ಶ್ರೀಲಂಕಾ ಚಂಡಮಾರುತ ಪೀಡಿತರಿಗೆ ಅವಧಿ ಮುಗಿದ ಆಹಾರ ಸಾಮಾಗ್ರಿ-ಔಷಧ ಕಳುಹಿಸಿದ ಪಾಕಿಸ್ತಾನ

Untitled design 2025 12 02T171519.967

ಇಸ್ಲಾಮಾಬಾದ್: ದಿತ್ವಾ ಚಂಡಮಾರುತದ ಹಾವಳಿಯಿಂದ ತತ್ತರಿಸಿರುವ ಶ್ರೀಲಂಕಾಕ್ಕೆ (Sri Lanka) ನೆರವಾಗಿ ಪಾಕಿಸ್ತಾನ (Pakistan) ಅವಧಿ ಮುಗಿದ ಆಹಾರ ಪದಾರ್ಥ ಹಾಗೂ ಔಷದಗಳನ್ನ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.ಇದು ಹೆಚ್ಚು ವಿವಾದಕ್ಕೆ ಕಾರಣವಾಗಿದೆ. ನೆರೆಹೊರೆಯ ದೇಶಕ್ಕೆ ‘ಸಹಾಯ’ ಎಂಬ ಹೆಸರಲ್ಲಿ ಬಳಕೆಯಾಗದ ಉತ್ಪನ್ನಗಳನ್ನು ರವಾನಿಸಿದ ಆರೋಪದ ಮೇಲೆ ಪಾಕಿಸ್ತಾನದ ವಿಪತ್ತು ನಿರ್ವಹಣಾ ಸಂಸ್ಥೆ ಮತ್ತು ವಿದೇಶಾಂಗ ಸಚಿವಾಲಯ ಟೀಕೆಗೆ ಗುರಿಯಾಗಿದೆ.

ಶ್ರೀಲಂಕಾ ದಶಕಗಳಲ್ಲಿ ಎದುರಾಗಿರುವ ಅತ್ಯಂತ ಭೀಕರ ನೈಸರ್ಗಿಕ ವಿಕೋಪದಿಂದ ಹಾಗೂ ಆರ್ಥಿಕ ಸಂಕಷ್ಟದಿಂದ ಹೋರಾಡುತ್ತಿದೆ. ಈ ಪರಿಸ್ಥಿತಿಯಲ್ಲಿ, ಪಾಕಿಸ್ತಾನ ಶ್ರೀಲಂಕಾಗೆ ವೈದ್ಯಕೀಯ ಮತ್ತು ಆಹಾರ ಸಹಾಯ ಸಾಮಗ್ರಿಗಳನ್ನು ವಿಮಾನ ಮತ್ತು ಹಡಗು ಮೂಲಕ ರವಾನಿಸಿತ್ತು. ಈ ‘ಉದಾರ ನೆರವು’ದ ಫೋಟೊಗಳನ್ನು ಪಾಕಿಸ್ತಾನ ಹೈಕಮಿಷನ್, ಶ್ರೀಲಂಕಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿತ್ತು. ಆದರೆ, ಈ ಚಿತ್ರಗಳಲ್ಲಿಯೇ ಪೆಟ್ಟಿಗೆಗಳ ಮೇಲೆ ಮುದ್ರಿತವಾದ ಮಾನ್ಯತಾ ದಿನಾಂಕ (Expiry Date) ಈ ಸಾಮಗ್ರಿಗಳು ಒಂದು ವರ್ಷದ ಹಿಂದೆಯೇ ಅವಧಿ ಮೀರಿದ್ದವೆ ಎಂದು ತಿಳಿಸುತ್ತಿವೆ.

