ಯೆಮೆನ್‌ನಲ್ಲಿ ಕೇರಳ ನರ್ಸ್‌ಗೆ ಗಲ್ಲು ಶಿಕ್ಷೆ ತಪ್ಪಿಸಲು ಬಿಡುವುದಿಲ್ಲ: ಅಬ್ದೆಲ್‌ಫತಾ ಮೆಹ್ದಿ

ಗಲ್ಲು ಶಿಕ್ಷೆಯಿಂದ ಕೇರಳ ನರ್ಸ್‌ ರಕ್ಷಣೆಗೆ ತೀವ್ರ ಪ್ರಯತ್ನ

Untitled design 2025 07 15t144909.115

ಕೇರಳ ಮೂಲದ ನರ್ಸ್‌ ನಿಮಿಷಾ ಪ್ರಿಯಾ 2017ರಲ್ಲಿ ಯೆಮೆನ್‌ನಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಗಲ್ಲು ಶಿಕ್ಷೆ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ತಲಾಲ್‌ ಅಬ್ದೋ ಮೆಹ್ದಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಶಿಕ್ಷೆಗೆ ಗುರಿಯಾಗಿರುವ ನಿಮಿಷಾ ಪ್ರಿಯಾಗೆ ಜುಲೈ 16ರಂದು ಗಲ್ಲು ಶಿಕ್ಷೆ ವಿಧಿಸಬೇಕಿತ್ತು. ಆದರೆ, ಭಾರತ ಸರ್ಕಾರ, ಕೇರಳದ ಕಾಂತಾಪುರಂನ ಗ್ರ್ಯಾಂಡ್‌ ಮುಫ್ತಿ ಎ.ಪಿ.ಅಬೂಬಕರ್‌ ಮುಸ್ಲಿಯಾರ್‌ ಮತ್ತು ಇತರರ ಮಧ್ಯಸ್ಥಿಕೆಯಿಂದ ಶಿಕ್ಷೆಯನ್ನು ಸದ್ಯಕ್ಕೆ ಮುಂದೂಡಲಾಗಿದೆ.

ಮೆಹ್ದಿ ಕುಟುಂಬದಿಂದ ಕ್ಷಮೆಯಿಲ್ಲ:

ಹತ್ಯೆಗೀಡಾದ ತಲಾಲ್‌ ಅಬ್ದೋ ಮೆಹ್ದಿಯ ಸೋದರ ಅಬ್ದೆಲ್‌ಫತಾ ಮೆಹ್ದಿ, ನಿಮಿಷಾ ಪ್ರಿಯಾಗೆ ಕ್ಷಮಾದಾನ ನೀಡಬಾರದೆಂದು ಒತ್ತಾಯಿಸಿದ್ದಾರೆ. ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಅವರು, “ಗಲ್ಲು ಶಿಕ್ಷೆ ವಿಳಂಬವಾದದ್ದು ನಮಗೆ ಆಘಾತವನ್ನುಂಟು ಮಾಡಿದೆ. ನಿಮಿಷಾ ಪ್ರಿಯಾಗೆ ಯಾವುದೇ ಕಾರಣಕ್ಕೂ ಕ್ಷಮೆ ಸಿಗಬಾರದು, ಆಕೆಯನ್ನು ಗಲ್ಲಿಗೇರಿಸಬೇಕು. ಆಕೆಯನ್ನು ಸಂತ್ರಸ್ತೆ ಎಂದು ಬಿಂಬಿಸುವುದು ತಪ್ಪು. ನಮಗೆ ಕೇವಲ ನ್ಯಾಯ ಬೇಕು,” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತೀಯ ಮಾಧ್ಯಮಗಳ ಸುದ್ದಿ ವರದಿಗಳ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕ್ಷಮಾದಾನಕ್ಕೆ ತೀವ್ರ ಪ್ರಯತ್ನ

ನಿಮಿಷಾ ಪ್ರಿಯಾರ ಗಲ್ಲು ಶಿಕ್ಷೆಯನ್ನು ತಡೆಯಲು ಭಾರತ ಸರ್ಕಾರ, ಕೇರಳದ ಸಿಪಿಎಂ ಕಾರ್ಯದರ್ಶಿ ಎಂ.ವಿ.ಗೋವಿಂದನ್‌, ಕಾಂತಾಪುರಂನ ಗ್ರ್ಯಾಂಡ್‌ ಮುಫ್ತಿ ಎ.ಪಿ.ಅಬೂಬಕರ್‌ ಮುಸ್ಲಿಯಾರ್‌ ಮತ್ತು ಸೌದಿ ಅರೇಬಿಯಾದ ಏಜೆನ್ಸಿಗಳು ತೀವ್ರ ಪ್ರಯತ್ನ ನಡೆಸುತ್ತಿವೆ. ಮುಸ್ಲಿಯಾರ್‌ ಅವರು ಯೆಮೆನ್‌ನ ಶೂರಾ ಕೌನ್ಸಿಲ್‌ನ ಒಬ್ಬ ಸದಸ್ಯನಿಗೆ ಮಧ್ಯಸ್ಥಿಕೆ ವಹಿಸಲು ಮನವಿ ಮಾಡಿದ್ದಾರೆ. ಇದೇ ವೇಳೆ, ಕೇರಳದ ಉದ್ಯಮಿ ಎಂ.ಎ.ಯೂಸುಫ್‌ ಆಲಿ ಅವರು ಕ್ಷಮಾದಾನಕ್ಕಾಗಿ ಆರ್ಥಿಕ ನೆರವು ನೀಡುವ ಭರವಸೆಯನ್ನು ನೀಡಿದ್ದಾರೆ.

ಬ್ಲಡ್‌ ಮನಿ ಕುರಿತು ಭಿನ್ನಾಭಿಪ್ರಾಯ

ನಿಮಿಷಾ ಪ್ರಿಯಾಗೆ ಕ್ಷಮಾದಾನ ಕೊಡಿಸಲು ‘ಬ್ಲಡ್‌ ಮನಿ’ (ಕ್ಷಮಾದಾನಕ್ಕೆ ಪರಿಹಾರವಾಗಿ ಹಣ) ಪಾವತಿಸುವ ವಿಚಾರದಲ್ಲಿ ಮೆಹ್ದಿ ಕುಟುಂಬದ ನಡುವೆ ಭಿನ್ನಾಭಿಪ್ರಾಯಗಳಿವೆ. ಕೆಲವರು ಹಣವನ್ನು ಸ್ವೀಕರಿಸಲು ಸಿದ್ಧರಿದ್ದರೆ, ಇತರರು ಯಾವುದೇ ಕಾರಣಕ್ಕೂ ಕ್ಷಮಾದಾನಕ್ಕೆ ಒಪ್ಪದಿರುವುದರಿಂದ ಮಾತುಕತೆ ಇನ್ನೂ ಮುಂದುವರಿದಿದೆ.

Exit mobile version