ರಷ್ಯಾದ ಇತ್ತೀಚಿನ ನಡೆಯಿಂದಾಗಿ ಜರ್ಮನಿ ಮತ್ತೊಮ್ಮೆ ಯುದ್ಧದ ಆತಂಕದ ನೆರಳಿನಲ್ಲಿ ನಿಲ್ಲುವಂತಾಗಿದೆ. ಪ್ರಸ್ತುತ ಉಕ್ರೇನ್ ವಿರುದ್ಧ ಸಮರ ಸಾರಿರುವ ರಷ್ಯಾ, ಜರ್ಮನಿಯೊಂದಿಗಿನ ರಾಜತಾಂತ್ರಿಕ ಸಂಬಂಧವನ್ನೂ ಸಂಪೂರ್ಣವಾಗಿ ಹಳಿ ತಪ್ಪಿಸಿದೆ.
ಹೈಬ್ರಿಡ್ ಸಮರ ಮತ್ತು ಡ್ರೋನ್ ಆತಂಕ
ರಷ್ಯಾ ಜರ್ಮನಿಯ ಮೇಲೆ ನೇರವಾಗಿ ಯುದ್ಧ ಸಾರಿಲ್ಲವಾದರೂ, ‘ಹೈಬ್ರಿಡ್ ಸಮರ’ದ ಮೂಲಕ ಜರ್ಮನಿಯನ್ನು ಗುರಿಯಾಗಿಸುತ್ತಿದೆ ಎಂಬ ಆರೋಪಗಳಿವೆ. ಇತ್ತೀಚೆಗೆ ಜರ್ಮನಿಯ ವಿಮಾನ ನಿಲ್ದಾಣಗಳು ಮತ್ತು ಸೂಕ್ಷ್ಮ ಪ್ರದೇಶಗಳ ಬಳಿ ಅನುಮಾನಾಸ್ಪದ ಡ್ರೋನ್ ಹಾಗೂ ಸಬೊಟೇಜ್ (ವಿಧ್ವಂಸಕ) ಯತ್ನಗಳು ಕಂಡುಬಂದಿದ್ದು, ಜರ್ಮನಿ ಸರ್ಕಾರ ಈ ಬಗ್ಗೆ ತೀವ್ರ ತನಿಖೆ ನಡೆಸುತ್ತಿದೆ.
ರಾಜತಾಂತ್ರಿಕ ಬಿಕ್ಕಟ್ಟು ಮತ್ತು ರಾಯಭಾರಿಗಳ ಉಚ್ಚಾಟನೆ
ಬಿಕ್ಕಟ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ಜರ್ಮನಿ ತನ್ನ ದೇಶದಲ್ಲಿದ್ದ ರಷ್ಯಾದ ಪ್ರಮುಖ ಕಾನ್ಸುಲೇಟ್ (ರಾಯಭಾರಿ) ಕಚೇರಿಗಳನ್ನು ಮುಚ್ಚಲು ಆದೇಶಿಸಿ, ಹಲವು ಅಧಿಕಾರಿಗಳನ್ನು ವಾಪಸ್ ಕಳುಹಿಸಿದೆ. ಇದರಿಂದಾಗಿ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಾಂಧವ್ಯ ತಳಕಚ್ಚಿದೆ.
ಉಕ್ರೇನ್‌ಗೆ ಜರ್ಮನಿಯ ಭಾರಿ ನೆರವು
ಉಕ್ರೇನ್ಗೆ ಬೃಹತ್ ಪ್ರಮಾಣದಲ್ಲಿ ಶಸ್ತ್ರಾಸ್ತ್ರ, ಆಧುನಿಕ ಟ್ಯಾಂಕ್ಗಳು ಹಾಗೂ ಹಣಕಾಸಿನ ನೆರವು ನೀಡುತ್ತಿರುವ ದೇಶಗಳಲ್ಲಿ ಜರ್ಮನಿ ಮುಂಚೂಣಿಯಲ್ಲಿದೆ. ಜರ್ಮನಿಯ ಈ ಮಿಲಿಟರಿ ಸಹಾಯವೇ ರಷ್ಯಾದ ಕಣ್ಣನ್ನು ಕೆಂಪಾಗಿಸಿದೆ.
ಜರ್ಮನಿ ನೇಟೋ (NATO) ಒಕ್ಕೂಟದ ಪ್ರಮುಖ ಸದಸ್ಯ ದೇಶವಾಗಿರುವುದರಿಂದ ರಷ್ಯಾ ನೇರ ಮಿಲಿಟರಿ ಯುದ್ಧಕ್ಕೆ ಕೈಹಾಕುವುದು ವಿರಳ. ಆದರೆ, ಜರ್ಮನಿಯ ಆಂತರಿಕ ಭದ್ರತೆಗೆ ಸೈಬರ್ ದಾಳಿ ಹಾಗೂ ಗೂಢಚರ್ಯೆಯ ಭೀತಿ ಹೆಚ್ಚುತ್ತಿರುವುದು ಜಾಗತಿಕ ಮಟ್ಟದಲ್ಲಿ ಹೊಸ ಆತಂಕಕ್ಕೆ ಕಾರಣವಾಗಿದೆ.
