ಕಿಮ್ ಜಾಂಗ್ ಉನ್‌ಗೆ ಪ್ರಾಣಭಯ : ಏನೇನೆಲ್ಲ ಮುಂಜಾಗ್ರತೆ ತೆಗೆದುಕೊಳ್ತಾರೆ..?

ಬೈಕ್, ಕಾರು, ಟಿವಿ, (7)

ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಬಗ್ಗೆ ಬಗೆದಷ್ಟೂ ಮುಗಿಯದ ಕುತೂಹಲದ ಸಂಗತಿಗಳಿವೆ. ಈ ವ್ಯಕ್ತಿ ಹೇಗೆಂದರೆ ಪ್ರತಿಕ್ಷಣವೂ ಪ್ರಾಣಭಯದಿಂದ ಬಳಲುವ ವ್ಯಕ್ತಿ. ಮೊನ್ನೆ ಮೊನ್ನೆ ತಾನೇ ಕಿಮ್ ಜಾಂಗ್ ಉನ್ ಚೀನಾಗೆ ಭೇಟಿ ಕೊಟ್ಟಿದ್ದರು. ಬೀಜಿಂಗ್ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಜೊತೆ ಮಾತುಕತೆ ನಡೆಸಿದ್ದರು. ಈ ಮಾತುಕತೆ ಬಳಿಕ ಕಿಮ್ ಅಂಗರಕ್ಷಕರು ಕಿಮ್ ಕುಳಿತಿದ್ದ ಜಾಗದಲ್ಲಿ ಬೆವರನ್ನೂ ಬಿಡದಂತೆ ಸ್ಯಾನಿಟೈಸ್ ಮಾಡಿದ್ದ ವಿಡಿಯೋ ವೈರಲ್ ಆಗಿದೆ.

ಕಿಮ್ ನೀರು ಕುಡಿದ ನೀರಿನ ಗ್ಲಾಸ್, ಕುಳಿತಿದ್ದ ಕುರ್ಚಿಯ ಜಾಗ, ಓಡಾಡಿದ್ದ ಜಾಗ, ಟಚ್ ಮಾಡಿದ್ದ ಟೇಬಲ್ ಕವರ್, ಹೊದಿಕೆ, ಟೇಬಲ್ ಎಲ್ಲವನ್ನೂ ಕ್ಲೀನ್ ಮಾಡಿದ್ದಾರೆ. ಅಂದರೆ, ಈ ಜಾಗದಲ್ಲಿ ಕಿಮ್ ಇದ್ದರು ಎಂಬುದರ ಸೂಕ್ಷ್ಮ ಸಾಕ್ಷಿಗಳೂ ಸಿಕ್ಕದಂತೆ ಎಲ್ಲವನ್ನೂ ಸ್ಯಾನಿಟೈಸ್ ಮಾಡಿದ್ದಾರೆ.

ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಅವರ ಈ ವರ್ತನೆ ಹೊಸದೇನೂ ಅಲ್ಲ. ಉ.ಕೊರಿಯಾ ಬಳಿ ಅತ್ಯಾಧುನಿಕ ವಿಮಾನಗಳಿಲ್ಲ. ಜೊತೆಗೆ ಕಿಮ್ಗೆ ವಿಮಾನ ಪ್ರಯಾಣ ಭಯ. ಹೀಗಾಗಿ 2011ರಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ದೇಶದೊಳಗೆ ದೂರ ಪ್ರದೇಶಕ್ಕೆ ಸಂಚರಿಸಲು, ಮಿತ್ರ ದೇಶಗಳಾದ ರಷ್ಯಾ, ಚೀನಾ, ವಿಯೆಟ್ನಾಂಗೆ ಸಂಚರಿಸಲು ಅವರು ರೈಲನ್ನೇ ಬಳಸುತ್ತಾರೆ. ಕಾರಣ ಇಷ್ಟೇ. ವಿಮಾನದಲ್ಲಿ ಪ್ರಾಣ ಭಯ ಹೆಚ್ಚು. ಶತ್ರುಗಳು ಹೊಡೆಯಬಹುದು ಎಂಬ ಆತಂಕ. ಇದೆಲ್ಲ ಕಾರಣದಿಂದಾಗಿ ಕಿಮ್, ಎಷ್ಟೇ ದೂರ ಇರಲಿ, ರೈಲು ಪ್ರಯಾಣದಲ್ಲೇ ಪ್ರಯಾಣಿಸುತ್ತಾರೆ.

