ನೀವು ಆರಂಭಿಸಿದ್ದೀರಿ, ನಾವು ಮುಗಿಸುತ್ತೇವೆ: ಟ್ರಂಪ್‌ಗೆ ಇರಾನ್‌ ಎಚ್ಚರಿಕೆ

Untitled design 2025 06 22t192706.772

ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಅಮೆರಿಕದ ಮಧ್ಯಪ್ರವೇಶದಿಂದ ಪರಿಸ್ಥಿತಿ ತೀವ್ರಗೊಂಡಿದೆ. ಇರಾನ್‌ನ ಪರಮಾಣು ಕೇಂದ್ರಗಳಾದ ಫೋರ್ಡೊ, ನತಾಂಜ್, ಮತ್ತು ಇಸ್ಫಾಹಾನ್‌ ಮೇಲೆ ಅಮೆರಿಕ ನಡೆಸಿದ ಬಾಂಬ್ ದಾಳಿಯಿಂದ ಇರಾನ್ ಕೆರಳಿದೆ. ಪ್ರತೀಕಾರವಾಗಿ, ಇರಾನ್ ಇಸ್ರೇಲ್ ಮೇಲೆ ಮಿಸೈಲ್ ದಾಳಿಗಳನ್ನು ಸುರಿದಿದೆ. ಇದೀಗ, ಇರಾನ್‌ನ ಮಾಧ್ಯಮಗಳು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನೇರ ಎಚ್ಚರಿಕೆ ನೀಡಿವೆ. “ನೀವು ಯುದ್ಧ ಆರಂಭಿಸಿದ್ದೀರಿ, ನಾವು ಅದನ್ನು ಮುಗಿಸುತ್ತೇವೆ.” ಎಂದು ಹೇಳಿವೆ.

ಅಮೆರಿಕದ ದಾಳಿಯ ಹಿನ್ನೆಲೆ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವತಃ ಈ ದಾಳಿಯನ್ನು ಘೋಷಿಸಿದ್ದಾರೆ. ಪರಮಾಣು ಪ್ರಸರಣವನ್ನು ತಡೆಯುವುದೇ ಈ ಕಾರ್ಯಾಚರಣೆಯ ಉದ್ದೇಶ ಎಂದು ತಿಳಿಸಿದ್ದಾರೆ. ಆದರೆ, ಇರಾನ್ ಈ ದಾಳಿಯನ್ನು ಅಂತರಾಷ್ಟ್ರೀಯ ಕಾನೂನು ಉಲ್ಲಂಘನೆ ಎಂದು ಕರೆದಿದೆ. ಇರಾನ್‌ನ ಮಾಧ್ಯಮಗಳ ಪ್ರಕಾರ, ಪಶ್ಚಿಮ ಏಷ್ಯಾದಲ್ಲಿರುವ ಅಮೆರಿಕದ ಸೇನಾ ನೆಲೆಗಳು ಮತ್ತು ನಾಗರಿಕರು ತಮ್ಮ ಮುಂದಿನ ಗುರಿಯಾಗಿರುತ್ತಾರೆ. “ಅಮೆರಿಕ ವಾಯುಪ್ರದೇಶದ ನಿಯಮಗಳನ್ನು ಉಲ್ಲಂಘಿಸಿದೆ, ಇಂತಹ ಕ್ರಮಗಳಿಂದ ಅವರಿಗೆ ಇಲ್ಲಿ ಸ್ಥಾನವಿಲ್ಲ,” ಎಂದು ಇರಾನ್ ಸ್ಪಷ್ಟಪಡಿಸಿದೆ.

ಗಡುವಿನ ಮೊದಲೇ ದಾಳಿ
ಟ್ರಂಪ್ ಇರಾನ್‌ಗೆ ಒಂದು ವಾರದ ಗಡುವು ನೀಡಿದ್ದರು. ಪರಮಾಣು ಒಪ್ಪಂದಕ್ಕೆ ಒಪ್ಪದಿದ್ದರೆ ನೇರ ಯುದ್ಧಕ್ಕೆ ಇಳಿಯುವುದಾಗಿ ಎರಡು ದಿನಗಳ ಹಿಂದೆ ಘೋಷಿಸಿದ್ದರು. ಆದರೆ, ಈ ಘೋಷಣೆಯ ಎರಡೇ ದಿನಗಳಲ್ಲಿ ಫೋರ್ಡೊ ಪರಮಾಣು ಕೇಂದ್ರದ ಮೇಲೆ ವೈಮಾನಿಕ ದಾಳಿ ನಡೆಸಿದರು. ಈ ಆಕಸ್ಮಿಕ ಕ್ರಮ ಉದ್ವಿಗ್ನತೆಗೆ ಕಾರಣವಾಯಿತು. ಶನಿವಾರ ರಾತ್ರಿ ನಡೆದ ದಾಳಿಯ ನಂತರ ಭಾನುವಾರ ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, “ಈ ದಾಳಿ ಅಮೆರಿಕದ ಇತಿಹಾಸದಲ್ಲಿ ಮಹತ್ವದ ತಿರುವು. ಇರಾನ್ ಯುದ್ಧ ಅಂತಿಮ ಹಂತಕ್ಕೆ ತಲುಪಬೇಕು,” ಎಂದರು. ಇರಾನ್ ಪ್ರತೀಕಾರ ತೀರಿಸಿಕೊಂಡರೆ, “ನಿನ್ನೆ ರಾತ್ರಿಯ ದಾಳಿಗಿಂತ ಭಯಾನಕ ದಾಳಿಗಳನ್ನು ಎದುರಿಸಬೇಕಾಗುತ್ತದೆ,” ಎಂದು ಎಚ್ಚರಿಸಿದರು.

ಹೌತಿಗಳ ಎಚ್ಚರಿಕೆ
ಇರಾನ್‌ಗೆ ಬೆಂಬಲವಾಗಿ, ಯೆಮೆನ್‌ನ ಹೌತಿ ಬಂಡುಕೋರರು ಕೂಡ ರಂಗಕ್ಕೆ ಇಳಿದಿದ್ದಾರೆ. ಕೆಂಪು ಸಮುದ್ರದಲ್ಲಿರುವ ಅಮೆರಿಕದ ಹಡಗುಗಳನ್ನು ಗುರಿಯಾಗಿಸಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಘೋಷಣೆಯಿಂದ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಛಾಯೆ ಗಾಢವಾಗಿದೆ.

ಇಸ್ರೇಲ್‌ ಎಚ್ಚರಿಕೆ
ಅಮೆರಿಕದ ಕ್ರಮಗಳಿಂದ ಇಸ್ರೇಲ್ ಎಚ್ಚೆತ್ತುಕೊಂಡಿದೆ. ಇರಾನ್‌ನಿಂದ ಸಂಭವಿಸಬಹುದಾದ ದಾಳಿಯ ಬೆದರಿಕೆಯಿಂದ ದೇಶಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ. ತುರ್ತು ಪರಿಸ್ಥಿತಿಯಿಲ್ಲದೆ ಜನರು ಹೊರಬರಬಾರದು ಎಂದು ಸೂಚಿಸಲಾಗಿದೆ. ಸೇನಾ ಕ್ಷೇತ್ರದಲ್ಲಿ ಗುಪ್ತ ಕಾರ್ಯಾಚರಣೆಗಳು ಆರಂಭವಾಗಿವೆ ಎಂಬ ಮಾಹಿತಿ ಇದೆ.

Exit mobile version