ಮೆಕ್ಸಿಕೋದಲ್ಲಿ 6.3 ತೀವ್ರತೆಯ ಪ್ರಬಲ ಭೂಕಂಪನ

Untitled design 2026 01 02T222147.433

ಮೆಕ್ಸಿಕೋ ಸಿಟಿ: ದಕ್ಷಿಣ ಮೆಕ್ಸಿಕನ್ ರಾಜ್ಯವಾದ ಗೆರೆರೊದಲ್ಲಿ ಶುಕ್ರವಾರ ಬೆಳಗಿನ ಜಾವ 6.3 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ದಕ್ಷಿಣ ಹಾಗೂ ಮಧ್ಯ ಮೆಕ್ಸಿಕೊದ ಪ್ರದೇಶಗಳಲ್ಲಿ ಭಾರೀ ಕಂಪನ ಅನುಭವವಾಗಿದೆ. ಭೂಕಂಪದ ಪರಿಣಾಮ ಜನರು ಆತಂಕಗೊಂಡಿದ್ದಾರೆ.

ಜರ್ಮನ್ ಭೂವಿಜ್ಞಾನ ಸಂಶೋಧನಾ ಕೇಂದ್ರ (GFZ) ನೀಡಿರುವ ಮಾಹಿತಿಯ ಪ್ರಕಾರ, ಈ ಭೂಕಂಪ ಭೂಮಿಯ ಒಳಭಾಗದಲ್ಲಿ ಸುಮಾರು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ. ಇದೇ ವೇಳೆ, ಮೆಕ್ಸಿಕೋದ ರಾಷ್ಟ್ರೀಯ ಭೂಕಂಪಶಾಸ್ತ್ರ ಸಂಸ್ಥೆ ತಿಳಿಸಿರುವಂತೆ, ಭೂಕಂಪದ ಕೇಂದ್ರಬಿಂದು ಪೆಸಿಫಿಕ್ ಕರಾವಳಿಯ ಪ್ರಸಿದ್ಧ ಪ್ರವಾಸಿ ತಾಣವಾದ ಅಕಾಪುಲ್ಕೊ ಸಮೀಪದ ಗೆರೆರೊ ರಾಜ್ಯದ ಸಾನ್ ಮಾರ್ಕೋಸ್ ಪಟ್ಟಣದಲ್ಲಿ ಸಂಭವಿಸಿದೆ.

ಇನ್ನು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ (USGS) ಪ್ರಕಾರ, ಭೂಕಂಪವು ಗೆರೆರೊ ರಾಜ್ಯದ ಪರ್ವತ ಪ್ರದೇಶದಲ್ಲಿರುವ ರಾಂಚೊ ವಿಯಜೇ ಗ್ರಾಮದ ಸಮೀಪ, ಅಕಾಪುಲ್ಕೊದಿಂದ ಈಶಾನ್ಯಕ್ಕೆ ಸುಮಾರು 57 ಮೈಲು ದೂರದಲ್ಲಿ ಸಂಭವಿಸಿದೆ. ಈ ಸಂಸ್ಥೆಯ ಅಂದಾಜಿನ ಪ್ರಕಾರ ಭೂಕಂಪದ ಆಳ ಸುಮಾರು 35 ಕಿಲೋಮೀಟರ್ ಆಗಿದೆ.

ಭೂಕಂಪದ ತೀವ್ರತೆ ಎತ್ತರದ ಕಟ್ಟಡಗಳ ಮೇಲೆ ಪರಿಣಾಮ ಬೀರುವಷ್ಟು ಪ್ರಬಲವಾಗಿತ್ತು ಎನ್ನಲಾಗಿದ್ದು, ಅಕಾಪುಲ್ಕೊದ ಕರಾವಳಿ ಪ್ರದೇಶಗಳಿಂದ ಹಿಡಿದು ಜನನಿಬಿಡ ನಗರ ಕೇಂದ್ರಗಳವರೆಗೆ ಕಂಪನ ಅನುಭವವಾಗಿದೆ. ಕೆಲವೆಡೆ ಕಟ್ಟಡಗಳು ಅಲುಗಾಡಿದ್ದು, ಜನರು ಭೀತಿಯಿಂದ ತಕ್ಷಣವೇ ಹೊರಗೆ ಧಾವಿಸಿದ್ದಾರೆ. ಪ್ರವಾಸಿಗರಿಂದ ತುಂಬಿದ್ದ ಅಕಾಪುಲ್ಕೊ ನಗರದಲ್ಲೂ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಭೂಕಂಪದ ಸುದ್ದಿ ತಿಳಿದ ಕೂಡಲೇ ಮೆಕ್ಸಿಕೋ ಸಿಟಿ ಸೇರಿದಂತೆ ಹಲವು ನಗರಗಳಲ್ಲಿ ತುರ್ತು ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲಾಯಿತು. ಅಗ್ನಿಶಾಮಕ ದಳ, ಪೊಲೀಸ್ ಹಾಗೂ ವಿಪತ್ತು ನಿರ್ವಹಣಾ ತಂಡಗಳು ಕಟ್ಟಡಗಳು, ಸೇತುವೆಗಳು ಮತ್ತು ಮೂಲಸೌಕರ್ಯಗಳ ಪರಿಶೀಲನೆ ಆರಂಭಿಸಿವೆ.

ಮೆಕ್ಸಿಕೋದ ಅಧ್ಯಕ್ಷೆ ಕೌಡಿಯಾ ಶೀನ್‌ಬಾಮ್ ಅವರು ಈ ಕುರಿತು ಪ್ರತಿಕ್ರಿಯಿಸಿ, “ಗೆರೆರೊ ಸೇರಿದಂತೆ ಯಾವುದೇ ಪ್ರದೇಶದಲ್ಲಿ ಇದುವರೆಗೆ ಗಂಭೀರ ಹಾನಿ ಅಥವಾ ಪ್ರಾಣಾಪಾಯದ ವರದಿಗಳು ಲಭ್ಯವಾಗಿಲ್ಲ” ಎಂದು ತಿಳಿಸಿದ್ದಾರೆ.

ಭೂಕಂಪ ಸಂಭವಿಸಿದ ಸಮಯದಲ್ಲಿ ಮೆಕ್ಸಿಕೋ ನಗರ ಮತ್ತು ಅಕಾಪುಲ್ಕೊದಲ್ಲಿನ ನಿವಾಸಿಗಳು ಹಾಗೂ ಪ್ರವಾಸಿಗರು ಸುರಕ್ಷತಿಗಾಗಿ ಬೀದಿಗಳಿಗೆ ಧಾವಿಸಿದ್ದು, ಕೆಲ ಸಮಯ ಜನರು ತೆರೆಯಲ್ಲೇ ಉಳಿದರು. ಅಧಿಕಾರಿಗಳು ಪರಿಸ್ಥಿತಿ ಸಂಪೂರ್ಣವಾಗಿ ನಿಯಂತ್ರಣದಲ್ಲಿ ಇದೆ ಎಂದು ಭರವಸೆ ನೀಡಿದ್ದಾರೆ.

Exit mobile version