ಜಗತ್ತಿಗೆ ತೈಲ ಗಂಡಾಂತರ: ಬ್ಯಾರೆಲ್ ಬೆಲೆ 200 ಡಾಲರ್‌ಗೆ ಏರಿಸುವ ಎಚ್ಚರಿಕೆ ನೀಡಿದ ಇರಾನ್

Untitled design 2026 03 12T204021.037

ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಜಂಟಿ ವಾಯುದಾಳಿಗಳಿಂದ ಕೆರಳಿರುವ ಇರಾನ್, ಈಗ ತೈಲ ಯುದ್ಧ (Oil War) ಸಾರಿದೆ. ಜಗತ್ತು ಇನ್ನು ಮುಂದೆ ಪ್ರತಿ ಬ್ಯಾರೆಲ್ ಕಚ್ಚಾ ತೈಲಕ್ಕೆ 200 ಡಾಲರ್ ನೀಡಲು ಸಿದ್ಧವಾಗಲಿ ಎಂದು ಇರಾನ್ ನೀಡಿರುವ ಎಚ್ಚರಿಕೆ ಜಾಗತಿಕ ಆರ್ಥಿಕತೆಯನ್ನು ನಡುಗಿಸಿದೆ.

ಬುಧವಾರ ಪರ್ಷಿಯನ್ ಕೊಲ್ಲಿಯಲ್ಲಿ ಇರಾನ್ ಪಡೆಗಳು ಭೀಕರ ದಾಳಿ ನಡೆಸಿವೆ. ತಮ್ಮ ಆದೇಶವನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ಥೈಲ್ಯಾಂಡ್, ಜಪಾನ್ ಮತ್ತು ಮಾರ್ಷಲ್ ಐಲೆಂಡ್ಸ್ ಧ್ವಜವಿರುವ ಮೂರು ವ್ಯಾಪಾರಿ ಹಡಗುಗಳ ಮೇಲೆ ಕ್ಷಿಪಣಿ ದಾಳಿ ಮಾಡಲಾಗಿದೆ. ಇದರೊಂದಿಗೆ ಯುದ್ಧ ಆರಂಭವಾದಾಗಿನಿಂದ ಈವರೆಗೆ ಒಟ್ಟು 14 ವ್ಯಾಪಾರಿ ಹಡಗುಗಳು ಹಾನಿಗೊಳಗಾದಂತಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈಗಾಗಲೇ ಇರಾನ್‌ನ 58 ನೌಕಾಪಡೆ ಹಡಗುಗಳನ್ನು ಧ್ವಂಸಗೊಳಿಸಿರುವುದಾಗಿ ಮತ್ತು ಇರಾನ್ ಸೇನೆ ಶಕ್ತಿಗುಂದಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ವಾಸ್ತವ ಸ್ಥಿತಿ ಭಿನ್ನವಾಗಿದೆ. ಇರಾನ್ ಇಂದಿಗೂ ಹೊರ್ಮುಜ್ ಜಲಸಂಧಿಯ ಮೇಲೆ ಭೌಗೋಳಿಕ ನಿಯಂತ್ರಣ ಹೊಂದಿದ್ದು, ಅಲ್ಲಿ ಡಜನ್ಗಟ್ಟಲೆ ಸಮುದ್ರ ಮೈನ್‌ಗಳನ್ನು (Mines) ಅಳವಡಿಸಿದೆ. ಇದರಿಂದಾಗಿ ತೈಲ ಸಾಗಣೆಯ ಪ್ರಮುಖ ಮಾರ್ಗವು ಸಂಪೂರ್ಣವಾಗಿ ಬಂದ್ ಆಗುವ ಭೀತಿ ಎದುರಾಗಿದೆ.

ಅಮೆರಿಕದಿಂದ ತುರ್ತು ತೈಲ ಬಿಡುಗಡೆ

ಈ ಭೀಕರ ತೈಲ ಬಿಕ್ಕಟ್ಟನ್ನು ತಗ್ಗಿಸಲು ಅಂತರಾಷ್ಟ್ರೀಯ ಇಂಧನ ಸಂಸ್ಥೆಯು (IEA) ಇತಿಹಾಸದಲ್ಲೇ ಅತಿ ದೊಡ್ಡ ಮಟ್ಟದ ಅಂದರೆ 400 ಮಿಲಿಯನ್ ಬ್ಯಾರೆಲ್ ತುರ್ತು ತೈಲ ಮೀಸಲನ್ನು ಬಿಡುಗಡೆ ಮಾಡಲು ಶಿಫಾರಸು ಮಾಡಿದೆ. ಇದಕ್ಕೆ ತಕ್ಷಣ ಸ್ಪಂದಿಸಿರುವ ಟ್ರಂಪ್, ಅಮೆರಿಕದ ಮೀಸಲು ನಿಧಿಯಿಂದ 172 ಮಿಲಿಯನ್ ಬ್ಯಾರೆಲ್ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ಇದು 1970ರ ದಶಕದ ನಂತರದ ಅತ್ಯಂತ ಕೆಟ್ಟ ತೈಲ ಬಿಕ್ಕಟ್ಟು ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಈ ರಕ್ತಪಾತದಲ್ಲಿ ಈವರೆಗೆ 2,000ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರ ಪುತ್ರ ಮತ್ತು ಉತ್ತರಾಧಿಕಾರಿ ಎನ್ನಲಾದ ಮೊಜ್ತಾಬಾ ಖಮೇನಿ ಕೂಡ ವಾಯುದಾಳಿಯಲ್ಲಿ ಗಾಯಗೊಂಡಿರುವುದು ಸಂಘರ್ಷದ ತೀವ್ರತೆಯನ್ನು ಹೆಚ್ಚಿಸಿದೆ. ಇಷ್ಟೇ ಅಲ್ಲದೆ, ಅಮೆರಿಕ ಮತ್ತು ಇಸ್ರೇಲ್ ಜತೆ ವ್ಯವಹಾರ ನಡೆಸುವ ಜಾಗತಿಕ ಬ್ಯಾಂಕುಗಳ ಮೇಲೆ ಸೈಬರ್ ದಾಳಿ ನಡೆಸುವುದಾಗಿಯೂ ಇರಾನ್ ಬೆದರಿಕೆ ಹಾಕಿದೆ.

Exit mobile version