ನವದೆಹಲಿ: ಪಾಕಿಸ್ತಾನ ಉಗ್ರ ಚಟುವಟಿಕೆಗಳ ತಾಣ ಎಂಬುದು ಮತ್ತೆ ಸಾಬೀತಾಗಿದೆ. ಅಮೆರಿಕಾ, ಪಾಕಿಸ್ತಾನದ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಹಾಗೂ ಅದರ ಅಂಗಸಂಸ್ಥೆ ಮಜೀದ್ ಬ್ರಿಗೇಡ್ ಸಂಘಟನೆಗಳನ್ನು ಉಗ್ರರ ಪಟ್ಟಿಗೆ ಸೇರಿಸಿ ಅಧಿಕೃತ ಘೋಷಣೆ ಮಾಡಿದೆ.
ಈ ಉಗ್ರ ಸಂಘಟನೆಗಳು ದಶಕಗಳಿಂದ ಪಾಕಿಸ್ತಾನ ಸರ್ಕಾರದ ವಿರುದ್ಧ ದಂಗೆಯಲ್ಲಿ ತೊಡಗಿದ್ದು, ಅನೇಕ ಮಾರಕ ದಾಳಿಗಳಿಗೆ ಕಾರಣವಾಗಿವೆ. 2024ರಲ್ಲಿ ಕರಾಚಿ ವಿಮಾನ ನಿಲ್ದಾಣ ಹಾಗೂ ಗ್ವಾದರ್ ಬಂದರು ಪ್ರಾಧಿಕಾರದ ಬಳಿ ಆತ್ಮಹತ್ಯಾ ದಾಳಿ ನಡೆಸಿದ್ದವು. 2025ರ ಮಾರ್ಚ್‌ನಲ್ಲಿ, ಕ್ವೆಟ್ಟಾದಿಂದ ಪೇಶಾವರಕ್ಕೆ ಹೋಗುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ರೈಲು ಅಪಹರಣ ಕೂಡ ಇವರೇ ನಡೆಸಿದ್ದು, 31 ಜನರು ಸಾವನ್ನಪ್ಪಿ, 300ಕ್ಕೂ ಹೆಚ್ಚು ಪ್ರಯಾಣಿಕರು ಒತ್ತೆಯಾಳುಗಳಾಗಿದ್ದರು.
BLA ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯಕ್ಕೆ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಹೆಸರಿನಲ್ಲಿ ಉಗ್ರ ಕೃತ್ಯಗಳನ್ನು ನಡೆಸಿ, ಜಗತ್ತಿನ ಭದ್ರತೆಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ.
ಇದೀಗ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಂ ಮುನೀರ್ ಭಾರತದ ವಿರುದ್ಧ ನೇರವಾಗಿ ಪರಮಾಣು ಬೆದರಿಕೆ ಒಡ್ಡಿದ್ದಾರೆ. ಅಮೆರಿಕದ ಟ್ಯಾಂಪಾದಲ್ಲಿ ಉದ್ಯಮಿ ಅದ್ವಾನ್ ಅಸಾದ್ ಆಯೋಜಿಸಿದ್ದ ಬ್ಲಾಕ್-ಟೈ ಭೋಜನದಲ್ಲಿ ಭಾಗವಹಿಸಿದ ಮುನೀರ್, “ಭಾರತ ನಮ್ಮ ಅಸ್ತಿತ್ವಕ್ಕೆ ಧಕ್ಕೆ ತಂದರೆ, ನಾವು ಅರ್ಧ ಜಗತ್ತನ್ನು ನಾಶ ಮಾಡುತ್ತೇವೆ” ಎಂದು ಉಗ್ರ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆ, ಭಾರತವು ಪಹಲ್ಲಾಮ್ ದಾಳಿಯ ಬಳಿಕ ತೆಗೆದುಕೊಂಡ ಕಠಿಣ ರಾಜತಾಂತ್ರಿಕ ಕ್ರಮಗಳ ಹಿನ್ನಲೆಯಲ್ಲಿ ಬಂದಿದೆ. ವಿಶೇಷವಾಗಿ, ಸಿಂಧೂ ನದಿ ಒಪ್ಪಂದ ಮುರಿಯುವ ಸಾಧ್ಯತೆ ಹಾಗೂ ಪಾಕಿಸ್ತಾನಕ್ಕೆ ನೀರಿನ ಹರಿವನ್ನು ತಡೆಯುವ ನಿರ್ಧಾರ, ಪಾಕಿಸ್ತಾನಕ್ಕೆ ದೊಡ್ಡ ಹಿನ್ನಡೆ ಆಗಿದೆ. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಪಾಕ್ ಸೇನಾಧಿಕಾರಿ ಮುನೀರ್ ಉದ್ಧಟ ಹೇಳಿಕೆ ನೀಡುತ್ತಿದ್ದಾರೆ.