ಕಿಮ್ ಜಾಂಗ್ ಉನ್ ಅವರಿಗೆ ಅವರದ್ದೇ ಆದ ಪ್ರತ್ಯೇಕ ಬುಲೆಟ್ ಪ್ರೂಫ್ ಟ್ರೈನ್ ಇದೆ. ಆ ರೈಲಿನಲ್ಲೇ ಪ್ರಯಾಣ ಮಾಡ್ತಾರೆ. ಈ ಬಾರಿಯೂ ಅಷ್ಟೇ, ಉತ್ತರ ಕೊರಿಯಾದ ಪ್ಯೋಂಗ್ಯಾಂಗ್‌ನಿಂದ ಬೀಜಿಂಗ್‌ಗೆ ರೈಲಿನಲ್ಲೇ ಪ್ರಯಾಣ ಮಾಡಿದ್ಧಾರೆ. ಅದೂ ಕೂಡಾ ಸುಮಾರು 1000 ಕಿ.ಮೀ. ದೂರದ ಪ್ರಯಾಣ. ಈ ಹಿಂದೆ ರಷ್ಯಾಗೆ ಹೋದಾಗ, ಸಿಂಗಾಪುರಕ್ಕೆ ಹೋದಾಗಲೂ ಅಷ್ಟೇ, ಎಷ್ಟೇ ದೂರವಾಗಿದ್ದರೂ ರೈಲಿನಲ್ಲೇ ಹೋಗುತ್ತಾರೆ ಕಿಮ್ ಜಾಂಗ್ ಉನ್.

2023ರಲ್ಲಿ ರಷ್ಯಾಕ್ಕೆ ಕೂಡಾ ಕಿಮ್ ರೈಲಲ್ಲೇ ಹೋಗಿದ್ದರು. ಬಳಿಕ ಡೊನಾಲ್ಡ್ ಟ್ರಂಪ್ರನ್ನು ವಿಯೆಟ್ನಾಂನಲ್ಲಿ ಭೇಟಿ ಮಾಡಲು ರೈಲಿನಲ್ಲೇ 60 ಗಂಟೆ ಪ್ರಯಾಣ ಕೈಗೊಂಡಿದ್ದರು. ಅದಕ್ಕೂ ಮುನ್ನ 2018ರಲ್ಲಿ ಸಿಂಗಾಪುರದಲ್ಲಿ ಟ್ರಂಪ್ ಭೇಟಿಗೆ ಚೀನಾ ನೀಡಿದ್ದ ವಿಮಾನದಲ್ಲಿ ತೆರಳಿದ್ದರು.

ಕಿಮ್ ಜಾಂಗ್ ಉನ್ ಅವರಿಗೆ ರಷ್ಯಾ ಮತ್ತು ಚೀನಾ ಎರಡೂ ಮಿತ್ರ ರಾಷ್ಟ್ರಗಳೇ. ಆದರೆ, ವೈಯಕ್ತಿಕ ಭದ್ರತೆ ವಿಚಾರದಲ್ಲಿ ಆತ ಮಿತ್ರರನ್ನೂ ನಂಬುವುದಿಲ್ಲ. ಅಲ್ಲದೆ ಎರಡೂ ದೇಶಗಳ ಸೀಕ್ರೆಟ್ ಏಜೆಂಟ್‌ಗಳ ಬಗ್ಗೆ ಕಿಮ್ ಜಾಂಗ್‌ ಉನ್‌ಗೆ ಭಯವೂ ಇದೆ.

ಕಿಮ್ ಜಾಂಗ್ ಉನ್ ಎಲ್ಲಿಗೇ ಹೋಗಲಿ, ಪ್ರತ್ಯೇಕ ಟಾಯ್ಲೆಟ್, ಬಾತ್ ರೂಂ ವ್ಯವಸ್ಥೆ ಇರುತ್ತದೆ. ನೀರನ್ನೂ ಕೂಡಾ ಆತ ತನ್ನ ದೇಶದ್ದೇ ಬಳಸುವ ಕಿಮ್‌ಗೆ, ನೀರಿನಲ್ಲಿ ವಿಷಪ್ರಾಶನ ಮಾಡುವ ಭಯವೂ ಇದೆ. ಅಲ್ಲದೆ ಡಿಎನ್‌ಎ ಗುರುತು ಸಿಗದಂತೆ ಮೊಬೈಲ್ ಟಾಯ್ಲೆಟ್ ಇಟ್ಟುಕೊಂಡಿರುವ ಕಿಮ್, ತನ್ನ ದೇಹದ ತ್ಯಾಜ್ಯವನ್ನೂ ಕೂಡಾ ತನ್ನದೇ ದೇಶಕ್ಕೆ ತೆಗೆದುಕೊಂಡು ಹೋಗಿ ನಾಶ ಮಾಡುವ ಪದ್ಧತಿ ಅಳವಡಿಸಿಕೊಂಡಿದ್ಧಾರೆ. ಕಾರಣ ಸರಳ, ಎಲ್ಲಿಯೂ ಕೂಡಾ ತನ್ನ ಬಯಾಲಾಜಿಕಲ್ ಫುಟ್ ಪ್ರಿಂಟ್ ಇರಬಾರದು ಎನ್ನುವುದು.

