ನೆತನ್ಯಾಹು ಸಾ*ವಿನ ಸುದ್ದಿ ಸುಳ್ಳು..ವದಂತಿಗಳಿಗೆ ತೆರೆ ಎಳೆದ ಇಸ್ರೇಲ್ ಪ್ರಧಾನಿ; ಹೊಸ ವಿಡಿಯೋದಲ್ಲಿ ಏನಿದೆ?

Untitled design 2026 03 16T212513.701

ಜೆರುಸಲೆಮ್, ಮಾರ್ಚ್ 16: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರ ಸಾವಿನ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ (Social Media) ವ್ಯಾಪಕವಾಗಿ ಹರಡಿತ್ತು. ಈ ವದಂತಿಗಳಿಗೆ ತೆರೆ ಎಳೆಯುವಂತೆ ನೆತನ್ಯಾಹು ಅವರು ಇದೀಗ ಮತ್ತೊಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದು, ತಾವು ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿರುವುದನ್ನು ತೋರಿಸಿಕೊಟ್ಟಿದ್ದಾರೆ.

ಸಾವಿನ ವದಂತಿಗೆ ನೆತನ್ಯಾಹು ಉತ್ತರ
ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ನೆತನ್ಯಾಹು ಅವರು ಮೃತಪಟ್ಟಿದ್ದಾರೆ ಎಂಬ ಸುಳ್ಳು ಸುದ್ದಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರಧಾನಿ ಮೊದಲು ಕಾಫಿ ಕುಡಿಯುತ್ತಿರುವ ವಿಡಿಯೋವನ್ನು ಹಂಚಿಕೊಂಡು ತಾವು ಜೀವಂತವಾಗಿರುವುದನ್ನು ಸಾಬೀತುಪಡಿಸಿದ್ದರು. ಇದೀಗ ಜೆರುಸಲೆಮ್ ನ ಹೊರವಲಯದಲ್ಲಿರುವ ರೆಸಾರ್ಟ್ ಮಾದರಿಯ ಕೆಫೆಯೊಂದರಲ್ಲಿ ಚಿತ್ರೀಕರಿಸಲಾದ ಮತ್ತೊಂದು ವಿಡಿಯೋವನ್ನು ಅವರು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನೆತನ್ಯಾಹು ಅವರು ಕಾಣಿಸಿಕೊಂಡಿದ್ದು, ಕೆಫೆಯಲ್ಲಿದ್ದ ಜನರ ಜೊತೆ ಮಾತನಾಡುತ್ತಾ, ನಗುನಗುತಾ ಕಾಫಿ ಕುಡಿಯುತ್ತಿರುವುದನ್ನು ಕಾಣಬಹುದು.

ಆರು ಬೆರಳುಗಳ AI ವದಂತಿ ಸುಳ್ಳು
ಇದಕ್ಕೂ ಮುನ್ನ, ನೆತನ್ಯಾಹು ಅವರಿಗೆ ಆರು ಬೆರಳುಗಳಿವೆ ಎಂಬ AI-ಸೃಷ್ಟಿತ (AI-generated) ವದಂತಿಯೂ ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು. ಈ ಹೊಸ ವಿಡಿಯೋದಲ್ಲಿ ನೆತನ್ಯಾಹು ಅವರು ತಮ್ಮ ಬೆರಳುಗಳನ್ನು ಕ್ಯಾಮೆರಾ ಮುಂದೆ ತೋರಿಸುವ ಮೂಲಕ ಆ ಸುಳ್ಳು ಸುದ್ದಿಯನ್ನೂ ತಳ್ಳಿಹಾಕಿದ್ದಾರೆ. ಇದೀಗ ಐದು ಬೆರಳುಗಳನ್ನು ತೋರಿಸಿ ಸಾಬೀತುಪಡಿಸಿದ್ದಾರೆ.

ಇರಾನ್ ಮೇಲೆ ಗಂಭೀರ ಆರೋಪ
ನೆತನ್ಯಾಹು ಅವರ ಸಾವಿನ ಸುಳ್ಳು ಸುದ್ದಿ ಮತ್ತು AI ಮೂಲಕ ಸೃಷ್ಟಿಸಲಾದ ವದಂತಿಗಳ ಹಿಂದೆ ಇರಾನ್ ಪ್ರೇರಿತ ಕಿಡಿಗೇಡಿಗಳ ಕೈವಾಡವಿದೆ ಎಂದು ಇಸ್ರೇಲ್ ಅಧಿಕಾರಿಗಳು ಆರೋಪಿಸಿದ್ದಾರೆ. ಇಸ್ರೇಲ್ ನ ರಾಯಭಾರಿ ರೆವೆನ್ ಅಜರ್ ಅವರು ಸಹ ನೆತನ್ಯಾಹು ಸಂಪೂರ್ಣ ಆರೋಗ್ಯವಾಗಿದ್ದಾರೆ ಮತ್ತು ಅವರ ಸಾವಿನ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸುಳ್ಳು ಮಾಹಿತಿ ಹರಡುವ ಮೂಲಕ ಇಸ್ರೇಲ್ ವಿರುದ್ಧ ಸೈಬರ್ ಯುದ್ಧವನ್ನೇ ನಡೆಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೆತನ್ಯಾಹು ಅವರ ಈ ಹೊಸ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಸುಳ್ಳು ಸುದ್ದಿಗಳನ್ನು ನಂಬಿದ್ದವರಿಗೆ ಈ ವಿಡಿಯೋ ಸ್ಪಷ್ಟ ಉತ್ತರ ನೀಡಿದೆ. 

Exit mobile version