ರಷ್ಯಾ ತೈಲ ಖರೀದಿ ನಿಲ್ಲಿಸದಿದ್ದರೆ ಮತ್ತಷ್ಟು ಸುಂಕ: ಭಾರತಕ್ಕೆ ಮತ್ತೆ ಟ್ರಂಪ್ ಎಚ್ಚರಿಕೆ

Untitled design 2026 01 05T113453.987

ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಯನ್ನು ತಕ್ಷಣವೇ ನಿಲ್ಲಿಸದಿದ್ದರೆ ಭಾರತದಿಂದ ಅಮೆರಿಕಕ್ಕೆ ಆಮದು ಆಗುವ ವಸ್ತುಗಳ ಮೇಲಿನ ಸುಂಕವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ. ರಷ್ಯಾ–ಉಕ್ರೇನ್ ಯುದ್ಧದ ಹಿನ್ನೆಲೆ ರಷ್ಯಾದೊಂದಿಗೆ ವ್ಯವಹಾರ ನಡೆಸುತ್ತಿರುವ ದೇಶಗಳ ಮೇಲೆ ಒತ್ತಡ ಹೇರಲು ಟ್ರಂಪ್ ಆಡಳಿತ ಮುಂದಾಗಿದೆ.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, “ಪ್ರಧಾನಿ ನರೇಂದ್ರ ಮೋದಿ ಒಳ್ಳೆಯ ವ್ಯಕ್ತಿ. ಆದರೆ ನಾನು ಸಂತೋಷವಾಗಿಲ್ಲ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ನನ್ನನ್ನು ಸಂತೋಷಪಡಿಸುವುದು ಮುಖ್ಯವಾಗಿತ್ತು. ಆದರೂ ಭಾರತ ರಷ್ಯಾದೊಂದಿಗೆ ತೈಲ ವ್ಯಾಪಾರ ಮುಂದುವರಿಸಿದೆ. ಇದು ಮುಂದುವರಿದರೆ ನಾವು ಬಹಳ ಬೇಗ ಮತ್ತಷ್ಟು ಸುಂಕ ವಿಧಿಸಬಹುದು” ಎಂದು ಹೇಳಿದ್ದಾರೆ.

ಈ ಹಿಂದೆ ಟ್ರಂಪ್, “ಮೋದಿ ನನಗೆ ಭರವಸೆ ನೀಡಿದ್ದಾರೆ, ಭಾರತ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸುತ್ತೆವೆ” ಎಂದು ಹೇಳಿಕೆ ನೀಡಿದ್ದರು. ಆದರೆ ಆ ಹೇಳಿಕೆಯ ನಂತರವೂ ಭಾರತ ರಷ್ಯಾದಿಂದ ಕಚ್ಚಾ ತೈಲ ಆಮದು ಮುಂದುವರಿಸಿತ್ತು. ಜಾಗತಿಕ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ತೈಲ ಲಭ್ಯವಾಗುತ್ತಿರುವುದರಿಂದ ಭಾರತದ ಶಕ್ತಿ ಭದ್ರತೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ಇದುವರೆಗೆ ಆರು ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ ಹೈನುಗಾರಿಕೆ ಹಾಗೂ ಕೃಷಿ ಕ್ಷೇತ್ರಗಳನ್ನು ಬಿಟ್ಟುಕೊಡಲು ಭಾರತ ನಿರಾಕರಿಸಿದ್ದರಿಂದ ಯಾವುದೇ ಅಂತಿಮ ಒಪ್ಪಂದ ಸಾಧ್ಯವಾಗಿಲ್ಲ. ಅಮೆರಿಕ ಈ ಕ್ಷೇತ್ರಗಳಲ್ಲಿ ತನ್ನ ಉತ್ಪನ್ನಗಳಿಗೆ ಮಾರುಕಟ್ಟೆ ಪ್ರವೇಶ ಬಯಸುತ್ತಿದೆ. ಆದರೆ ದೇಶೀಯ ರೈತರ ಹಿತಾಸಕ್ತಿಯ ಕಾರಣದಿಂದ ಭಾರತ ಕಠಿಣ ನಿಲುವು ತಾಳಿದೆ.

ಈ ಹಠವೇ ಟ್ರಂಪ್ ಆಡಳಿತದ ಅಸಮಾಧಾನಕ್ಕೆ ಕಾರಣವಾಗಿದ್ದು, ಇತ್ತೀಚೆಗೆ ಭಾರತದ ಕೆಲ ಉತ್ಪನ್ನಗಳ ಮೇಲೆ 25 ಶೇಕಡಾ ಹೆಚ್ಚುವರಿ ಸುಂಕ ವಿಧಿಸಲಾಗಿದೆ. ಇದನ್ನು ವ್ಯಾಪಾರ ಸಮರದ ಮುಂದಿನ ಹಂತವೆಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಯುರೋಪ್ ಸೇರಿದಂತೆ ಹಲವಾರು ರಾಷ್ಟ್ರಗಳು ಅಮೆರಿಕದ ಒತ್ತಡಕ್ಕೆ ಮಣಿದು ಮಾತುಕತೆ ನಡೆಸಿದ್ದರೂ, ಭಾರತ ಮಾತ್ರ ತನ್ನ ರಾಷ್ಟ್ರೀಯ ಹಿತಾಸಕ್ತಿಯನ್ನು ಮುಂದಿಟ್ಟು ಹಿಂದೆ ಸರಿಯುತ್ತಿಲ್ಲ.

ಇದರ ನಡುವೆ ಟ್ರಂಪ್ ಮತ್ತೊಂದು ಮಹತ್ವದ ಹೇಳಿಕೆ ನೀಡಿ, “ವೆನೆಜುವೆಲಾ ಅಮೆರಿಕದ ಸುಪರ್ದಿಯಲ್ಲೇ ಇರುತ್ತದೆ. ಅದನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ವೆನೆಜುವೆಲಾದಲ್ಲಿ ನಡೆದ ಅಮೆರಿಕ ಸೇನಾ ಕಾರ್ಯಾಚರಣೆ ಹಾಗೂ ಅಧ್ಯಕ್ಷ ನಿಕೋಲಸ್ ಮಡುರೊ ಕುಟುಂಬದ ಬಂಧನದ ಬಳಿಕ, ಮಾರ್-ಎ-ಲಾಗೊ ಕ್ಲಬ್‌ನಲ್ಲಿ ಮೊದಲ ಬಾರಿಗೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಈ ಮಾತು ಹೇಳಿದರು.

Exit mobile version