ಬೆಂಗಳೂರು, ಅ.8: ವಿಶ್ವದ ಹವಾಮಾನ ವ್ಯವಸ್ಥೆ ಮೇಲೆ ಪರಿಣಾಮ ಬೀರುವ ಎಲ್ ನಿನೋ ಇದೀಗ ಅತ್ಯಂತ ಪ್ರಬಲ ಹಂತಕ್ಕೆ ತಲುಪುವ ಮುನ್ಸೂಚನೆ ಸಿಕ್ಕಿದೆ. ವಿಶ್ವ ಹವಾಮಾನ ಸಂಸ್ಥೆ (WMO) ಪ್ರಕಾರ, ಪ್ರಸ್ತುತ ಎಲ್ ನಿನೋ 2027ರ ಫೆಬ್ರವರಿವರೆಗೆ ಮುಂದುವರಿಯುವ ಸಾಧ್ಯತೆಯಿದೆ. ಕೇಂದ್ರ ಮತ್ತು ಪೂರ್ವ ಉಷ್ಣವಲಯದ ಪೆಸಿಫಿಕ್ ಮಹಾಸಾಗರದ ಸಮುದ್ರ ಮೇಲ್ಮೈ ತಾಪಮಾನವು ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಸಾಮಾನ್ಯಕ್ಕಿಂತ 3.7 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಬಹುದು. ಇದು 1950ರಿಂದ ದಾಖಲಾಗಿರುವ ಅತ್ಯಂತ ಪ್ರಬಲ ಎಲ್ ನಿನೋ ಘಟನೆಗಳ ಪೈಕಿ ಒಂದಾಗುವ ಸಾಧ್ಯತೆಯಿದೆ.
ಎಲ್ ನಿನೋ ಎಂದರೆ ಪೆಸಿಫಿಕ್ ಮಹಾಸಾಗರದ ಪೂರ್ವ ಮತ್ತು ಮಧ್ಯ ಭಾಗದಲ್ಲಿ ಸಮುದ್ರ ಮೇಲ್ಮೈ ನೀರು ಅಸಾಮಾನ್ಯವಾಗಿ ಬೆಚ್ಚಗಾಗುವ ನೈಸರ್ಗಿಕ ಹವಾಮಾನ ವಿದ್ಯಮಾನ. ಇದರ ಪರಿಣಾಮವಾಗಿ ವಿಶ್ವದ ವಿವಿಧ ಭಾಗಗಳಲ್ಲಿ ಮಳೆ ಮತ್ತು ತಾಪಮಾನದಲ್ಲಿ ಗಮನಾರ್ಹ ಬದಲಾವಣೆ ಉಂಟಾಗಬಹುದು. ಕೆಲ ಪ್ರದೇಶಗಳಲ್ಲಿ ಬರಗಾಲ, ಬಿಸಿಗಾಳಿ ಮತ್ತು ನೀರಿನ ಕೊರತೆ ಎದುರಾಗುವ ಸಾಧ್ಯತೆಯಿದ್ದರೆ, ಇನ್ನೂ ಕೆಲವು ಪ್ರದೇಶಗಳಲ್ಲಿ ಭಾರಿ ಮಳೆ, ಪ್ರವಾಹ ಮತ್ತು ಚಂಡಮಾರುತದಂತಹ ಹವಾಮಾನ ಘಟನೆಗಳ ಅಪಾಯ ಹೆಚ್ಚಾಗಬಹುದು.
