊಂಡ ಕ್ಷಣವೇ ಉದ್ಯೋಗಿ ಮತ್ತು ಅವರ ಕುಟುಂಬದವರು ತಕ್ಷಣವೇ ಅಮೆರಿಕ ತೊರೆಯಬೇಕಾಗುತ್ತದೆ. ಇಲ್ಲದಿದ್ದರೆ ವಲಸೆ ಕಾಯ್ದೆಯ ಉಲ್ಲಂಘನೆ ಎಂದು ಪರಿಗಣಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ.
ಉದ್ಯೋಗಿಗಳ ಮತ್ತು ಕಂಪನಿಗಳ ಮೇಲೆ ಪರಿಣಾಮ
ಈ ಹೊಸ ಶುಲ್ಕ ಏರಿಕೆಯು ಉದ್ಯೋಗಿಗಳ ಮೇಲೆ ಮಾತ್ರವಲ್ಲದೆ, ಅವರನ್ನು ನೇಮಕ ಮಾಡಿಕೊಳ್ಳುವ ಕಂಪನಿಗಳ ಮೇಲೂ ಆರ್ಥಿಕ ಹೊರೆಯನ್ನುಂಟುಮಾಡಲಿದೆ. ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳು ಇಂತಹ ಅತಿಯಾದ ಶುಲ್ಕವನ್ನು ಭರಿಸಲು ಹೆಣಗಾಡಬಹುದು. ಇದರಿಂದಾಗಿ ವಿದೇಶಿ ಪ್ರತಿಭೆಗಳಿಗೆ ಅಮೆರಿಕದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುವ ಸಾಧ್ಯತೆಯಿದೆ. ಅದೇ ಸಮಯದಲ್ಲಿ, ಕೆನಡಾ, ಯುಕೆ, ಆಸ್ಟ್ರೇಲಿಯಾ ಮುಂತಾದ ದೇಶಗಳು ಪ್ರತಿಭಾವಂತ ಉದ್ಯೋಗಿಗಳನ್ನು ಆಕರ್ಷಿಸಲು ಹೊಸ ನೀತಿಗಳನ್ನು ರೂಪಿಸುತ್ತಿವೆ. ಇದು ಅಮೆರಿಕದ ಆರ್ಥಿಕತೆಗೂ ದೀರ್ಘಾವಧಿಯಲ್ಲಿ ನಷ್ಟ ತರಬಹುದು.
