ಪಾಶ್ಚಾತ್ಯ ರಾಷ್ಟ್ರಗಳ ನ್ಯಾಟೋ ಸೇನಾ ಮಾದರಿಯನ್ನು ಅನುಸರಿಸಿ, ಇಸ್ಲಾಮಿಕ್ ರಾಷ್ಟ್ರಗಳು ತಮ್ಮದೇ ಆದ ‘ಅರಬ್ ಸೇನಾಪಡೆ’ಯನ್ನು ರಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿವೆ. ಕತಾರ್‌ನ ರಾಜಧಾನಿ ದೋಹಾದಲ್ಲಿ ಇತ್ತೀಚೆಗೆ ನಡೆದ ತುರ್ತು ಸಭೆಯಲ್ಲಿ ಈ ಬಗ್ಗೆ ಆಳವಾದ ಚರ್ಚೆ ನಡೆದಿದ್ದು, ಹಲವು ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ದಶಕಗಳ ಹಿಂದೆಯೇ ಸೌದಿ ಅರೇಬಿಯಾ ಇಸ್ಲಾಮಿಕ್ ಸೇನಾ ಒಕ್ಕೂಟದ ಕಲ್ಪನೆಯನ್ನು ಮುಂದಿಟ್ಟಿತ್ತು. 2015ರಲ್ಲಿ ಸೌದಿ ನೇತೃತ್ವದಲ್ಲಿ ‘ಇಸ್ಲಾಮಿಕ್ ಮಿಲಿಟರಿ ಕೌಂಟರ್ ಟೆರರಿಸಂ ಕೋಲಿಷನ್’ ರಚನೆಯಾಗಿತ್ತು. ಆದರೆ ಅದು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ಬರಲಿಲ್ಲ. ರಾಷ್ಟ್ರಗಳ ನಡುವಿನ ಅಭಿಪ್ರಾಯ ಭಿನ್ನತೆಗಳು, ನಾಯಕತ್ವದ ಸ್ಪರ್ಧೆ ಮತ್ತು ರಾಜಕೀಯ ಹಿತಾಸಕ್ತಿಗಳು ಇದಕ್ಕೆ ಅಡ್ಡಿಯಾಗಿದ್ದವು. ಆದರೆ ಇತ್ತೀಚಿನ ಘಟನೆಗಳು ವಿಶೇಷವಾಗಿ, ಇಸ್ರೇಲ್‌ನ ಕತಾರ್ ಮೇಲಿನ ದಾಳಿ ಈ ರಾಷ್ಟ್ರಗಳನ್ನು ಒಂದುಗೂಡಿಸಿವೆ.
ದೋಹಾ ಸಭೆಯಲ್ಲಿ ಟರ್ಕಿ, ಪಾಕಿಸ್ತಾನ, ಈಜಿಪ್ಟ್, ಕತಾರ್, ಇರಾಕ್ ಸೇರಿದಂತೆ 40ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಸಭೆಯ ಮುಖ್ಯ ಉದ್ದೇಶವೆಂದರೆ ಇಸ್ರೇಲ್‌ನ ದಾಳಿಯನ್ನು ಖಂಡಿಸುವುದು ಮತ್ತು ಮುಂದಿನ ದಿನಗಳ ರಕ್ಷಣಾ ಕ್ರಮಗಳನ್ನು ಚರ್ಚಿಸುವುದು. ಪಾಕಿಸ್ತಾನದ ಪ್ರಧಾನಿಮ, ಈ ಸಭೆಯಲ್ಲಿ ಅತ್ಯಂತ ತೀವ್ರವಾಗಿ ಮಾತನಾಡಿ, ‘ಅರಬ್ ಸೇನಾಪಡೆ’ಯನ್ನು ತಕ್ಷಣ ರಚಿಸಬೇಕು ಎಂದು ಆಗ್ರಹಿಸಿದರು. ಪಾಕಿಸ್ತಾನವು ಅಣ್ವಸ್ತ್ರಗಳನ್ನು ಹೊಂದಿರುವ ಏಕೈಕ ಇಸ್ಲಾಮಿಕ್ ರಾಷ್ಟ್ರವಾಗಿರುವುದರಿಂದ, ಅದರ ಬೇಡಿಕೆಗೆ ಇತರ ರಾಷ್ಟ್ರಗಳು ಒಪ್ಪಿಗೆ ನೀಡುವ ಸಾಧ್ಯತೆ ಹೆಚ್ಚಿದೆ. ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್ ಕೂಡ ಈ ಯೋಜನೆಯನ್ನು ಬೆಂಬಲಿಸಿ, ‘ನ್ಯಾಟೋ ಮಾದರಿಯ ಒಕ್ಕೂಟವು ನಮ್ಮ ರಾಷ್ಟ್ರಗಳ ರಕ್ಷಣೆಗೆ ಅಗತ್ಯ’ ಎಂದು ಹೇಳಿದರು.
