ಅಮೆರಿಕ ಯುದ್ಧ ನಿಲ್ಲಿಸಿದ್ರೂ ನಾವು ನಿಲ್ಲಿಸೋದಿಲ್ಲ ಎಂದ ಇಸ್ರೇಲ್ ಪ್ರಧಾನಿ ನೆತನ್ಯಾಹು

Untitled design 2026 04 01T090233.038

ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಭೀಕರ ಸಂಘರ್ಷ ಈಗ ಹೊಸ ತಿರುವು ಪಡೆದುಕೊಂಡಿದೆ. ಇರಾನ್ ಮತ್ತು ಅಮೆರಿಕ ನಡುವೆ ಯುದ್ಧ ವಿರಾಮದ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಅಮೆರಿಕ ಯುದ್ಧ ನಿಲ್ಲಿಸಿದರೂ ನಾವು ಮಾತ್ರ ಇರಾನ್ ವಿರುದ್ಧದ ದಾಳಿಯನ್ನು ನಿಲ್ಲಿಸುವುದಿಲ್ಲ ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಟ್ರಂಪ್ ಅವರ ಗಡುವನ್ನು ಇಸ್ರೇಲ್ ಬಹಿರಂಗವಾಗಿ ತಿರಸ್ಕರಿಸಿದಂತಾಗಿದೆ.

ಟ್ರಂಪ್ ನೀಡಿದ್ದ 3 ವಾರಗಳ ಗಡುವು

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇತ್ತೀಚೆಗಷ್ಟೇ ಇರಾನ್ ಜೊತೆಗಿನ ಯುದ್ಧವು ಮುಂದಿನ 2 ರಿಂದ 3 ವಾರಗಳಲ್ಲಿ ಕೊನೆಗೊಳ್ಳಲಿದೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೆ, ಅಮೆರಿಕ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವ ಸುಳಿವನ್ನು ನೀಡಿದ್ದರು. ಆದರೆ, ಇರಾನ್‌ನಲ್ಲಿರುವ ಭಯೋತ್ಪಾದಕ ಆಡಳಿತವನ್ನು ಸಂಪೂರ್ಣವಾಗಿ ಹತ್ತಿಕ್ಕುವವರೆಗೆ ಯುದ್ದ ನಿಲ್ಲಿಸುವುದಿಲ್ಲ ಎಂದು ಇಸ್ರೇಲ್ ಗುಡುಗಿದೆ.

ಇಸ್ರೇಲ್–ಇರಾನ್–ಅಮೆರಿಕ ನಡುವಿನ ಈ ನೇರ ಸಂಘರ್ಷ ಇಂದು 33ನೇ ದಿನಕ್ಕೆ ಕಾಲಿಟ್ಟಿದೆ. ಫೆಬ್ರವರಿ 28ರಂದು ಆರಂಭವಾದ ಈ ಯುದ್ಧವು ಈಗ ಕೇವಲ ಮೂರು ರಾಷ್ಟ್ರಗಳಿಗೆ ಸೀಮಿತವಾಗಿಲ್ಲ. ಇರಾನ್ ಪರವಾಗಿ ಹೆಜ್ಬೊಲ್ಲಾ ಮತ್ತು ಹೌತಿ ಬಂಡುಕೋರರು ಯುದ್ಧಕ್ಕೆ ಧುಮುಕಿದ್ದಾರೆ. ಇಸ್ರೇಲ್ ಮೇಲೆ ನಿರಂತರವಾಗಿ ರಾಕೆಟ್ ಮತ್ತು ಡ್ರೋನ್ ದಾಳಿಗಳನ್ನು ನಡೆಸುತ್ತಿರುವ ಈ ಉಗ್ರಗಾಮಿ ಸಂಘಟನೆಗಳ ವಿರುದ್ಧವೂ ತಾನು ದಾಳಿ ಮುಂದುವರಿಸುವುದಾಗಿ ಇಸ್ರೇಲ್ ಘೋಷಿಸಿದೆ.

ಇರಾನ್‌ನ ಇಂಧನ ಮತ್ತು ಅಣುಶಕ್ತಿ ಕೇಂದ್ರಗಳನ್ನು ನಾಶಪಡಿಸದೆ ಯುದ್ಧ ನಿಲ್ಲಿಸಿದರೆ ಅದು ಇಸ್ರೇಲ್‌ನ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ. ನಾವು ನಮ್ಮ ಶತ್ರುಗಳ ಗುಳಿಗಳನ್ನು ತೋಡುವವರೆಗೂ ಹಿಂದೆ ಸರಿಯುವುದಿಲ್ಲ. ಇರಾನ್ ಆಡಳಿತವು ಜಗತ್ತಿಗೆ ಅಪಾಯಕಾರಿಯಾಗಿದೆ. ಅಮೆರಿಕದ ನಿಲುವು ಏನೇ ಇರಲಿ, ನಮ್ಮ ದೇಶದ ಭದ್ರತೆಯ ವಿಷಯದಲ್ಲಿ ನಾವು ಯಾರೊಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಇಸ್ರೇಲ್‌ ಪ್ರಧಾನಿ ನೆತನ್ಯಾಹು ಹೇಳಿದ್ದಾರೆ.

ಲೆಬನಾನ್ ಮೂಲದ ಹೆಜ್ಬೊಲ್ಲಾ ಮತ್ತು ಯೆಮೆನ್‌ನ ಹೌತಿ ಉಗ್ರರು ಇರಾನ್‌ನ ಪ್ರಬಲ ಮಿತ್ರರಾಗಿದ್ದಾರೆ. ಈ ಗುಂಪುಗಳು ಇಸ್ರೇಲ್‌ನ ಗಡಿ ಭಾಗಗಳಲ್ಲಿ ನಿರಂತರ ಅಶಾಂತಿ ಸೃಷ್ಟಿಸುತ್ತಿವೆ. ಇಸ್ರೇಲ್ ಈಗ ಇರಾನ್ ಸೇರಿದಂತೆ ಈ ಎಲ್ಲಾ ಪ್ರತ್ಯಕ್ಷ ಮತ್ತು ಪರೋಕ್ಷ ಶತ್ರುಗಳ ವಿರುದ್ಧ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲು ಸಜ್ಜಾಗಿದೆ. ಇದು ಪಶ್ಚಿಮ ಏಷ್ಯಾದಲ್ಲಿ ಯುದ್ಧವು ದೀರ್ಘಕಾಲ ಮುಂದುವರಿಯುವ ಸೂಚನೆ ನೀಡಿದೆ.

Exit mobile version