ಮ್ಯಾನ್ಮಾರ್, ಬ್ಯಾಂಕಾಕ್‌ನಲ್ಲಿ ಸಿಲುಕಿದ 47 ಮಂದಿ ಕನ್ನಡಿಗರು ಸೇಫ್‌

Untitled design 2025 03 29t120136.991

ಮ್ಯಾನ್ಮಾರ್ ಹಾಗೂ ಥೈಲಾಂಡ್‌ನ ಬ್ಯಾಂಕಾಕ್‌ ನಗರದಲ್ಲಿ ನಿನ್ನೆ ತೀವ್ರವಾದ ಭೂಕಂಪ ಸಂಭವಿಸಿದ್ದು, ಈ ಭೂಕಂಪದಿಂದಾಗಿ ಇದುವರೆಗೆ 694 ಜನರು ಪ್ರಾಣ ಕಳೆದುಕೊಂಡಿದ್ದು, 1670ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದಲ್ಲದೆ, 70ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಭೂಕಂಪದ ಕೇಂದ್ರಬಿಂದುವು ಮ್ಯಾನ್ಮಾರ್‌ನ ಯಾಂಗೋನ್‌ ಬಳಿ ದಾಖಲಾಗಿದ್ದು, ಇದರಿಂದಾಗಿ ಅಲ್ಲಿನ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಯಾಂಗೋನ್‌ ಮತ್ತು ಪರಿಸರ ಪ್ರದೇಶಗಳಲ್ಲಿ ಹಲವಾರು ಕಟ್ಟಡಗಳು ನೆಲಸಮವಾಗಿದ್ದು, ರಸ್ತೆಗಳು ಬಿರುಕು ಬಿಟ್ಟಿದ್ದು, ವಿದ್ಯುತ್ ಹಾಗೂ ಸಂಪರ್ಕ ವ್ಯವಸ್ಥೆಗಳು ಸಂಪೂರ್ಣವಾಗಿ ಕುಸಿತಗೊಂಡಿವೆ. ಈ ಭೂಕಂಪದ ಅನುಭವವನ್ನು ಪಕ್ಕದ ದೇಶಗಳಾದ ಥೈಲ್ಯಾಂಡ್‌ನ ಬ್ಯಾಂಕಾಕ್‌, ಲಾವೋಸ್‌, ಕಂಬೋಡಿಯಾ ಹಾಗೂ ಭಾರತದಲ್ಲಿಯೂ ಕೂಡ ಅನುಭವಿಸಲಾಗಿದೆ.

ಈ ಭೂಕಂಪದ ವಿಷಯ ಕರ್ನಾಟಕದ ಜನರನ್ನು ತೀವ್ರ ಆತಂಕಕ್ಕೆ ದೂಡಿತ್ತು. ಹಾವೇರಿ, ಹುಬ್ಬಳ್ಳಿ ಸೇರಿದಂತೆ ಕರ್ನಾಟಕದ ಹಲವಾರು ಜಿಲ್ಲೆಯವರು ಮ್ಯಾನ್ಮಾರ್ ಹಾಗೂ ಬ್ಯಾಂಕಾಕ್‌ನಲ್ಲಿ ಪ್ರವಾಸಕ್ಕೆ, ಉದ್ಯೋಗಕ್ಕಾಗಿ ಇದ್ದರು ಎನ್ನಲಾಗಿದೆ. ಆದರೆ ಶನಿವಾರ ಸಂಜೆ ಸರ್ಕಾರ ನೀಡಿದ ಮಾಹಿತಿಯ ಪ್ರಕಾರ, ಈ ಭೂಕಂಪ ಸಂಭವಿಸಿದ ಸ್ಥಳದಲ್ಲಿ ಹಾವೇರಿ ಜಿಲ್ಲೆಯಿಂದ ಪ್ರವಾಸಕ್ಕೆ ತೆರಳಿದ್ದ ಐವರು ಹಾಗೂ ಹುಬ್ಬಳ್ಳಿಯಿಂದ ಉದ್ಯೋಗಕ್ಕಾಗಿ ಹೋಗಿ, ಅಲ್ಲಿದ್ದ 42 ಮಂದಿ ಸೇರಿದಂತೆ ಒಟ್ಟು 47 ಕನ್ನಡಿಗರು ಸುರಕ್ಷಿತವಾಗಿದ್ದಾರೆ.

ಹಾವೇರಿ ಜಿಲ್ಲೆಯಿಂದ ಪ್ರವಾಸಕ್ಕೆ ತೆರಳಿದ್ದವರು ಸಫಾರಿ ವರ್ಲ್ಡ್‌ನಲ್ಲಿ ಇದ್ದಾಗ ಭೂಕಂಪ ಸಂಭವಿಸಿತು. ಭೂಕಂಪದ ಅನುಭವ ಮಾಡಿದ ಕೆಲವೇ ಕ್ಷಣಗಳಲ್ಲಿ, ತಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ವಿಡಿಯೋ ಸಂದೇಶ ಕಳಿಸಿ ” ಭೂಕಂಪ ಆಗಿದ್ದರೂ ನಾವು ಸುರಕ್ಷಿತರಾಗಿದ್ದೇವೆ” ಎಂಬ ಸ್ಪಷ್ಟನೆ ನೀಡಿದರು.

ಭೂಕಂಪದ ನಂತರ ತುರ್ತು ಪರಿಹಾರ ಕಾರ್ಯ ಆರಂಭವಾಗಿದ್ದು, ಮ್ಯಾನ್ಮಾರ್ ಹಾಗೂ ಥೈಲ್ಯಾಂಡ್ ಸರ್ಕಾರಗಳು ಸೇನಾ ಸಿಬ್ಬಂದಿ, ಅಗ್ನಿಶಾಮಕ ದಳ, ವೈದ್ಯರ ತಂಡಗಳನ್ನು ಘಟನಾ ಸ್ಥಳಗಳಿಗೆ ರವಾನಿಸಿದ್ದಾರೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಲು ಕಾರ್ಯಾಚರಣೆ ಮುಂದುವರೆದಿದೆ. ವಿವಿಧ ರಾಷ್ಟ್ರಗಳಿಂದ ಸಹಾಯ ಪಡೆದು, ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ಒದಗಿಸಲಾಗುತ್ತಿದೆ.

ಭಾರತ ಸರ್ಕಾರ ಕೂಡ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಮ್ಯಾನ್ಮಾರ್ ಹಾಗೂ ಥೈಲ್ಯಾಂಡ್‌ನಲ್ಲಿರುವ ಭಾರತೀಯರು, ವಿಶೇಷವಾಗಿ ಕನ್ನಡಿಗರ ಸ್ಥಿತಿಗತಿಯ ಕುರಿತು ನಿರಂತರ ಮಾಹಿತಿ ಸಂಗ್ರಹಿಸುತ್ತಿದೆ.

Exit mobile version