ಮುಜಾಫರಾಬಾದ್ (ಜುಲೈ 14): ಪಾಕಿಸ್ತಾನ ಆಡಳಿತದ ಕಾಶ್ಮೀರ (PoK) ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದ್ದು, ಪ್ರತಿಭಟನಾಕಾರರು ಮತ್ತು ಪಾಕಿಸ್ತಾನದ ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. ರಾವಲಕೋಟ್ ನಗರದ ಹೊಸ ಬಸ್ ಟರ್ಮಿನಲ್ ಸಮೀಪ ಭದ್ರತಾ ಪಡೆಗಳು ಮತ್ತು ಸ್ಥಳೀಯ ನಾಗರಿಕರ ನಡುವೆ ತೀವ್ರ ಘರ್ಷಣೆ ನಡೆದಿದೆ. ಈ ಘಟನೆಯಲ್ಲಿ ಹಲವರು ಗಾಯಗೊಂಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಸರ್ಕಾರದ ವಿರುದ್ಧ ನಾಗರಿಕರ ಪ್ರತಿಭಟನೆ
ಮಾಹಿತಿಯ ಪ್ರಕಾರ, ಮುಜಾಫರಾಬಾದ್ ಸೇರಿದಂತೆ ಪಿಒಕೆಯ ವಿವಿಧ ನಗರಗಳಲ್ಲಿ ಸರ್ಕಾರದ ವಿರುದ್ಧ ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆಯನ್ನು ನಿಯಂತ್ರಿಸಲು ಭದ್ರತಾ ಪಡೆಗಳು ಮೊದಲು ಲಾಠಿ ಪ್ರಹಾರ ಹಾಗೂ ಅಶ್ರುವಾಯು ಪ್ರಯೋಗಿಸಿದವು ಎಂದು ತಿಳಿದುಬಂದಿದೆ. ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡು ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ ಸಂದರ್ಭದಲ್ಲಿ ಗುಂಡಿನ ದಾಳಿ ನಡೆದಿರುವುದಾಗಿ ವರದಿಯಾಗಿದೆ.
ಸಾವನ್ನಪ್ಪಿದವರಲ್ಲಿ ಜಹೀದ್ ಮುಘಲ್, ಜಾಫರ್ ಮುಘಲ್, ಅರ್ಸಲಾನ್ ಅಕ್ಬರ್ ಹಾಗೂ ವಾಜಿದ್ ಹಯಾತ್ ಸೇರಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಇತರ ಮೃತರ ಗುರುತು ಹಾಗೂ ಘಟನೆಯ ಸಂಪೂರ್ಣ ವಿವರಗಳು ಇನ್ನಷ್ಟೇ ಅಧಿಕೃತವಾಗಿ ಸ್ಪಷ್ಟವಾಗಬೇಕಿದೆ.
ಇದಕ್ಕೂ ಒಂದು ದಿನ ಮೊದಲು ಅಮೆರಿಕದ ವಾಷಿಂಗ್ಟನ್‌ನಲ್ಲಿರುವ ಶ್ವೇತಭವನದ ಎದುರು ಪಿಒಕೆ ಮೂಲದ ಹಲವು ಮಂದಿ ಪ್ರತಿಭಟನೆ ನಡೆಸಿದ್ದರು. ಪಿಒಕೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ನಾಗರಿಕ ಪ್ರದೇಶಗಳಿಂದ ಪಾಕಿಸ್ತಾನಿ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿದ್ದರು.
ಪಿಒಕೆಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತ
ಈ ಪ್ರತಿಭಟನೆಯ ಕಾರಣದಿಂದಾಗಿ ಪಿಒಕೆಯಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ, ಆಹಾರ ಮತ್ತು ಅಗತ್ಯ ವಸ್ತುಗಳ ಕೊರತೆ ಉಂಟಾಗಿದೆ ಎಂದು ಆರೋಪಿ ಕೇಳಿಬಂದಿದೆ. ಅಲ್ಲಿನ ಸರ್ಕಾರವು ಮಹಿಳೆಯರು ಮತ್ತು ಮಕ್ಕಳ ಮೇಲೂ ತೀವ್ರ ಪೊಲೀಸ್ ದೌರ್ಜನ್ಯ ನಡೆಸುತ್ತಿದೆ. ಮೂಲ ಸೌಕರ್ಯ ಆಹಾರ ಮತ್ತು ಔಷಧಿಗಳಂತಹ ಅಗತ್ಯ ವಸ್ತುಗಳ ಪೂರೈಕೆಯನ್ನು ತಡೆದು, ಇಂಟರ್ನೆಟ್ ಸಂಪೂರ್ಣ ಸ್ಥಗಿತಗೊಳಿಸಿದೆ.
ಭಾರತಕ್ಕೆ ಮನವಿ:
ಪ್ರತಿಭಟನಾಕಾರರು, ಮಾನವೀಯ ನೆರವು ಒದಗಿಸುವ ಕುರಿತು ಭಾರತ ನೆರವಿಗೆ ಬರಬೇಕು ಎಂಬ ಮನವಿಯನ್ನೂ ಮಾಡಿದ್ದಾರೆ ಎನ್ನಲಾಗಿದೆ. ಮಾನವೀಯ ನೆರವು ತಲುಪಿಸಲು ಪೂಂಚ್ ಮತ್ತು ದೋಡಾ ಸೆಕ್ಟರ್‌ಗಳ ಮೂಲಕ ‘ಲೈನ್ ಆಫ್ ಕಂಟ್ರೋಲ್’ (LoC) ಅನ್ನು ಮುಕ್ತಗೊಳಿಸಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದ್ದಾರೆ. ನಿಶ್ಯಸ್ತ್ರ ನಾಗರಿಕರ ಮೇಲೆ ಈ ರೀತಿಯಲ್ಲಿ ಪ್ರಾಣಾಂತಿಕ ದಾಳಿ ಖಂಡನೀಯ, ಇದು ಅತ್ಯಂತ ದುರದೃಷ್ಟಕರ ಎಂದು ಭಾರತ ಹೇಳಿದೆ.
ಈ ಬೆಳವಣಿಗೆಗಳ ಕುರಿತು ಭಾರತವು ಪಾಕಿಸ್ತಾನದ ನೀತಿಯನ್ನು ಟೀಕಿಸಿದ್ದು, ನಾಗರಿಕರ ಹಕ್ಕುಗಳನ್ನು ಗೌರವಿಸುವಂತೆ ಆಗ್ರಹಿಸಿದೆ. ಆದರೆ, ಈ ಆರೋಪಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ಅಧಿಕೃತ ಪ್ರತಿಕ್ರಿಯೆ ಹಾಗೂ ಸ್ವತಂತ್ರ ಅಂತಾರಾಷ್ಟ್ರೀಯ ದೃಢೀಕರಣ ಎಲ್ಲ ಅಂಶಗಳಲ್ಲೂ ಲಭ್ಯವಾಗಿಲ್ಲ. ಆದ್ದರಿಂದ ಘಟನೆಗೆ ಸಂಬಂಧಿಸಿದ ಕೆಲವು ವಿವರಗಳು ಇನ್ನೂ ಸ್ವತಂತ್ರವಾಗಿ ಪರಿಶೀಲನೆಯಲ್ಲಿವೆ.
