ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿ ಸಂಘರ್ಷ: ಕಾಬೂಲ್ ಮೇಲೆ ವೈಮಾನಿಕ ದಾಳಿ

Untitled design 2026 02 27T103158.919

ಇಸ್ಲಾಮಾಬಾದ್: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಗಡಿ ಪ್ರದೇಶದಲ್ಲಿ ಮತ್ತೆ ಭಾರೀ ಉದ್ವಿಗ್ನತೆ ತೀವ್ರಗೊಂಡಿದೆ.  ವೈಮಾನಿಕ ದಾಳಿ ಹಾಗೂ ಪ್ರತಿದಾಳಿಗಳ ಸರಮಾಲೆ ಎರಡೂ ರಾಷ್ಟ್ರಗಳ ಸಂಬಂಧವನ್ನು ಗಂಭೀರ ಹಂತಕ್ಕೆ ತಳ್ಳಿದ್ದು, ಪರಿಸ್ಥಿತಿ ಯುದ್ಧದ ಭೀತಿಯನ್ನೇ ಉಂಟುಮಾಡಿದೆ. ಪಾಕಿಸ್ತಾನ ಸರ್ಕಾರ ಅಫ್ಘಾನ್ ತಾಲಿಬಾನ್ ಆಡಳಿತದ ವಿರುದ್ಧ “ಮುಕ್ತ ಯುದ್ಧ” ಘೋಷಿಸಿರುವುದಾಗಿ ಹೇಳಿಕೊಂಡಿದ್ದು, ಇದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ.

ಈ ವಾರದ ಆರಂಭದಲ್ಲಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಗೆ ಪ್ರತೀಕಾರವಾಗಿ ಅಫ್ಘಾನ್ ಪಡೆಗಳು ಗಡಿಯಾಚೆ ದಾಳಿ ನಡೆಸಿದವು ಎಂದು ವರದಿಯಾಗಿದೆ. ಇದರ ಕೆಲವೇ ಗಂಟೆಗಳ ಬಳಿಕ ಪಾಕಿಸ್ತಾನವು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ ಮತ್ತು ದಕ್ಷಿಣ ಭಾಗದ ಕಂದಹಾರ್‌ ಮೇಲೆ ಬಾಂಬ್ ದಾಳಿ ನಡೆಸಿದಾಗಿ ತಿಳಿದುಬಂದಿದೆ. ದಾಳಿಗಳ ನಂತರ ಎರಡೂ ದೇಶಗಳ ಗಡಿ ಭಾಗಗಳಲ್ಲಿ ಭಾರೀ ಭೀತಿ ವಾತಾವರಣ ನಿರ್ಮಾಣವಾಗಿದೆ.

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯೆ ನೀಡುತ್ತಾ, “ನಮ್ಮ ತಾಳ್ಮೆಗೆ ಮಿತಿ ಇದೆ. ಈಗ ನಮ್ಮ ಮತ್ತು ನಿಮ್ಮ ನಡುವಿನ ಮುಕ್ತ ಯುದ್ಧ ಪ್ರಾರಂಭವಾಗಿದೆ” ಎಂದು ಕಟುವಾಗಿ ಎಚ್ಚರಿಸಿದ್ದಾರೆ. “ಆಪರೇಷನ್ ಗಜಬ್-ಲಿಲ್-ಹಕ್” ಹೆಸರಿನ ಕಾರ್ಯಾಚರಣೆ ಅಡಿಯಲ್ಲಿ ತಾಲಿಬಾನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಫ್ಘಾನ್ ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್, ಕಾಬೂಲ್‌ನಲ್ಲಿ ಕನಿಷ್ಠ ಮೂರು ಸ್ಫೋಟಗಳು ಕೇಳಿಬಂದಿರುವುದನ್ನು ದೃಢಪಡಿಸಿದ್ದಾರೆ. ಆದರೆ ದಾಳಿಯ ನಿಖರ ಸ್ಥಳಗಳು ಹಾಗೂ ಸಂಭವನೀಯ ಸಾವುನೋವುಗಳ ಬಗ್ಗೆ ತಕ್ಷಣದ ಮಾಹಿತಿ ಲಭ್ಯವಾಗಿಲ್ಲ ಎಂದಿದ್ದಾರೆ. ಜೊತೆಗೆ, ಪಾಕಿಸ್ತಾನವು ದಕ್ಷಿಣದ ಕಂದಹಾರ್ ಹಾಗೂ ಆಗ್ನೇಯ ಪ್ರಾಂತ್ಯ ಪಕ್ತಿಯಾ ಪ್ರದೇಶಗಳಲ್ಲಿಯೂ ವೈಮಾನಿಕ ದಾಳಿ ನಡೆಸಿದೆಯೆಂದು ಆರೋಪಿಸಿದ್ದಾರೆ.

ಇದಕ್ಕೂ ಮೊದಲು, ಕಳೆದ ಭಾನುವಾರ ಅಫ್ಘಾನ್ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಹಲವರು ಸಾವನ್ನಪ್ಪಿದರೆಂದು ಕಾಬೂಲ್ ಆರೋಪಿಸಿತ್ತು. ಅದಕ್ಕೆ ಪ್ರತೀಕಾರವಾಗಿ ಗುರುವಾರ ತಡರಾತ್ರಿ ಅಫ್ಘಾನ್ ಪಡೆಗಳು ಗಡಿಯಾಚೆಗೆ ನುಗ್ಗಿ ಪಾಕಿಸ್ತಾನದ ಹಲವು ಸೇನಾ ಠಾಣೆಗಳ ಮೇಲೆ ದಾಳಿ ನಡೆಸಿದೆಯೆಂದು ತಿಳಿಸಿತ್ತು. ಅಫ್ಘಾನ್ ರಕ್ಷಣಾ ಸಚಿವಾಲಯದ ಪ್ರಕಾರ, ಈ ಭೂ ದಾಳಿಯಲ್ಲಿ ತಮ್ಮ ಎಂಟು ಸೈನಿಕರು ಮೃತಪಟ್ಟಿದ್ದಾರೆ. ಜೊತೆಗೆ, ಒಂದು ಡಜನ್‌ಗೂ ಹೆಚ್ಚು ಪಾಕಿಸ್ತಾನಿ ಸೇನಾ ಚೌಕಿಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿಕೊಂಡಿದೆ.

ಗಡಿ ಪ್ರದೇಶದ ನಾಗರಿಕರ ಮೇಲೂ ಈ ಘರ್ಷಣೆ ಪರಿಣಾಮ ಬೀರಿದೆ. ಟೋರ್ಖಾಮ್ ಗಡಿ ದಾಟುವಿಕೆಯ ಬಳಿ ಪಾಕಿಸ್ತಾನದಿಂದ ಹಿಂದಿರುಗುತ್ತಿದ್ದ ಜನರ ಶಿಬಿರದ ಮೇಲೆ ಮಾರ್ಟರ್ ಶೆಲ್ ಬಿದ್ದಿದ್ದು, ಹಲವರು ಗಾಯಗೊಂಡಿದ್ದಾರೆ. ನಂಗರ್ಹಾರ್ ಪ್ರಾಂತ್ಯದ ಮಾಹಿತಿ ಮುಖ್ಯಸ್ಥ ಖುರೇಷಿ ಬದ್ಲುನ್ ಅವರ ಪ್ರಕಾರ, ಏಳು ನಿರಾಶ್ರಿತರು ಗಾಯಗೊಂಡಿದ್ದು, ಒಬ್ಬ ಮಹಿಳೆಯ ಸ್ಥಿತಿ ಗಂಭೀರವಾಗಿದೆ.

Exit mobile version