ಈಜಿಪ್ಟ್, ಈ ಯೋಜನೆಯಲ್ಲಿ ಮುಂಚೂಣಿಯಲ್ಲಿದ್ದು, ಮೊದಲ ಹಂತದಲ್ಲಿ 20 ಸಾವಿರ ಸೈನಿಕರನ್ನು ಒದಗಿಸಲು ಸಿದ್ಧವಾಗಿದೆ. ಅಲ್ಲದೆ, ಸೇನಾಪಡೆಯ ಮುಖ್ಯ ಕಚೇರಿಯನ್ನು ಕೈರೋದಲ್ಲಿ ಸ್ಥಾಪಿಸಬೇಕು ಮತ್ತು ಮೊದಲ ಕಮಾಂಡರ್ ಈಜಿಪ್ಟ್‌ನವರಾಗಿರಬೇಕು ಎಂದು ಬೇಡಿಕೆಯಿಟ್ಟಿದೆ. ಇರಾಕ್‌ನ ಪ್ರಧಾನಿ ಮೊಹಮ್ಮದ್ ಶಿಯಾ ಅಲ್-ಸುದಾನಿ ಕೂಡ ಈ ಸೇನೆಯ ನಿರ್ಮಾಣಕ್ಕೆ ಬೆಂಬಲ ನೀಡಿ, ‘ಇಸ್ಲಾಮಿಕ್ ರಾಷ್ಟ್ರಗಳ ಐಕ್ಯತೆಯು ಜಗತ್ತಿನ ಶಾಂತಿಗೆ ಕೊಡುಗೆ ನೀಡುತ್ತದೆ’ ಎಂದು ಹೇಳಿದರು.
ಆದರೆ ಈ ಯೋಜನೆಯು ಸುಲಭವಲ್ಲ. ಜಾಗತಿಕ ತಜ್ಞರು ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ದಶಕಗಳಿಂದ ಚರ್ಚೆಗಳು ನಡೆಯುತ್ತಿವೆಯಾದರೂ, ರಾಷ್ಟ್ರಗಳ ನಡುವಿನ ಸ್ಪರ್ಧೆಯು ಅಡ್ಡಿಯಾಗಿದೆ. ಸೌದಿ ಅರೇಬಿಯಾ ಮತ್ತು ಈಜಿಪ್ಟ್ ನಡುವಿನ ನಾಯಕತ್ವದ ಹೋರಾಟ, ಇರಾನ್ ಮತ್ತು ಸೌದಿಗಳ ವೈಷಮ್ಯಗಳು ಈ ಒಕ್ಕೂಟವನ್ನು ದುರ್ಬಲಗೊಳಿಸಬಹುದು. ಭಾರತಕ್ಕೆ ಈ ಬೆಳವಣಿಗೆಯು ದುಷ್ಪರಿಣಾಮಗಳನ್ನು ತರುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.