ಲೇಖಕರು: ವೀರೇಶ್ ಪೂಜಾರ್, ಕಾಪಿ ಎಡಿಟರ್, ಗ್ಯಾರಂಟಿ ನ್ಯೂಸ್
ಟೋಕಿಯೋ: ಜಪಾನ್‌ನ ಸೈತಾಮಾ ಪ್ರಾಂತ್ಯದ ಕಾವಗೋಯೆ ನಗರದಲ್ಲಿ ಸ್ಥಳೀಯ ನಗರ ಯೋಜನಾ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣಗೊಂಡಿರುವ ಮಸೀದಿಯೊಂದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಸ್ಥಳೀಯ ಆಡಳಿತದ ಅನುಮತಿ ಇಲ್ಲದೇ ತಲೆಯೆತ್ತಿರುವ ಈ ಕಟ್ಟಡವನ್ನು ಕೆಡವಲು ಜಪಾನ್ ಸರ್ಕಾರ ಇದೀಗ ಆದೇಶ ಹೊರಡಿಸಿದೆ.
ನಿಯಮ ಉಲ್ಲಂಘನೆ
ಸುಮಾರು 4,500 ಚದರ ಮೀಟರ್ ವಿಸ್ತೀರ್ಣದ ಈ ಭೂಮಿಯನ್ನು ನಗರೀಕರಣ ನಿಯಂತ್ರಣ ಪ್ರದೇಶ ಎಂದು ಗುರುತಿಸಲಾಗಿದೆ. ಇಂತಹ ಪ್ರದೇಶಗಳಲ್ಲಿ ಸ್ಥಳೀಯ ಆಡಳಿತದ ವಿಶೇಷ ಅನುಮತಿ ಇಲ್ಲದೆ ಯಾವುದೇ ರೀತಿಯ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ. ಆದರೂ, ಇಲ್ಲಿ ನಾಲ್ಕು ಕಟ್ಟಡಗಳು ನಿರ್ಮಾಣಗೊಂಡಿವೆ, ಅವುಗಳಲ್ಲಿ ಈ ಮಸೀದಿಯೂ ಒಂದಾಗಿದೆ.
ಪ್ರಕರಣ ಹೇಗೆ ಬೆಳಕಿಗೆ ಬಂತು?
2024ರ ಅಕ್ಟೋಬರ್‌ನಲ್ಲಿ ಸ್ಥಳೀಯ ನಿವಾಸಿಗಳು ನೀಡಿದ ಮಾಹಿತಿ ಮೇರೆಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು. ಆದರೆ ಅಷ್ಟರಲ್ಲಿ ಕಟ್ಟಡದ ಹೊರಭಾಗ ಬಹುತೇಕ ಪೂರ್ಣಗೊಂಡಿತ್ತು. ಕಟ್ಟಡ ನಿರ್ಮಾಣದವರನ್ನು ಪತ್ತೆಹಚ್ಚುವುದು ಅಧಿಕಾರಿಗಳಿಗೆ ಸವಾಲಾಯಿತು. ಆಗಿನ ಭೂಮಿಯ ಮಾಲೀಕರಾಗಿದ್ದ ರಿಯಲ್ ಎಸ್ಟೇಟ್ ಏಜೆಂಟ್, ತಾವು ಜಮೀನನ್ನು ಮಾರಾಟ ಮಾಡಿರುವುದಾಗಿ ತಿಳಿಸಿ, ಹೊಸ ಖರೀದಿದಾರರ ವಿವರ ನೀಡಲು ನಿರಾಕರಿಸಿದರು.
ಸುಳ್ಳು ಭರವಸೆ ಮತ್ತು ಅಚ್ಚರಿಯ ಉದ್ಘಾಟನೆ
ಡಿಸೆಂಬರ್ 2024ರಲ್ಲಿ ನಗರ ಆಡಳಿತವು ಕಾಮಗಾರಿ ನಿಲ್ಲಿಸಲು ಆದೇಶಿಸಿತು. ಮಾರ್ಚ್ 2025ರಲ್ಲಿ ಭೂಮಿಯ ಮಾಲೀಕತ್ವ ಹೊಸ ಕಂಪನಿಗೆ ವರ್ಗಾವಣೆಯಾಯಿತು. ಹೊಸ ಮಾಲೀಕರು ಐದು ವರ್ಷಗಳೊಳಗೆ ಕಟ್ಟಡ ತೆರವುಗೊಳಿಸುವುದಾಗಿ ಲಿಖಿತ ಭರವಸೆ ನೀಡಿದರು. ಆದರೆ ಕೇವಲ ಒಂದು ತಿಂಗಳಲ್ಲೇ ಮಸೀದಿಯ ಉದ್ಘಾಟನೆಯೂ ನಡೆಯಿತು.
ಉದ್ಘಾಟನಾ ಸಮಾರಂಭಕ್ಕೆ ಜಪಾನ್‌ನಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಯ ಅಧಿಕಾರಿಯನ್ನು ವಿಶೇಷ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಅನೇಕ ವಿದೇಶಿ ನಾಗರಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಇದು ವಿವಾದವನ್ನು ಮತ್ತಷ್ಟು ತೀವ್ರಗೊಳಿಸಿತು.
