ಕಠ್ಮಂಡು, ಆಗಸ್ಟ್ 29: ನೇಪಾಳದಲ್ಲಿ ಕಂಡು ಕೇಳರಿಯದ ಭೀಕರ ಪ್ರವಾಹದ ನಡುವೆ ಮಾನವೀಯತೆಯನ್ನೇ ಪ್ರಶ್ನಿಸುವಂತಹ ಘಟನೆ ನಡೆದಿದೆ. ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಬಂದ ಬ್ಯಾಂಕ್ ಲಾಕರ್‌ವೊಂದನ್ನು ಸ್ಥಳೀಯರು ಒಡೆದು ಅದರಲ್ಲಿದ್ದ ಅಪಾರ ಪ್ರಮಾಣದ ಹಣವನ್ನು ದೋಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 29 ಮಂದಿಯನ್ನು ಬಂಧಿಸಿ, ಸುಮಾರು 92.68 ಲಕ್ಷ ನೇಪಾಳಿ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಇದರ ಭಾರತೀಯ ಮೌಲ್ಯ ಸುಮಾರು ರೂ. 57 ಲಕ್ಷ ಎಂದು ಅಂದಾಜಿಸಲಾಗಿದೆ.
ಪ್ರವಾಹದಿಂದಾಗಿ ಭೋಟೆಕೋಶಿ ಪ್ರದೇಶದಿಂದ ಕೊಚ್ಚಿಕೊಂಡು ಬಂದಿದ್ದ ಈ ಬ್ಯಾಂಕ್ ಲಾಕರ್, ಧಾದಿಂಗ್ ಜಿಲ್ಲೆಯ ಗಾಲ್ಚಿ ಗ್ರಾಮೀಣ ಪುರಸಭೆ-4ರ ಬೆಲ್ಖುಖೋಲಾ ಬಳಿಯ ತ್ರಿಶೂಲಿ ನದಿಯ ದಡದಲ್ಲಿ ಪತ್ತೆಯಾಗಿತ್ತು. ಲಾಕರ್ ಪತ್ತೆಯಾದ ಮಾಹಿತಿ ಪೊಲೀಸರಿಗೆ ದೊರೆಯುವಷ್ಟರಲ್ಲಿ ಸ್ಥಳೀಯರು ಅದನ್ನು ಬಲವಂತವಾಗಿ ಒಡೆದು ಅದರಲ್ಲಿದ್ದ ನಗದನ್ನು ತೆಗೆದುಕೊಂಡಿದ್ದರು ಎನ್ನಲಾಗಿದೆ.
ಪೊಲೀಸರ ಕಾರ್ಯಾಚರಣೆ
ಲಾಕರ್ ಒಡೆದು ಹಣ ದೋಚಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾದ ತಕ್ಷಣ ನೇಪಾಳ ಪೊಲೀಸ್ ಹಾಗೂ ಆರ್ಮ್ಡ್ ಪೊಲೀಸ್ ಫೋರ್ಸ್‌ನ ತಂಡಗಳು ಸ್ಥಳಕ್ಕೆ ತೆರಳಿ ಶೋಧ ಕಾರ್ಯಾಚರಣೆ ಆರಂಭಿಸಿದವು. ಕಾರ್ಯಾಚರಣೆಯಲ್ಲಿ 29 ಶಂಕಿತರನ್ನು ಬಂಧಿಸಲಾಗಿದ್ದು, ಅವರಿಂದ 92,68,505 ನೇಪಾಳಿ ರೂಪಾಯಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರ ವಯಸ್ಸು 19 ರಿಂದ 49 ವರ್ಷಗಳ ನಡುವಿನದ್ದಾಗಿದೆ. ಅವರಲ್ಲಿ ಹೆಚ್ಚಿನವರು ಗಾಲ್ಚಿ-4ರ ಮಸ್ತಾರ್ ಪ್ರದೇಶದ ನಿವಾಸಿಗಳಾಗಿದ್ದು, ಕೆಲವರು ಗಾಲ್ಚಿ-6ರ ಆದಮ್‌ಘಾಟ್ ಹಾಗೂ ಸಿದ್ಧಲೆಕ್-7ರ ಆದಮ್‌ತಾರ್ ಪ್ರದೇಶದವರು ಎಂದು ತಿಳಿದುಬಂದಿದೆ. ಚಿಟ್ವಾನ್ ಮತ್ತು ಪಾರ್ಸಾ ಮೂಲದ ಕೆಲವರು ಪ್ರಸ್ತುತ ಧಾದಿಂಗ್‌ನಲ್ಲಿ ವಾಸಿಸುತ್ತಿದ್ದಾರೆ.
ಲಾಕರ್‌ನಲ್ಲಿ ಇನ್ನಷ್ಟು ಹಣ ಇತ್ತೇ?
ವಶಪಡಿಸಿಕೊಂಡಿರುವ ಹಣದ ಮೂಲ ಹಾಗೂ ಲಾಕರ್‌ನಲ್ಲಿ ಒಟ್ಟು ಎಷ್ಟು ಹಣ ಇತ್ತು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.
ಇದೇ ವೇಳೆ, ಪ್ರವಾಹದಲ್ಲಿ ಮೃತಪಟ್ಟಿದ್ದ ಮಹಿಳೆಯ ಮೃತದೇಹದಿಂದ ಚಿನ್ನದ ಕಿವಿಯೋಲೆ ಕಳವು ಮಾಡಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆಯೂ ವರದಿಯಾಗಿದೆ. ಮೃತದೇಹದಿಂದ ಆಭರಣ ತೆಗೆಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ನೇಪಾಳದಲ್ಲಿ ಪ್ರವಾಹದ ಅಬ್ಬರ
ನೇಪಾಳದಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತದಿಂದಾಗಿ ಅಪಾರ ಪ್ರಮಾಣದ ಆಸ್ತಿ- ಪಾಸ್ತಿ ಹಾನಿ ಸಂಭವಿಸಿದೆ. ನೇಪಾಳದ ವಿಪತ್ತು ನಿರ್ವಹಣಾ ಪ್ರಾಧಿಕಾರ ಪರಿಷ್ಕರಿಸಿರುವ ಅಂಕಿ ಅಂಶಗಳ ಪ್ರಕಾರ, ಮೃತರ ಸಂಖ್ಯೆ 626ಕ್ಕೆ ಏರಿಕೆಯಾಗಿದ್ದು, 2,426 ಮಂದಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ನದಿಗಳು ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳಲ್ಲಿ ಪರಿಸ್ಥಿತಿ ಇನ್ನೂ ಆತಂಕಕಾರಿಯಾಗಿದೆ ಎಂದು ವರದಿಗಳಿ ತಿಳಿಸಿದೆ.
ಈ ನಡುವೆ ಪ್ರವಾಹದ ನೀರಿನಲ್ಲಿ ಕೊಚ್ಚಿ ಬಂದ ಲಾಕರ್ ಒಡೆದು ಹಣ ದೋಚಿದ ಪ್ರಕರಣವು ನೇಪಾಳದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
