ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡಗಳು ಕವಿದಿವೆ. ವಾರಗಳ ಕಾಲ ಎಚ್ಚರಿಕೆ ನೀಡಿದ್ದ ಇಸ್ರೇಲ್, ಶನಿವಾರ ಮುಂಜಾನೆ ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಭೀಕರ ವೈಮಾನಿಕ ದಾಳಿಯನ್ನು ಪ್ರಾರಂಭಿಸಿದೆ. ಈ ದಾಳಿಯಲ್ಲಿ ಅಮೆರಿಕ ಕೂಡ ಸಕ್ರಿಯವಾಗಿ ಪಾಲ್ಗೊಂಡಿದೆ ಎಂದು ವರದಿಯಾಗಿದೆ.
ಟೆಹ್ರಾನ್‌ನಲ್ಲಿ ಸ್ಫೋಟದ ಸರಣಿ:
ಶನಿವಾರ ಬೆಳಿಗ್ಗೆ ಟೆಹ್ರಾನ್ ನಗರದ ವಿವಿಧ ಭಾಗಗಳಲ್ಲಿ ಭೀಕರ ಸ್ಫೋಟದ ಶಬ್ದಗಳು ಕೇಳಿಬಂದಿವೆ. ವರದಿಗಳ ಪ್ರಕಾರ, ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಗಳ ಸಮೀಪದಲ್ಲೇ ಈ ದಾಳಿಗಳು ನಡೆದಿವೆ. ದಾಳಿಯ ಮುನ್ಸೂಚನೆ ಅರಿತಿದ್ದ ಇರಾನ್ ಭದ್ರತಾ ಪಡೆಗಳು, 86 ವರ್ಷದ ನಾಯಕ ಅಲಿ ಖಮೇನಿ ಅವರನ್ನು ಮೊದಲೇ ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿದ್ದವು ಎಂದು ತಿಳಿದುಬಂದಿದೆ. ನಗರದಲ್ಲಿ ಕನಿಷ್ಠ ನಾಲ್ಕರಿಂದ ಐದು ಪ್ರಮುಖ ನೆಲೆಗಳ ಮೇಲೆ ಕ್ಷಿಪಣಿ ದಾಳಿಗಳು ನಡೆದಿದ್ದು, ಸಾವುನೋವುಗಳ ಬಗ್ಗೆ ಇನ್ನು ನಿಖರ ಮಾಹಿತಿ ಲಭ್ಯವಾಗಿಲ್ಲ.
ಇಸ್ರೇಲ್ ಮತ್ತು ಅಮೆರಿಕದ ಸಮರ್ಥನೆ:
ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು ಈ ಕಾರ್ಯಾಚರಣೆಯನ್ನು ಬೆದರಿಕೆಗಳನ್ನು ಬುಡ ಸಮೇತ ಕಿತ್ತೊಗೆಯಲು ನಡೆಸಿದ ದಾಳಿ ಎಂದು ಹೇಳಿದ್ದಾರೆ. ಇರಾನ್‌ನ ಪರಮಾಣು ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳು ತಮಗೆ ದೊಡ್ಡ ಅಪಾಯ ಎಂದು ಇಸ್ರೇಲ್ ಮತ್ತು ಅಮೆರಿಕ ಪದೇ ಪದೇ ಎಚ್ಚರಿಸುತ್ತಲೇ ಬಂದಿದ್ದವು. ಇರಾನ್ ತನ್ನ ಪರಮಾಣು ಮೂಲಸೌಕರ್ಯವನ್ನು ಕಿತ್ತುಹಾಕದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆ ನೀಡಿತ್ತು.
ಟೆಲ್ ಅವಿವ್‌ನಲ್ಲಿ ಹೈ ಅಲರ್ಟ್
ದಾಳಿ ಪ್ರಾರಂಭವಾಗುತ್ತಿದ್ದಂತೆ ಇತ್ತ ಇಸ್ರೇಲ್‌ನ ಟೆಲ್ ಅವಿವ್ ನಗರದಲ್ಲಿ ಸೈರನ್‌ಗಳು ಮೊಳಗಲಾರಂಭಿಸಿವೆ. ಇರಾನ್‌ನಿಂದ ಪ್ರತಿದಾಳಿ ಅಥವಾ ಕ್ಷಿಪಣಿ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಇಸ್ರೇಲ್ ರಕ್ಷಣಾ ಪಡೆಗಳು (IDF) ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿವೆ. ಸೆಲ್ಯುಲಾರ್ ಸಾಧನಗಳ ಮೂಲಕ ನೇರವಾಗಿ ಎಚ್ಚರಿಕೆ ಸಂದೇಶಗಳನ್ನು ರವಾನಿಸಲಾಗುತ್ತಿದ್ದು, ಇಸ್ರೇಲ್‌ನಾದ್ಯಂತ ನಾಗರಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಈ ತಿಂಗಳ ಆರಂಭದಲ್ಲಿ ಅಮೆರಿಕ ಮತ್ತು ಇರಾನ್ ಮಾತುಕತೆಗಳ ಮೂಲಕ ವಿವಾದ ಬಗೆಹರಿಸಲು ಯತ್ನಿಸಿದ್ದವು. ಆದರೆ, ಇರಾನ್ ತನ್ನ ಕ್ಷಿಪಣಿ ಕಾರ್ಯಕ್ರಮದ ಮೇಲೆ ನಿರ್ಬಂಧ ಹೇರುವುದನ್ನು ತಳ್ಳಿಹಾಕಿತ್ತು. ಇಸ್ರೇಲ್ ಮಾತ್ರ ಇರಾನ್‌ನ ಪರಮಾಣು ಶಕ್ತಿಯನ್ನು ಸಂಪೂರ್ಣವಾಗಿ ನಾಶಪಡಿಸಬೇಕು ಎಂಬ ಹಠಕ್ಕೆ ಬಿದ್ದಿತ್ತು. ಈ ಭಿನ್ನಾಭಿಪ್ರಾಯಗಳೇ ಇಂದು ಯುದ್ದಕ್ಕೆ ದಾರಿ ಮಾಡಿ ಕೊಟ್ಟಿದೆ. ಯಾವುದೇ ದಾಳಿಯ ವಿರುದ್ಧ ತಾನು ಬಲಿಷ್ಠವಾಗಿ ರಕ್ಷಿಸಿಕೊಳ್ಳುವುದಾಗಿ ಇರಾನ್ ಈ ಹಿಂದೆಯೇ ಘೋಷಿಸಿದ್ದು, ಈಗ ಇರಾನ್‌ನ ಮುಂದಿನ ನಡೆ ಏನು ಎಂಬುದು ಇಡೀ ವಿಶ್ವದ ಕುತೂಹಲವಾಗಿದೆ.
