ರಿಯಾದ್ ಅ.08: ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಸೇರಿದಂತೆ ಪ್ರಮುಖ ಪ್ರದೇಶಗಳ ಮೇಲೆ ಹೌತಿ ಉಗ್ರ ಸಂಘಟನೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದೆ. ಅಕ್ಟೋಬರ್ 6 ಮತ್ತು 7ರಂದು ನಡೆದ ಪ್ರತ್ಯೇಕ ದಾಳಿಗಳಲ್ಲಿ ರಿಯಾದ್‌ನ ಕಿಂಗ್ ಖಾಲಿದ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಹಾಗೂ ಅಭಾ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಗಳನ್ನು ಗುರಿಯಾಗಿಸಿ ಈ ದಾಳಿಯನ್ನು ನಡೆಸಲಾಗಿದೆ. ದಾಳಿಯಲ್ಲಿ ಒಟ್ಟು ಮೂವರು ಮೃತಪಟ್ಟಿದ್ದು, 36 ಮಂದಿ ಗಾಯಗೊಂಡಿದ್ದಾರೆ ಎಂದು ಸೌದಿ ಅರೇಬಿಯಾದ ಜನರಲ್ ಅಥಾರಿಟಿ ಆಫ್ ಸಿವಿಲ್ ಏವಿಯೇಷನ್ (GACA) ತಿಳಿಸಿದೆ.
ಅಭಾ ವಿಮಾನ ನಿಲ್ದಾಣದ ಮೇಲಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಮೃತರು ಮೊರಾಕೊ ಮತ್ತು ಅಲ್ಜೀರಿಯಾ ಮೂಲದ ನಿವಾಸಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದಾಳಿಯಲ್ಲಿ ಸೌದಿ ನಾಗರಿಕರು ಸೇರಿದಂತೆ ಬಾಂಗ್ಲಾದೇಶ ಮತ್ತು ಫಿಲಿಪ್ಪೀನ್ಸ್ ಮೂಲದ ನಿವಾಸಿಗಳು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.
ಇನ್ನು ರಿಯಾದ್‌ನ ಕಿಂಗ್ ಖಾಲಿದ್ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಮೇಲಿನ ದಾಳಿಯಲ್ಲಿ ಸುಡಾನ್ ಮೂಲದ ಓರ್ವ ನಿವಾಸಿ ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಐವರು ಸೌದಿ ನಾಗರಿಕರು, ಇಬ್ಬರು ಈಜಿಪ್ಟ್ ನಿವಾಸಿಗಳು ಹಾಗೂ ಓರ್ವ ಪಾಕಿಸ್ತಾನಿ ನಿವಾಸಿ ಇದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ದಾಳಿಗಳ ಪರಿಣಾಮ ಎರಡೂ ವಿಮಾನ ನಿಲ್ದಾಣಗಳಲ್ಲಿ ವಿಮಾನ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ಕೆಲವು ಆಸ್ತಿಪಾಸ್ತಿಗೂ ಹಾನಿಯಾಗಿದ್ದು, ತುರ್ತು ಸೇವಾ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿವೆ.
ಹೌತಿ ಸೇನಾ ವಕ್ತಾರ ಯಾಹ್ಯಾ ಸರಿ, ಸೌದಿ ಅರೇಬಿಯಾದ ಕಿಂಗ್ ಖಾಲಿದ್ ವಿಮಾನ ನಿಲ್ದಾಣ ಸೇರಿದಂತೆ ಹಲವು ಸ್ಥಳಗಳನ್ನು ಕ್ಷಿಪಣಿ ಮತ್ತು ಡ್ರೋನ್‌ಗಳ ಮೂಲಕ ಗುರಿಯಾಗಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ. ಅಭಾ ವಿಮಾನ ನಿಲ್ದಾಣ, ಖಮೀಸ್ ಮುಶೈತ್ ವಾಯುನೆಲೆ ಹಾಗೂ ಅಸೀರ್ ಪ್ರದೇಶದ ಕೆಲವು ಸ್ಥಳಗಳ ಮೇಲೂ ದಾಳಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ಸೌದಿ ನೇತೃತ್ವದ ಯೆಮನ್ ಒಕ್ಕೂಟವು ಸನಾ ನಗರದಲ್ಲಿ ದಾಳಿಗೆ ಬಳಸಲು ಸಿದ್ಧಪಡಿಸಲಾಗುತ್ತಿದ್ದ ಬ್ಯಾಲಿಸ್ಟಿಕ್ ಕ್ಷಿಪಣಿ ಉಡಾವಣಾ ವೇದಿಕೆಯನ್ನು ಧ್ವಂಸಗೊಳಿಸಿರುವುದಾಗಿ ಹೇಳಿದೆ.
ಹೌತಿ ದಾಳಿಯನ್ನು ಸೌದಿ ಅರೇಬಿಯಾ ತೀವ್ರವಾಗಿ ಖಂಡಿಸಿದೆ. ಹೌತಿ ಉಗ್ರರ ಈ ದಾಳಿಯನ್ನು ಭಾರತ ಕೂಡಾ ಖಂಡಿಸಿದೆ. ನಾಗರಿಕರು, ನಾಗರಿಕ ಮೂಲಸೌಕರ್ಯ ಮತ್ತು ಆರ್ಥಿಕ ಕೇಂದ್ರಗಳನ್ನು ಗುರಿಯಾಗಿಸುವುದು ಭಯೋತ್ಪಾದಕ ಕೃತ್ಯ ಎಂದು ಸೌದಿ ವಿದೇಶಾಂಗ ಸಚಿವಾಲಯ ಆರೋಪಿಸಿದೆ. ದೇಶದ ಭದ್ರತೆ, ಸಾರ್ವಭೌಮತ್ವ ಮತ್ತು ನಾಗರಿಕರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಹಕ್ಕು ಸೌದಿ ಅರೇಬಿಯಾಗೆ ಇದೆ ಎಂದು ಅದು ಹೇಳಿದೆ.
ಗಲ್ಫ್ ಸಹಕಾರ ಮಂಡಳಿ (GCC) ಕೂಡ ದಾಳಿಯನ್ನು ಖಂಡಿಸಿದ್ದು, ನಾಗರಿಕ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸುವುದು ಅಂತಾರಾಷ್ಟ್ರೀಯ ಕಾನೂನು ಮತ್ತು ನಿಯಮಗಳ ಉಲ್ಲಂಘನೆ ಎಂದು ಹೇಳಿದೆ. ಮತ್ತೊಂದೆಡೆ, ಸೌದಿ ಅರೇಬಿಯಾದಲ್ಲಿನ ಭದ್ರತಾ ಪರಿಸ್ಥಿತಿ ಹಿನ್ನೆಲೆಯಲ್ಲಿ ಅಮೆರಿಕ ರಾಯಭಾರ ಕಚೇರಿ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದ್ದು, ವಿಮಾನ ರದ್ದು, ವಾಯುಪ್ರದೇಶ ಮುಚ್ಚುವಿಕೆ ಮತ್ತು ಪ್ರಯಾಣ ವ್ಯತ್ಯಯದ ಸಾಧ್ಯತೆ ಬಗ್ಗೆ ಎಚ್ಚರಿಸಿದೆ.
