ಪಾಕ್‌ಗೆ ಡಬಲ್ ಶಾಕ್: ಪೆಟ್ರೋಲ್ ಬಳಿಕ ವಿದ್ಯುತ್ ದರವೂ ದುಪ್ಪಟ್ಟು: ಸರ್ಕಾರ ಹೇಳಿದ್ದೇನು?

Untitled design 2026 04 12T191910.155

ಇಸ್ಲಾಮಾಬಾದ್, ಏಪ್ರಿಲ್ 12: ಅಮೆರಿಕ ಮತ್ತು ಇರಾನ್ ನಡುವೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನಲ್ಲಿ ನಡೆದ ಶಾಂತಿ ಮಾತುಕತೆ ವಿಫಲಗೊಂಡ ಬೆನ್ನಲ್ಲೇ, ಪಾಕಿಸ್ತಾನವು ತನ್ನ ದೇಶದಲ್ಲಿ ಪೆಟ್ರೋಲ್ ಮತ್ತು ವಿದ್ಯುತ್ ದರಗಳನ್ನು ಆಕಾಶಕ್ಕೇರಿಸಿದೆ. ಹಾರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದ ಪರಿಣಾಮ ಜಾಗತಿಕ ಇಂಧನ ಬೆಲೆ ಏರಿಕೆಯಾಗಿದ್ದು, ಅದರ ನೇರ ಪ್ರತಿಫಲ ಪಾಕಿಸ್ತಾನದ ಮೇಲೆ ಆಗಿದೆ.

ಸರ್ಕಾರವು ಮಾಸಿಕ ಇಂಧನ ವೆಚ್ಚ ಹೊಂದಾಣಿಕೆಯ ಅಡಿಯಲ್ಲಿ ಪ್ರತಿ ಯೂನಿಟ್‌ಗೆ 1.42 ಪಾಕಿಸ್ತಾನಿ ರೂಪಾಯಿ ವಿದ್ಯುತ್ ಸುಂಕವನ್ನು ಹೆಚ್ಚಿಸಿದೆ. ಇದರೊಂದಿಗೆ, ಪೆಟ್ರೋಲ್ ಮತ್ತು ಡೀಸೆಲ್ ದರಗಳು ದುಪ್ಪಟ್ಟಾಗಿವೆ. ಜನಸಾಮಾನ್ಯರ ಮೇಲೆ ಇದೊಂದು ಭಾರಿ ಹೊರೆಯಾಗಿ ಪರಿಣಮಿಸಿದೆ.

ಇಂಧನ ದರಗಳು ಆಕಾಶಕ್ಕೆ: ಪೆಟ್ರೋಲ್ ₹458.40, ಡೀಸೆಲ್ ₹520.35

ಪಾಕಿಸ್ತಾನ ಸರ್ಕಾರದ ಹೊಸ ಆದೇಶದಂತೆ, ಪೆಟ್ರೋಲ್ ಬೆಲೆಯನ್ನು ಶೇಕಡಾ 42.7 ರಷ್ಟು ಏರಿಕೆ ಮಾಡಲಾಗಿದೆ. ಈಗ ಒಂದು ಲೀಟರ್ ಪೆಟ್ರೋಲ್ ಬೆಲೆ 458.40 ಪಾಕಿಸ್ತಾನಿ ರೂಪಾಯಿ ತಲುಪಿದೆ. ಅದೇ ರೀತಿ, ಡೀಸೆಲ್ ದರದಲ್ಲಿ ಶೇಕಡಾ 54.9 ರಷ್ಟು ಏರಿಕೆಯಾಗಿದ್ದು, ಪ್ರತಿ ಲೀಟರ್ ಡೀಸೆಲ್ 520.35 ಪಾಕಿಸ್ತಾನಿ ರೂಪಾಯಿ ಆಗಿದೆ. ಈ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಪೂರೈಕೆ ವ್ಯತ್ಯಯ ಮತ್ತು ಸ್ಥಳೀಯ ಸಂಪನ್ಮೂಲ ಕೊರತೆಯಿಂದಾಗಿ ಈ ನಿರ್ಧಾರ ಅನಿವಾರ್ಯ ಎಂದು ಸರ್ಕಾರ ಹೇಳಿದೆ.

ವಿದ್ಯುತ್ ಸುಂಕದ ಏರಿಕೆ: ಯೂನಿಟ್‌ಗೆ 1.42 ರೂ.