ಈ ವಿಷಯ ತಿಳಿದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟೀಕೆಯ ಸುರಿಮಳೆ ಆರಂಭವಾಯಿತು. ಬಳಕೆದಾರರು, ಇದು ನಿಜವಾದ ಸಹಾನುಭೂತಿಯೇ ಅಥವಾ ತಮ್ಮ ಹಳೇ ದಾಸ್ತಾನನ್ನು ಕಳಚಲು ಒಂದು ಸುಲಭವಾದ ದಾರಿ ಕಂಡುಕೊಂಡಿರುವುದೇ ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ. ತಮ್ಮ ಹಿಂದಿನ ಪೋಸ್ಟ್‌ಗಳಿಗೆ ಬಂದ ಟೀಕೆಗಳನ್ನು ನೋಡಿದ ಪಾಕಿಸ್ತಾನ ಹೈಕಮಿಷನ್, ತಮ್ಮ ಮೂಲ ಪೋಸ್ಟ್ ಅನ್ನು ಡಿಲೀಟ್ ಮಾಡಿದೆ.

ಈ ಸಮಯದಲ್ಲಿ ಶ್ರೀಲಂಕಾ ಗಂಭೀರ ಸಂಕಷ್ಟದಲ್ಲಿ ಸಿಲುಕಿದೆ. ದಿತ್ವಾ ಚಂಡಮಾರುತದಿಂದ ನೂರಾರು ಜನರು ಮೃತಪಟ್ಟಿದ್ದಾರೆ, ಸಾವಿರಾರು ಮಂದಿ ಸ್ಥಳಾಂತರಿತರಾಗಿದ್ದಾರೆ ಮತ್ತು ಮೂಲಭೂತ ಸೌಕರ್ಯಗಳು ಹಾನಿಗೊಳಗಾಗಿವೆ. ದೇಶವು ಇನ್ನೂ ಆರ್ಥಿಕ ಬಿಕ್ಕಟ್ಟಿನಿಂದ ಹೊರಗೆಬರಲು ಹೊಸ್ತಿಲಲಿದ್ದಾಗ, ಈ ನೈಸರ್ಗಿಕ ವಿಪತ್ತು ಮತ್ತೊಂದು ದೊಡ್ಡ ಪೆಟ್ಟು ನೀಡಿದೆ. ಅಂತಹ ಕ್ಷಣಗಳಲ್ಲಿ, ಸುರಕ್ಷಿತ ಆಹಾರ, ಶುದ್ಧ ನೀರು ಮತ್ತು ಉತ್ತಮ ಗುಣಮಟ್ಟದ ವೈದ್ಯಕೀಯ ಸರಬರಾಜು ಅತ್ಯಂತ ನಿರ್ಣಾಯಕವಾಗಿರುತ್ತದೆ.

ಈ ಘಟನೆ, ವಿಪತ್ತು ಪೀಡಿತ ಪ್ರದೇಶಕ್ಕೆ ಕಳುಹಿಸುವ ಸಹಾಯ ಸಾಮಗ್ರಿಗಳ ಗುಣಮಟ್ಟ ಮತ್ತು ಮಾನ್ಯತೆಯನ್ನು ಪರಿಶೀಲಿಸುವ ಯಾವುದೇ ಕ್ರಮವಿಲ್ಲವೇ ,  ತೊಂದರೆಗೀಡಾದವರ ಕಷ್ಟವನ್ನು ಲಾಭದಾಯಕವಾಗಿ ಬಳಸಿಕೊಂಡು, ತಮ್ಮ ಬಳಕೆಯಾಗದ ಸರಕುಗಳನ್ನು ಅವರ ಮೇಲೆ ‘ಸಹಾಯ’ವೆಂದು ಸುರಿಸುವುದು ಎಷ್ಟು ನೈತಿಕ ? ಈ ರೀತಿಯ ಕ್ರಿಯೆಗಳು ಅಂತರರಾಷ್ಟ್ರೀಯ ಮಾನವತಾವಾದಿ ಸಹಾಯದ (Humanitarian Aid) ತತ್ತ್ವಗಳಿಗೆ ಧಕ್ಕೆ ತರುವುದಲ್ಲವೇ ಎಂಬ ಸಾಕಷ್ಟು ಪ್ರಶ್ನೆಗಳಿಗೆ ದಾರಿ ಮಾಡಿಕೊಟ್ಟಿದೆ.

Exit mobile version