ಈ ನಡುವೆ ಅಮೆರಿಕದ ಚಿಕಾಗೋ ವಿಶ್ವವಿದ್ಯಾಲಯದ Climate Impact Lab ನಡೆಸಿದ ವಿಶ್ಲೇಷಣೆಯೊಂದು ಆತಂಕಕಾರಿಯಾದ ಮಾಹಿತಿಯೊಂದನ್ನು ನೀಡಿದೆ. 2026ರ ಜೂನ್‌ನಿಂದ 2027ರ ಫೆಬ್ರವರಿವರೆಗೆ ಎಲ್ ನಿನೋದಿಂದ ಉಂಟಾಗುವ ಅತಿಯಾದ ಬಿಸಿಗಾಳಿಯ ಪರಿಣಾಮವಾಗಿ ಸಾಮಾನ್ಯ ವರ್ಷಕ್ಕೆ ಹೋಲಿಸಿದರೆ ಸುಮಾರು 4.51 ಲಕ್ಷ ಹೆಚ್ಚುವರಿ ಶಾಖ-ಸಂಬಂಧಿತ ಸಾವುಗಳು ಸಂಭವಿಸಬಹುದು ಎಂದು ವರದಿ ಅಂದಾಜಿಸಿದೆ. ಆದರೆ ಇದು ಖಚಿತ ಸಾವಿನ ಸಂಖ್ಯೆ ಅಲ್ಲ, ಹವಾಮಾನ ಮಾದರಿ ಮತ್ತು ಹಿಂದಿನ ತಾಪಮಾನ-ಮರಣ ಪ್ರಮಾಣದ ಮಾಹಿತಿಯನ್ನು ಆಧರಿಸಿದ ಅಂದಾಜಾಗಿದೆ. ವರದಿಯೂ ಇನ್ನೂ ಪೀರ್-ರಿವ್ಯೂ ಹಂತದಲ್ಲಿದೆ.
ವರದಿ ಪ್ರಕಾರ, ಎಲ್ ನಿನೋ ಅವಧಿಯಲ್ಲಿ ಜಾಗತಿಕ ಭೂಭಾಗದ ತಾಪಮಾನ ಸಾಮಾನ್ಯಕ್ಕಿಂತ ಸುಮಾರು 1.2°C ಹೆಚ್ಚಾಗಬಹುದು. ಅತಿ ಹೆಚ್ಚು ಬಿಸಿಯ ವಾತಾವರಣ ದಿನಗಳ ಸಂಖ್ಯೆಯೂ ಸಾಮಾನ್ಯ ವರ್ಷಕ್ಕಿಂತ 44% ಹೆಚ್ಚಾಗುವ ಸಾಧ್ಯತೆಯಿದೆ. ಭಾರತ ಸೇರಿದಂತೆ ದಕ್ಷಿಣ ಏಷ್ಯಾದ ದೇಶಗಳ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತದಲ್ಲಿ ತಾಪಮಾನ ಏರಿಕೆ, ನೀರಿನ ಲಭ್ಯತೆ ಮೇಲಿನ ಒತ್ತಡ ಮತ್ತು ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಉಂಟಾಗುವ ಅಪಾಯವಿದೆ.
ಎಲ್ ನಿನೋ ಪ್ರಭಾವದಿಂದ ಮಳೆಯ ಮಾದರಿಯಲ್ಲಿ ಬದಲಾವಣೆ ಉಂಟಾದರೆ ಕೃಷಿ ಉತ್ಪಾದನೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಬೆಳೆಗಳಿಗೆ ನೀರಿನ ಕೊರತೆ ಉಂಟಾದರೆ ಆಹಾರ ಪೂರೈಕೆ ಮತ್ತು ಬೆಲೆಗಳ ಮೇಲೂ ಒತ್ತಡ ಉಂಟಾಗಬಹುದು.
ಹೀಗಾಗಿ ಮುಂಬರುವ ತಿಂಗಳುಗಳಲ್ಲಿ ತಾಪಮಾನ, ಮಳೆ ಮತ್ತು ನೀರಿನ ಲಭ್ಯತೆಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಅಗತ್ಯವಿದೆ. ತಜ್ಞರು ಮುನ್ನೆಚ್ಚರಿಕೆ ವ್ಯವಸ್ಥೆ, ಹೀಟ್‌ವೇವ್ ಎಚ್ಚರಿಕೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಆರೋಗ್ಯ ಸೇವೆಗಳ ಸಿದ್ಧತೆಯನ್ನು ಬಲಪಡಿಸುವಂತೆ ಸೂಚಿಸಿದ್ದಾರೆ.