ಪೆಟ್ರೋಲ್ ಬೆಲೆ ಏರಿಕೆಯ ನಂತರ, ವಿದ್ಯುತ್ ದರವನ್ನೂ ಹೆಚ್ಚಿಸಲಾಗಿದೆ. ಮಾಸಿಕ ಇಂಧನ ವೆಚ್ಚ ಹೊಂದಾಣಿಕೆಯಡಿ ಪ್ರತಿ ಯೂನಿಟ್‌ಗೆ 1.42 ಪಾಕಿಸ್ತಾನಿ ರೂಪಾಯಿ ವಿದ್ಯುತ್ ಸುಂಕ ಹೆಚ್ಚಳವಾಗಿದೆ. ಸಾಮಾನ್ಯ ಮನೆಗಳ ವಿದ್ಯುತ್ ಬಿಲ್‌ಗಳು ಇದರಿಂದ ಗಣನೀಯವಾಗಿ ಏರಲಿವೆ.

ವಿದ್ಯುತ್ ವಲಯದ ನಷ್ಟ: 397 ಶತಕೋಟಿ ರೂ.

2024-25ನೇ ಹಣಕಾಸು ವರ್ಷದಲ್ಲಿ, ಪ್ರಸರಣ ಮತ್ತು ವಿತರಣಾ ನಷ್ಟಗಳು ಮತ್ತು ದುರ್ಬಲ ಬಿಲ್ ವಸೂಲಿಗಳಿಂದಾಗಿ ಪಾಕಿಸ್ತಾನದ ವಿದ್ಯುತ್ ವಿತರಣಾ ವಲಯವು ಒಟ್ಟಾರೆಯಾಗಿ 397 ಶತಕೋಟಿ ರೂ.ಗಳಷ್ಟು ನಷ್ಟವನ್ನು ಅನುಭವಿಸಿದೆ ಎಂದು ವರದಿಗಳು ತಿಳಿಸಿವೆ. ಈ ನಷ್ಟವನ್ನು ಸರಿದೂಗಿಸಲು ಸರ್ಕಾರ ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ಹಾಕಿದೆ.

ಪಾಕಿಸ್ತಾನ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (FPCCI) ಪ್ರತಿನಿಧಿಯೊಬ್ಬರು, “ಕಳೆದ ಮೂರು ವರ್ಷಗಳಲ್ಲಿ ಕೈಗಾರಿಕಾ ವಲಯವು ಈಗಾಗಲೇ 564.7 ಶತಕೋಟಿ ರೂಪಾಯಿಗಳ ಒಟ್ಟು ಹೊರೆಯನ್ನು ಭರಿಸಿದೆ. ಮತ್ತಷ್ಟು ಹೆಚ್ಚಳವು ಕೈಗಾರಿಕಾ ಕಾರ್ಯಸಾಧ್ಯತೆಗೆ ಹಾನಿಕಾರಕ” ಎಂದು ಎಚ್ಚರಿಸಿದ್ದಾರೆ.

ಹಾರ್ಮುಜ್ ಜಲಸಂಧಿ ಬಿಕ್ಕಟ್ಟೇ ಮೂಲ ಕಾರಣ

ಅಮೆರಿಕ-ಇರಾನ್ ಮಾತುಕತೆ ವಿಫಲಗೊಂಡ ನಂತರ, ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ. ಜಾಗತಿಕ ತೈಲ ಸಾಗಣೆಯ ಸುಮಾರು 20% ರಷ್ಟು ಈ ಜಲಸಂಧಿ ಮೂಲಕ ಸಾಗುತ್ತದೆ. ಮಾರ್ಗ ಮುಚ್ಚಿದ್ದರಿಂದ ಅಂತಾರಾಷ್ಟ್ರೀಯ ತೈಲ ಬೆಲೆಗಳು ಗಗನಕ್ಕೇರಿದವು. ಪಾಕಿಸ್ತಾನದಂತಹ ತೈಲ ಆಮದು ರಾಷ್ಟ್ರವು ಈ ಏರಿಕೆಯನ್ನು ತಡೆದುಕೊಳ್ಳಲಾಗದೆ, ದೇಶೀಯ ದರಗಳನ್ನು ಹೆಚ್ಚಿಸಲೇಬೇಕಾಯಿತು. ಸರ್ಕಾರದ ಹೇಳಿಕೆಯ ಪ್ರಕಾರ, “ಇಂಧನ ಬೆಲೆ ಏರಿಕೆ ಅನಿವಾರ್ಯವಾಗಿತ್ತು. ಜಾಗತಿಕ ಬೆಲೆ ಏರಿಕೆಯ ಪರಿಣಾಮವನ್ನು ಗ್ರಾಹಕರೊಂದಿಗೆ ಹಂಚಿಕೊಳ್ಳುವುದು ಬೇರೆ ದಾರಿಯಿರಲಿಲ್ಲ.” ಎಂದು ತಿಳಿಸಿದೆ.

Exit mobile version