ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಸಂಯುಕ್ತ ಅರಬ್ ಎಮಿರೇಟ್ಸ್ (UAE) ಪಾಕಿಸ್ತಾನಿ ನಾಗರಿಕರಿಗೆ ವೀಸಾ ನೀಡುವುದನ್ನು ಬಹುತೇಕ ಸ್ಥಗಿತಗೊಳಿಸಿದ್ದು, ಇದರಿಂದ ಆ ದೇಶದ ಸಾಮಾನ್ಯ ನಾಗರಿಕರು ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಿಕ್ಷಾಟನೆ, ಅಪರಾಧ ಚಟುವಟಿಕೆಗಳು ಮತ್ತು ದಾಖಲೆಗಳ ಕೊರತೆಯಿಂದಾಗಿ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಯುಎಇ ಸರ್ಕಾರವು ಪ್ರಸ್ತುತ ಪಾಕಿಸ್ತಾನದ ಸರ್ಕಾರಿ ಅಧಿಕಾರಿಗಳು (ನೀಲಿ ಪಾಸ್‌ಪೋರ್ಟ್) ಮತ್ತು ರಾಜತಾಂತ್ರಿಕರಿಗೆ ಮಾತ್ರ ವೀಸಾ ನೀಡುತ್ತಿದೆ. ಆದರೆ, ಸಾಮಾನ್ಯ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು ಪ್ರವೇಶ ಪರವಾನಗಿ (ಲೈಸೆನ್ಸ್) ಪಡೆಯುವುದು ಈಗ ಕಷ್ಟಕರವಾಗಿದೆ. ಇದಕ್ಕಾಗಿ ದೀರ್ಘಾವಧಿಯ ಕಾನೂನು ಪ್ರಕ್ರಿಯೆಗಳು ಮತ್ತು ವಿಶೇಷ ಅನುಮೋದನೆಗಳ ಅಗತ್ಯವಿದ್ದು, ಹೆಚ್ಚಿನ ಅರ್ಜಿಗಳು ತಿರಸ್ಕರಿಸಲ್ಪಡುತ್ತಿವೆ.
ಈ ಬಗ್ಗೆ ಪಾಕಿಸ್ತಾನದ ಸೆನೆಟರ್ ಸಮೀನಾ ಮುಮ್ತಾಜ್ ಜೆಹ್ರಿ ಮಾತನಾಡಿ, ಅನೇಕ ಪಾಕಿಸ್ತಾನಿಗಳು ಸೌದಿ ಅರೇಬಿಯಾ ಮತ್ತು ಯುಎಇಗಳಲ್ಲಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ವೀಸಾ ನಿಷೇಧಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದ್ದಾರೆ. ಪ್ರವಾಸಿ ವೀಸಾದಲ್ಲಿ ತೆರಳಿ ಅಲ್ಲಿ ಭಿಕ್ಷಾಟನೆ ಮಾಡುವುದು ಅಥವಾ ನಿಯಮ ಬಾಹಿರವಾಗಿ ಕೆಲಸ ಮಾಡುವುದು ಆ ದೇಶಗಳ ಭದ್ರತೆಗೆ ಸವಾಲೊಡ್ಡಿದೆ. ಇದರಿಂದಾಗಿ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ , ಭಿಕ್ಷುಕರು ಮತ್ತು ನಿಖರ ದಾಖಲೆ ಇರದವರು ಇನ್ಮುಂದೆ ವಿದೇಶಕ್ಕೆ ಹೋಗುವಂತಿಲ್ಲಎಂಬ ಕಠಿಣ ಆದೇಶವನ್ನು ಹೊರಡಿಸಿದ್ದಾರೆ.
ಅಕ್ರಮ ನುಸುಳುಕೋರರನ್ನು ತಡೆಯಲು ಯುಎಇ ಇತ್ತೀಚೆಗೆ ಫೆಡರಲ್ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಿದೆ. ಸಂಘಟಿತ ಕಳ್ಳಸಾಗಣೆ ಅಥವಾ ಅಕ್ರಮವಾಗಿ ಆಶ್ರಯ ನೀಡುವವರಿಗೆ ಭಾರಿ ದಂಡ ವಿಧಿಸಲಾಗುತ್ತಿದೆ. ಅಕ್ರಮ ನುಸುಳುವಿಕೆಗೆ ಸಹಾಯ ಮಾಡಿದರೆ 1 ಲಕ್ಷ ದಿರ್ಹಮ್‌ನಿಂದ 50 ಲಕ್ಷ ದಿರ್ಹಮ್‌ವರೆಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಪ್ರವಾಸಿ ವೀಸಾದಲ್ಲಿ ಬಂದು ಕೆಲಸ ಮಾಡಿದರೆ ಕನಿಷ್ಠ 10,000 ದಿರ್ಹಮ್ ದಂಡ ಮತ್ತು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಪಾಕಿಸ್ತಾನದ ಲಕ್ಷಾಂತರ ಜನರು ಯುಎಇ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿಂದ ಬರುವ ವಿದೇಶಿ ಹಣವೇ ಪಾಕಿಸ್ತಾನದ ಆರ್ಥಿಕತೆಗೆ ದೊಡ್ಡ ಬೆನ್ನೆಲುಬಾಗಿದೆ. ಈಗ ವೀಸಾ ನಿರ್ಬಂಧಗಳಿಂದಾಗಿ ಹೊಸ ಉದ್ಯೋಗಾವಕಾಶಗಳು ಕೈತಪ್ಪುತ್ತಿದ್ದು, ಇದು ಪಾಕಿಸ್ತಾನದ ಆರ್ಥಿಕತಯ ಮೇಲೆ ಭಾರಿ ಪರಿಣಾಮ ಬೀಳಲಿದೆ.
ಯುಎಇ ಕೈಗೊಂಡಿರುವ ಈ ಕಠಿಣ ಕ್ರಮವು ಇತರ ಗಲ್ಫ್ ರಾಷ್ಟ್ರಗಳೂ ಅನುಸರಿಸುವ ಸಾಧ್ಯತೆಯಿದ್ದು, ಪಾಕಿಸ್ತಾನಿಗಳಿಗೆ ಅರಬ್ ರಾಷ್ಟ್ರಗಳಿಂದಲೂ ನಿರ್ಬಂಧ ಹೇರುವ ಭೀತಿ ಎದುರಾಗಿದೆ.
