ಪರಸ್ಪರ ನಂಬಿಕೆ, ಸಹನೆ, ಹೊಂದಾಣಿಕೆ ಮತ್ತು ಮುಖ್ಯವಾಗಿ ಉತ್ತಮ ಸಂವಹನವೇ ದಾಂಪತ್ಯದ ಆಧಾರಸ್ತಂಭ ಎಂದು ಬಹುತೇಕರು ನಂಬುತ್ತಾರೆ. ಆದರೆ ಈ ಎಲ್ಲ ಸಾಮಾನ್ಯ ಕಲ್ಪನೆಗಳಿಗೆ ಸಂಪೂರ್ಣ ವಿರುದ್ಧವಾಗಿ, ಜಪಾನ್‌ನ ಒಂದು ದಂಪತಿಯ ಕಥೆ ಇಡೀ ಜಗತ್ತಿನ ಗಮನ ಸೆಳೆದಿದೆ.
ಜಪಾನ್‌ನ ನಾರಾ ಪ್ರದೇಶದಲ್ಲಿ ವಾಸಿಸುವ ಒಟೌ ಕಟಯಾಮಾ ಮತ್ತು ಅವರ ಪತ್ನಿ ಯುಮಿ ಕಟಯಾಮ ಅವರ ದಾಂಪತ್ಯ ಜೀವನ ಅಚ್ಚರಿ ಮತ್ತು ನೋವಿನ ತುಂಬಿದೆ. 1997ರಿಂದ 2017ರವರೆಗೆ, ಅಂದರೆ ಸುಮಾರು 20 ವರ್ಷಗಳ ಕಾಲ ಒಟೌ ತಮ್ಮ ಪತ್ನಿಯೊಂದಿಗೆ ಒಂದೇ ಒಂದು ಶಬ್ದವೂ ಮಾತನಾಡಿಲ್ಲ. ಒಂದೇ ಮನೆಯೊಳಗೆ ಬದುಕಿದ್ದರೂ, ಕುಟುಂಬವಾಗಿ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸಿದರೂ, ಗಂಡ-ಹೆಂಡತಿ ನಡುವಿನ ಸಂಭಾಷಣೆ ಸಂಪೂರ್ಣವಾಗಿ ನಿಂತಿತ್ತು.
ಈ ಮೌನದ ಆರಂಭ ಒಂದು ಸಣ್ಣ ಅಸಮಾಧಾನದಿಂದ ಆಗಿತ್ತು. ಮಕ್ಕಳ ಜನನದ ಬಳಿಕ ಯುಮಿ ತಮ್ಮ ಸಂಪೂರ್ಣ ಸಮಯವನ್ನು ಮಕ್ಕಳ ಪಾಲನೆಗೆ ಮೀಸಲಿಟ್ಟಿದ್ದರಿಂದ, ತನ್ನನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಭಾವನೆ ಒಟೌನನ್ನು ಕಾಡತೊಡಗಿತು. ಆರಂಭದಲ್ಲಿ ಅದು ನೋವಿನ ಭಾವನೆಯಾಗಿದ್ದರೂ, ನಿಧಾನವಾಗಿ ಅಸೂಯೆಯಾಗಿ ಪರಿವರ್ತನೆಗೊಂಡಿತು. ತನ್ನ ಭಾವನೆಗಳನ್ನು ಹೇಳಿಕೊಳ್ಳುವ ಬದಲು, ಒಟೌ ಮೌನವನ್ನು ಆಯ್ಕೆ ಮಾಡಿಕೊಂಡರು. ಆ ಮೌನವೇ ವರ್ಷಗಳ ಕಾಲ ಮುಂದುವರಿಯಿತು.
ಯುಮಿ ತಮ್ಮ ಪತಿಯೊಂದಿಗೆ ಮಾತನಾಡಲು ಅನೇಕ ಬಾರಿ ಪ್ರಯತ್ನಿಸಿದರು. ಆದರೆ ಪತಿ ಯಾವುದೇ ಪ್ರತಿಕ್ರಿಯೆ ನೀಡದೆ, ತಲೆಯಾಡಿಸುವ ಮೂಲಕ ಮಾತ್ರ ಉತ್ತರಿಸುತ್ತಿದ್ದರು. ಈ ಗಾಢ ಮೌನದ ನಡುವೆಯೂ ಯುಮಿ ವಿಚ್ಛೇದನ ಬಗ್ಗೆ ಯೋಚಿಸಲಿಲ್ಲ. ಪತಿಯ ಮೌನವನ್ನು ಸಹಿಸಿಕೊಂಡು, ಕುಟುಂಬವನ್ನು ಒಟ್ಟಿಗೆ ಉಳಿಸಿಕೊಂಡರು.
