ಕರಾಚಿಯ ಶಾಪಿಂಗ್ ಮಾಲ್‌ನಲ್ಲಿ ಭೀಕರ ಅಗ್ನಿ ಅವಘಡ; ಆರು ಮಂದಿ ಸಾವು

Untitled design 2026 01 18T212515.856

ಪಾಕಿಸ್ತಾನದ ಅತಿದೊಡ್ಡ ಮಹಾನಗರಿ ಕರಾಚಿಯ ವ್ಯಾಪಾರ ಸ್ಥಳದಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಶನಿವಾರ ತಡರಾತ್ರಿ ಶಾಪಿಂಗ್ ಮಾಲ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಒಟ್ಟು ಆರು ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸಮೀಪದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.

ಶಾರ್ಟ್ ಸರ್ಕ್ಯೂಟ್‌ನಿಂದ ಆರಂಭವಾದ ಬೆಂಕಿ

ಶಾಪಿಂಗ್ ಮಾಲ್‌ನ ನೆಲಮಹಡಿಯಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಮೊದಲಿಗೆ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿ, ಕೆಲವೇ ಕ್ಷಣಗಳಲ್ಲಿ ಇಡೀ ಬಹುಮಹಡಿ ಕಟ್ಟಡಕ್ಕೆ ವ್ಯಾಪಿಸಿದೆ. ಕಟ್ಟಡದ ಒಳಭಾಗದಲ್ಲಿ ಹೆಚ್ಚಿನ ಪ್ರಮಾಣದ ಪ್ಲಾಸ್ಟಿಕ್ ಸಾಮಗ್ರಿಗಳು, ಬಟ್ಟೆ ಅಂಗಡಿಗಳು ಹಾಗೂ ವಿದ್ಯುತ್ ಉಪಕರಣಗಳು ಇದ್ದ ಕಾರಣ ಬೆಂಕಿ ಮತ್ತಷ್ಟು ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಟ್ಟ ಹೊಗೆ; ಸಿಲುಕಿದ ಜನರು

ಕಟ್ಟಡದ ಬಹುತೇಕ ಕಿಟಕಿಗಳು ಮುಚ್ಚಿದ್ದರಿಂದ ಕಟ್ಟಡದ ಒಳಗೆ ದಟ್ಟ ಹೊಗೆ ತುಂಬಿಕೊಂಡಿತು. ಇದರಿಂದಾಗಿ ಒಳಗೆ ಸಿಲುಕಿದ್ದ ಗ್ರಾಹಕರು ಮತ್ತು ಸಿಬ್ಬಂದಿ ಉಸಿರುಗಟ್ಟುವ ಸ್ಥಿತಿಗೆ ತಲುಪಿದರು. ಹಲವರು ಮೇಲ್ಮಹಡಿಗಳಲ್ಲಿ ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸುವ ಕಾರ್ಯಾಚರಣೆ ಅಗ್ನಿಶಾಮಕ ದಳಕ್ಕೆ ಸವಾಲಾಗಿತು.

ಅಗ್ನಿಶಾಮಕ ದಳದ ಕಾರ್ಯಾಚರಣೆ

ಅಗ್ನಿ ಅವಘಡದ ಮಾಹಿತಿ ದೊರೆಯುತ್ತಿದ್ದಂತೆ ಹಲವು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಆದರೆ ದಟ್ಟ ಹೊಗೆ, ಕಿರಿದಾದ ರಸ್ತೆಗಳು ಹಾಗೂ ಕಟ್ಟಡದ ಒಳಗಿನ ತಾಪಮಾನ ಹೆಚ್ಚಿರುವುದರಿಂದ ಕಾರ್ಯಾಚರಣೆಗೆ ತೀವ್ರ ಅಡಚಣೆ ಎದುರಾಯಿತು. ರಕ್ಷಣಾ ಕಾರ್ಯಾಚರಣೆ ವೇಳೆ ಒಬ್ಬ ಅಗ್ನಿಶಾಮಕ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ..

ಕಟ್ಟಡದ ಭಾಗ ಕುಸಿತ

ಬೆಂಕಿಯ ತೀವ್ರತೆಯಿಂದ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದೆ.. ಕಟ್ಟಡವು ಸಂಪೂರ್ಣವಾಗಿ ಕುಸಿಯುವ ಭೀತಿ ಇರುವ ಹಿನ್ನೆಲೆಯಲ್ಲಿ, ಪೊಲೀಸರು ಶಾಪಿಂಗ್ ಮಾಲ್ ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ಸೀಲ್ ಮಾಡಿದ್ದಾರೆ. ಸಾರ್ವಜನಿಕರನ್ನು ದೂರವಿರಿಸುವಂತೆ ಸೂಚಿಸಲಾಗಿದೆ.

Exit mobile version