ವಾಷಿಂಗ್ಟನ್: ವಾಷಿಂಗ್ಟನ್‌ನಲ್ಲಿ ನಡೆದ ಪ್ರತಿಷ್ಠಿತ ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್ ಕಾರ್ಯಕ್ರಮದ ವೇಳೆ ಅಮೆರಿಕ ಅಧ್ಯಕ್ಷ ಟ್ರಂಪ್ ಮೇಲೆ ನಡೆದ ಗುಂಡಿನ ದಾಳಿ ಯತ್ನದ ಪ್ರಕರಣವು ಅಮೆರಿಕದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ 31 ವರ್ಷದ ಕೋಲ್ ಅಲೆನ್ ಎಂಬ ವ್ಯಕ್ತಿ, ದಾಳಿಗೆ ಮುನ್ನ ತನ್ನ ಕುಟುಂಬ ಸದಸ್ಯರಿಗೆ ಕಳುಹಿಸಿದ್ದ ಎನ್ನಲಾದ ಪತ್ರ ಇದೀಗ ಬಹಿರಂಗಗೊಂಡಿದೆ.
ತನಿಖಾ ಮೂಲಗಳ ಪ್ರಕಾರ, ದಾಳಿಗೆ ಮುನ್ನ ಆರೋಪಿ ತನ್ನ ಕುಟುಂಬದ ಸದಸ್ಯರಿಗೆ ಒಂದು ದೀರ್ಘ ಸಂದೇಶವನ್ನು ಕಳುಹಿಸಿದ್ದ. ಆ ಪತ್ರದಲ್ಲಿ ಅಲೆನ್ ಹೀಗೆ ಬರೆದಿದ್ದಾನೆ. ಪತ್ರದಲ್ಲಿ, “ಒಬ್ಬ ಪೀಡೋಫೈಲ್, ಅತ್ಯಾಚಾರಿ ಮತ್ತು ದೇಶದ್ರೋಹಿಯು ತನ್ನ ಅಪರಾಧಗಳಿಂದ ನನ್ನ ಕೈಗಳನ್ನು ಮಲಿನಗೊಳಿಸಲು ನಾನು ಇನ್ನು ಮುಂದೆ ಅವಕಾಶ ನೀಡುವುದಿಲ್ಲ” ಎಂದು ಬರೆದಿದ್ದಾನೆ ಎಂದು ತಿಳಿದುಬಂದಿದೆ.
ಈ ಪತ್ರದಲ್ಲಿ ಯಾವುದೇ ವ್ಯಕ್ತಿಯ ಹೆಸರನ್ನು ನೇರವಾಗಿ ಉಲ್ಲೇಖಿಸಲಾಗಿಲ್ಲ. ಇದರಿಂದಲೇ ತನಿಖಾಧಿಕಾರಿಗಳು ಹಾಗೂ ವಿಶ್ಲೇಷಕರು ಈ ಬರಹವು ಯಾರನ್ನು ಗುರಿಯಾಗಿಸಿಕೊಂಡು ಬರೆಯಲಾಗಿದೆ ಎಂಬುದರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಘಟನೆಯು ನಡೆದ ಸಂದರ್ಭ ಹಾಗೂ ಸ್ಥಳವನ್ನು ಗಮನಿಸಿದರೆ, ಈ ಪತ್ರವು Donald Trump ವಿರುದ್ಧವೇ ಇರಬಹುದು ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಈ ಘಟನೆ ಅಮೆರಿಕದ ರಾಜಕೀಯ ಮತ್ತು ಮಾಧ್ಯಮ ವಲಯದ ಪ್ರಮುಖ ಕಾರ್ಯಕ್ರಮವಾದ ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಡಿನ್ನರ್ ಸಂದರ್ಭದಲ್ಲಿ ನಡೆದಿದೆ. ಈ ಕಾರ್ಯಕ್ರಮಕ್ಕೆ ರಾಜಕೀಯ ನಾಯಕರು, ಮಾಧ್ಯಮ ಪ್ರತಿನಿಧಿಗಳು ಮತ್ತು ಗಣ್ಯರು ಹಾಜರಾಗಿದ್ದರು.
ತನಿಖಾ ಅಧಿಕಾರಿಗಳ ಪ್ರಕಾರ, ಕೋಲ್ ಅಲೆನ್ ದಾಳಿ ನಡೆಸುವ ಮೊದಲು ತನ್ನ ಕುಟುಂಬ ಸದಸ್ಯರಿಗೆ ಸಂದೇಶದ ಮೂಲಕ ತನ್ನ ಉದ್ದೇಶಗಳನ್ನು ಹಂಚಿಕೊಂಡಿದ್ದಾನೆ. ಇದು ಪೂರ್ವಯೋಜಿತ ದಾಳಿ ಯತ್ನವಾಗಿರಬಹುದು ಎಂಬುದನ್ನು ಸೂಚಿಸುತ್ತದೆ.
ಇದಕ್ಕೆ ಪ್ರತಿಕ್ರಿಯಿಸಿದ ದೊನಾಲ್ಡ್ ಟ್ರಂಪ್ , ತಮ್ಮ ಮೇಲೆ ಮಾಡಲಾಗಿರುವ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ದಾಳಿಕೋರನ ಪತ್ರವನ್ನು ಅವರು “ತೀವ್ರಗಾಮಿ ಮನೋಭಾವದ ಫಲ” ಎಂದು ವಿವರಿಸಿದ್ದು, ಯಾವುದೇ ನೈಜ ಆಧಾರವಿಲ್ಲದ ಆರೋಪಗಳೆಂದು ಹೇಳಿದ್ದಾರೆ. ತಮ್ಮ ವಿರುದ್ಧ ಇಂತಹ ವಿಷಯಗಳನ್ನು ಪ್ರಸಾರ ಮಾಡುತ್ತಿರುವ ಕೆಲವು ಮಾಧ್ಯಮಗಳನ್ನು ಕೂಡ ಅವರು ತೀವ್ರವಾಗಿ ಟೀಕಿಸಿದ್ದಾರೆ.