ಈ ಮೌನದ ನಡುವೆಯೇ ದಂಪತಿಗಳು ಮೂವರು ಮಕ್ಕಳನ್ನು ಬೆಳೆಸಿದರು. ಇಬ್ಬರು ಹೆಣ್ಣು ಮಕ್ಕಳು ಮೌನ ಆರಂಭಕ್ಕೂ ಮುಂಚೆಯೇ ಹುಟ್ಟಿದ್ದರೆ, ಮೂರನೇ ಮಗ ಈ ವಿಚಿತ್ರ ಮೌನದ ದಾಂಪತ್ಯದಲ್ಲೇ ಜನಿಸಿದ. ಅಚ್ಚರಿಯ ಸಂಗತಿಯೆಂದರೆ, ಈ ಮಗನಿಗೆ ತನ್ನ ತಂದೆ-ತಾಯಿ ಪರಸ್ಪರ ಮಾತನಾಡುವುದನ್ನು ನೋಡಲೇ ಇಲ್ಲ.
18 ವರ್ಷ ವಯಸ್ಸಿಗೆ ಬಂದ ಕಿರಿಯ ಪುತ್ರ ಯೋಶಿಕಿಗೆ ಈ ಪರಿಸ್ಥಿತಿ ಅತೀವ ನೋವು ತಂದಿತು. ತಂದೆ-ತಾಯಿ ನಡುವಿನ ಈ ಅಸಾಮಾನ್ಯ ಸಂಬಂಧದಿಂದ ಬೇಸತ್ತ ಅವನು, ಜಪಾನ್‌ನ ಪ್ರಸಿದ್ಧ ಟಿವಿ ಕಾರ್ಯಕ್ರಮ ‘ಟಿವಿ ಹೊಕ್ಕೊಡೊ’ಗೆ ಪತ್ರ ಬರೆದು ಸಹಾಯ ಕೇಳಿಕೊಂಡನು. ಈ ಪತ್ರವೇ 20 ವರ್ಷಗಳ ಮೌನವನ್ನು ಮುರಿಯಲು ಕಾರಣವಾಯಿತು.
ಕಾರ್ಯಕ್ರಮದ ತಂಡ ದಂಪತಿಯ ಕಥೆಯನ್ನು ತಿಳಿದುಕೊಂಡು, ಅವರ ನಡುವೆ ಮತ್ತೆ ಸಂಭಾಷಣೆ ಆರಂಭವಾಗುವಂತೆ ವಿಶೇಷ ಪ್ರಯತ್ನ ನಡೆಸಿತು. ಒಟೌ ಮತ್ತು ಯುಮಿ ಮೊದಲ ಬಾರಿಗೆ ಭೇಟಿಯಾದ ಉದ್ಯಾನವನದಲ್ಲೇ ಅವರನ್ನು ಮತ್ತೆ ಭೇಟಿಯಾಗುವಂತೆ ವ್ಯವಸ್ಥೆ ಮಾಡಲಾಯಿತು. ಆ ಕ್ಷಣವನ್ನು ಅವರ ಮಕ್ಕಳು ದೂರದಿಂದ ಕಣ್ಣೀರಿನೊಂದಿಗೆ ವೀಕ್ಷಿಸುತ್ತಿದ್ದರು.
ಕೊನೆಗೂ, 20 ವರ್ಷಗಳ ಮೌನದ ಬಳಿಕ ಒಟೌ ತಮ್ಮ ಪತ್ನಿಯೊಂದಿಗೆ ಮಾತನಾಡಿದರು. “ಇಷ್ಟು ವರ್ಷಗಳ ನಂತರ ನಿನ್ನೊಂದಿಗೆ ಮಾತನಾಡುತ್ತಿರುವುದು ವಿಚಿತ್ರವಾಗಿದೆ. ನೀನು ಇಷ್ಟು ದಿನ ಅನುಭವಿಸಿದ ಕಷ್ಟಗಳಿಗೆ ನಾನು ಕೃತಜ್ಞನಾಗಿದ್ದೇನೆ,” ಎಂದು ಭಾವೋದ್ರೇಕದಿಂದ ಹೇಳಿದರು. ತಮ್ಮ ಮೌನದಿಂದ ಯುಮಿಗೆ ನೋವುಂಟಾಗಿದೆ ಎಂಬುದನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದರು.