ಟಾಯ್ಲೆಟ್ ತ್ಯಾಜ್ಯವನ್ನಷ್ಟೇ ಅಲ್ಲ, ಕಿಮ್ ಜಾಂಗ್ ಉನ್ ಸಿಗರೇಟ್ ಸೇದುತ್ತಾರೆ. ಆ ಸಿಗರೇಟಿನ ಬಟ್ಸ್ ಮತ್ತು ಬೂದಿಯನ್ನೂ ಕೂಡಾ ಉಳಿಸುವುದಿಲ್ಲ. ತಾನು ಬಳಸಿದ ಮ್ಯಾಚ್ ಬಾಕ್ಸ್‌ ಕೂಡಾ ತನ್ನದೇ ಆಗಿರುವಂತೆ ನೋಡಿಕೊಳ್ಳುವ ಕಿಮ್, ಆ ವಿಷಯದಲ್ಲಿ ನಂಬುವುದು ತನ್ನ ತಂಗಿಯನ್ನು ಮಾತ್ರ.

ಕಿಮ್ ತಾನು ಉಳಿದುಕೊಳ್ಳುವ ಹೋಟೆಲ್ಲಿನಲ್ಲಿ ಹೊರಹೋಗುತ್ತಿದ್ದಂತೆಯೇ ಆತನ ಅಂಗರಕ್ಷಕರು ಆತ ಉಳಿದುಕೊಂಡಿದ್ದ ಕೊಠಡಿಯಲ್ಲಿ ಕಿಮ್ ಅವರ ಫಿಂಗರ್ ಪ್ರಿಂಟ್, ಎಂಜಲು, ಬೆವರು ಸೇರಿದಂತೆ ಯಾವುದೇ ಗುರುತು ಉಳಿಸದಂತೆ ಕ್ಲೀನ್ ಮಾಡುತ್ತಾರೆ. ಕಿಮ್ ಸುತ್ತ ಕೇವಲ ಅತ್ಯಾಧುನಿಕ ಗನ್ ಹಿಡಿದ ಅಂಗರಕ್ಷಕರಷ್ಟೇ ಅಲ್ಲ, ಅವರಲ್ಲಿ ಕೆಮಿಕಲ್ ವಾರ್ ತಜ್ಞರೂ ಇರುತ್ತಾರೆ. ಕೆಮಿಕಲ್ ಬಳಸಿ ತನ್ನನ್ನು ಕೊಲ್ಲಬಹುದು ಎಂಬ ಭಯ ಕಿಮ್‌ಗೆ ಇದೆ.

ತನ್ನ ದೇಶದಲ್ಲಿಯೂ ಅಷ್ಟೇ. ಕಿಮ್ ಅವರ ಅಡುಗೆ ಮನೆಗೆ ಕೆಲಸಕ್ಕೆಂದು ಹೋದವರು ಹೊರ ಜಗತ್ತಿಗೆ ಗೊತ್ತಾಗುವಂತಿಲ್ಲ. ಅಡುಗೆ ಮಾಡಿ ಬಡಿಸುವ ಮೊದಲು ಅಡುಗೆ ಮಾಡಿದವರು, ಅಂಗರಕ್ಷಕರು ಮೊದಲು ತಿನ್ನಬೇಕು. ಸ್ವಲ್ಪ ಸಮಯ ಕಳೆದ ಬಳಿಕವಷ್ಟೇ ಕಿಮ್ ತಾವು ಸೇವಿಸುತ್ತಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೂ ತಮ್ಮ ಮಲ, ಮೂತ್ರಗಳನ್ನೂ ಕೂಡಾ ತಮ್ಮ ಅಂಗರಕ್ಷಕರಿಂದ ಸಂಗ್ರಹಿಸಿ, ರಷ್ಯಾಗೆ ತೆಗೆದುಕೊಂಡು ಹೋಗಿ ನಾಶ ಮಾಡುವ ಪದ್ಧತಿ ಇಟ್ಟುಕೊಂಡಿದ್ದಾರೆ. ಆದರೆ, ಕಿಮ್, ಪುಟಿನ್ ಅವರನ್ನೂ ಮೀರಿಸಿದ ರಕ್ಷಣಾ ಕೋಟೆಯಲ್ಲಿ ಬದುಕುತ್ತಿದ್ದಾರೆ.

ಮಹೇಶ್ ಕುಮಾರ್ ಕೆ ಎಲ್, ಕರೆಂಟ್ ಅಫೇರ್ಸ್/ಕಂಟೆಂಟ್ ಎಡಿಟರ್, ಗ್ಯಾರಂಟಿ ನ್ಯೂಸ್

Exit mobile version