ಮಾಲೀಕರ ಹೇಳಿಕೆಗಳಲ್ಲೇ ವ್ಯತ್ಯಾಸ
ಪ್ರಸ್ತುತ ಭೂಮಿಯ ಮಾಲೀಕತ್ವದ ಕಂಪನಿಯ ಮಾಲೀಕ, “ಕಟ್ಟಡ ನಿರ್ಮಾಣಕ್ಕೆ ಅನುಮತಿ ಇಲ್ಲ ಎಂಬುದು ತಿಳಿಯದೆ ಜಮೀನು ಖರೀದಿಸಿದೆ” ಎಂದು ಹೇಳಿದ್ದಾರೆ. ಆದರೆ ಅವರ ತಂದೆ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು, “ನಾವು ಜಮೀನು ಖರೀದಿಸುವ ಮುನ್ನವೇ ಕಟ್ಟಡ ಇತ್ತು. ಇದು ಪ್ರಾರ್ಥನೆಗಾಗಿ ಬಳಸುವ ಸ್ಥಳ” ಎಂದು ವಿರುದ್ಧ ಹೇಳಿಕೆ ನೀಡಿದ್ದಾರೆ.
ಜಪಾನ್‌ನಲ್ಲಿ ಹೆಚ್ಚುತ್ತಿರುವ ಮಸೀದಿಗಳು
ತಜ್ಞರ ಪ್ರಕಾರ, 2025ರ ಜುಲೈ ವೇಳೆಗೆ ಜಪಾನ್‌ನಲ್ಲಿ ಸುಮಾರು 160 ಮಸೀದಿಗಳು ಕಾರ್ಯನಿರ್ವಹಿಸುತ್ತಿವೆ. ಸೈತಾಮಾ ಪ್ರಾಂತ್ಯದಲ್ಲೇ ಕನಿಷ್ಠ 17 ಮಸೀದಿಗಳಿವೆ. ಹೆಚ್ಚಿನ ಮಸೀದಿಗಳು ಸ್ಥಳೀಯರೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತವೆ. ಫುಜಿಸಾವಾ ಮತ್ತು ಕನಜಾವಾ ನಗರಗಳಲ್ಲಿ ಮಸೀದಿ ನಿರ್ಮಾಣದ ವೇಳೆ ಸಂಘಟಕರು ಸಾರ್ವಜನಿಕ ಸಭೆ ನಡೆಸಿ ನಿವಾಸಿಗಳೊಂದಿಗೆ ಸಂವಾದ ನಡೆಸಿದ್ದು ಉದಾಹರಣೆಯೂ ಇವೆ.
ಯಶಿಯೋ ಮಸೀದಿಯ ಯಶಸ್ಸಿನ ಮಾದರಿ
ಸೈತಾಮಾ ಪ್ರಾಂತ್ಯದ ಯಶಿಯೋ ಮಸೀದಿ 2000ರಲ್ಲಿ ಆರಂಭವಾಗಿತ್ತು. ಇದು ನಿರ್ಮಾಣಕ್ಕೂ ಮುನ್ನ ನಗರ ಆಡಳಿತ ಮತ್ತು ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿತ್ತು. ನಂತರ ಅದು ಅಧಿಕೃತ ಧಾರ್ಮಿಕ ಸಂಸ್ಥೆಯಾಗಿ ನೋಂದಾಯಿಸಲ್ಪಟ್ಟಿತು. ಇಂದಿಗೂ ಅದು ಹಬ್ಬಗಳ ಮಾಹಿತಿಯನ್ನು ಮುಂಚಿತವಾಗಿ ನೀಡುವುದು, ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮೂಲಕ ಸ್ಥಳೀಯರೊಂದಿಗೆ ಸಂಪರ್ಕದಲ್ಲಿದೆ.
ಸರ್ಕಾರದ ಅಂತಿಮ ಆದೇಶ
ಅನುಮತಿಯಿಲ್ಲದೆ ನಿರ್ಮಾಣಗೊಂಡ ಕಾವಗೋಯೆ ಮಸೀದಿಯನ್ನು ಸಂಪೂರ್ಣವಾಗಿ ಧ್ವಂಸ ಮಾಡುವಂತೆ ಜಪಾನ್ ಸರ್ಕಾರ ಆದೇಶ ಹೊರಡಿಸಿದೆ. ನಗರೀಕರಣಕ್ಕೆ ಅವಕಾಶವೇ ಇಲ್ಲದ ಈ ಸ್ಥಳದಲ್ಲಿ ಕಟ್ಟಡ ಎದ್ದಿರುವುದು ಗಂಭೀರ ಉಲ್ಲಂಘನೆಯಾಗಿದೆ. ಸ್ಥಳೀಯ ಆಡಳಿತದ ನಿಯಮಗಳು ಮತ್ತು ಸಮುದಾಯದ ಸೂಕ್ಷ್ಮತೆಗಳನ್ನು ಅರ್ಥೈಸಿಕೊಳ್ಳದೆ ಮುಂದಾದ ಕ್ರಮವೇ ಈ ಮಸೀದಿಯ ಧ್ವಂಸಕ್ಕೆ ಕಾರಣವಾಗಿದೆ.
