ಇಸ್ರೇಲ್-ಅಮೆರಿಕ ಜಂಟಿ ದಾಳಿಗೆ 550ಕ್ಕೂ ಹೆಚ್ಚು ಮಂದಿ ಸಾ*ವು: ಮೂರೇ ದಿನದಲ್ಲಿ ಸ್ಮಶಾನವಾದ ಇರಾನ್

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತಾರಕಕ್ಕೇರಿದ್ದು, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಮಹಾಯುದ್ಧದ ರೂಪ ಪಡೆದುಕೊಳ್ಳುತ್ತಿದೆ. ಫೆಬ್ರವರಿ 28 ರಂದು ಅಮೆರಿಕ ಜೊತೆ ಜಂಟಿಯಾಗಿ ಇಸ್ರೇಲ್ ನಡೆಸಿದ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳ ಬಳಿಕ ಕೇವಲ ಮೂರು ದಿನಗಳಲ್ಲಿ 550 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಈ ದಾಳಿಗಳ ಪರಿಣಾಮ ಇರಾನ್‌ನ ಹಲವು ಪ್ರಮುಖ ನಗರಗಳು, ಸೇನಾ ನೆಲೆಗಳು ಮತ್ತು ತೈಲ ಕೇಂದ್ರಗಳು ಗಂಭೀರ ಹಾನಿಗೊಳಗಾಗಿವೆ.

ತೆಹ್ರಾನ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಬೆಂಕಿಯ ಜ್ವಾಲೆಗಳು ಎದ್ದಿದ್ದು, ರಕ್ಷಣಾ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಖಮೇನಿ ಹತ್ಯೆ

ಈ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತರಾಗಿದ್ದಾರೆ. ಅವರ ಕುಟುಂಬ ಸದಸ್ಯರೂ ಈ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಘಟನೆ ಇರಾನ್ ಜನತೆಯಲ್ಲೂ ಮತ್ತು ಆಡಳಿತವರ್ಗದಲ್ಲೂ ತೀವ್ರ ಆಕ್ರೋಶ ಹುಟ್ಟಿಸಿದೆ. ಖಮೇನಿ ಅವರ ನಿಧನವನ್ನು ಪ್ರತೀಕಾರದ ಸಂಕೇತವಾಗಿ ಪರಿಗಣಿಸಿರುವ ಇರಾನ್, ತಕ್ಷಣವೇ ಪ್ರತಿದಾಳಿ ಆರಂಭಿಸಿದೆ.

ಪ್ರತೀಕಾರದ ದಾಳಿ 

ಪ್ರತೀಕಾರದ ಭಾಗವಾಗಿ ಇರಾನ್, ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ. ಅಲ್ಲದೆ ಯುನೈಟೆಡ್ ಅರಬ್ ಎಮಿರೇಟ್ಸ್, ದುಬೈ, ಬೈರೂತ್ ಮತ್ತು ಒಮಾನ್ ಪ್ರದೇಶಗಳತ್ತವೂ ದಾಳಿಗಳು ನಡೆದಿವೆ ಎಂದು ವರದಿಯಾಗಿದೆ. ಇದರಿಂದಾಗಿ ಗಲ್ಫ್ ಪ್ರದೇಶದಲ್ಲಿ ಪರಿಸ್ಥಿತಿ ಕೈಮೀರಿ ಹೋಗುವ ಭೀತಿ ಹೆಚ್ಚಾಗಿದೆ.

ಯುಎಇ ತನ್ನ ದೇಶದ ಮೇಲೆ ನಡೆದ ಕ್ಷಿಪಣಿ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಇದನ್ನು “ಅಪಾಯಕಾರಿ ಉಲ್ಬಣ” ಎಂದು ಕರೆಯಲಾಗಿದ್ದು, ತಕ್ಷಣವೇ ಇರಾನ್‌ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಮುಚ್ಚುವ ಹಾಗೂ ರಾಜತಾಂತ್ರಿಕ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುವ ನಿರ್ಧಾರ ಕೈಗೊಂಡಿದೆ.

ಭಾರತ ಪ್ರತಿಕ್ರಿಯೆ

ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ್ದಾರೆ. ಯುಎಇ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಮೋದಿ, ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.

‘X’ ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ, “ನನ್ನ ಸಹೋದರ ಯುಎಇ ಅಧ್ಯಕ್ಷರೊಂದಿಗೆ ಮಾತನಾಡಿದೆ. ಯುಎಇ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದೇನೆ. ಈ ಕಷ್ಟದ ಸಮಯದಲ್ಲಿ ಭಾರತವು ಯುಎಇ ಜೊತೆ ದೃಢವಾಗಿ ನಿಲ್ಲುತ್ತದೆ,” ಎಂದು ಅವರು ತಿಳಿಸಿದ್ದಾರೆ.

Exit mobile version