ಇರಾನ್ ಮತ್ತು ಅಮೆರಿಕ ನಡುವಿನ ಶೀತಲ ಸಮರ ಈಗ ಸ್ಫೋಟಕ ಹಂತಕ್ಕೆ ತಲುಪಿದೆ. ತಾತ್ಕಾಲಿಕ ಕದನ ವಿರಾಮದ ನಡುವೆಯೂ, ಉಭಯ ದೇಶಗಳ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ಮತ್ತೆ ಯುದ್ಧದ ಕಾರ್ಮೋಡ ಕವಿಯುವ ಮುನ್ಸೂಚನೆ ಸಿಕ್ಕಿದೆ. “ಅಮೆರಿಕ ಯಾವುದೇ ಒಪ್ಪಂದದ ಬಗ್ಗೆ ಗಂಭೀರವಾಗಿಲ್ಲ, ಅವರ ಮಾತುಗಳನ್ನು ನಂಬಲು ಸಾಧ್ಯವಿಲ್ಲ” ಎಂದು ಇರಾನ್ ನೇರ ವಾಗ್ದಾಳಿ ನಡೆಸಿದೆ.
ಇರಾನ್ ಸೇನಾ ಉಪ ಅಧಿಕಾರಿ ಮೊಹಮ್ಮದ್ ಜಾಫರ್ ಅಸಾದಿ ಮಾತನಾಡಿ, “ಅಮೆರಿಕದ ಅಧಿಕಾರಿಗಳ ಹೇಳಿಕೆಗಳು ಕೇವಲ ಪ್ರದರ್ಶನಕ್ಕಾಗಿ ಮಾತ್ರ. ಅವರು ಯಾವುದೇ ಒಪ್ಪಂದಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ನಮ್ಮ ಸೇನೆಯು ಯುದ್ಧಕ್ಕೆ ಸಂಪೂರ್ಣವಾಗಿ ಸನ್ನದ್ಧವಾಗಿದೆ. ಅಮೆರಿಕ ಅಥವಾ ಇಸ್ರೇಲ್‌ನಿಂದ ಯಾವುದೇ ಅಚಾತುರ್ಯ ನಡೆದರೂ ನಾವು ತಕ್ಕ ಪ್ರತೀಕಾರ ತೀರಿಸುತ್ತೇವೆ,” ಎಂದು ಗುಡುಗಿದ್ದಾರೆ.
ಇರಾನ್ ಪ್ರಸ್ತಾಪ ತಿರಸ್ಕರಿಸಿದ ಡೊನಾಲ್ಡ್ ಟ್ರಂಪ್:
ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಕಳುಹಿಸಿದ್ದ ಹೊಸ ಮಾತುಕತೆಯ ಪ್ರಸ್ತಾಪವನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ. ಇರಾನ್ ವಿಧಿಸುತ್ತಿರುವ ಷರತ್ತುಗಳನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, “ಇರಾನ್ ನಾಯಕರಲ್ಲಿ ಒಮ್ಮತವಿಲ್ಲ, ಅವರು ಒಡೆದ ಮನೆಯಂತಾಗಿದ್ದಾರೆ,” ಎಂದು ವ್ಯಂಗ್ಯವಾಡಿದ್ದಾರೆ.
ಪರಮಾಣು ಅಸ್ತ್ರಕ್ಕೆ ತಡೆ:
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಟ್ರಂಪ್, “ಪರಮಾಣು ಶಸ್ತ್ರಾಸ್ತ್ರಗಳು ಹುಚ್ಚರ ಕೈಗೆ ಸಿಗಲು ಬಿಡುವುದಿಲ್ಲ. ಇರಾನ್ ಪರಮಾಣು ಶಕ್ತಿ ಹೊಂದುವುದನ್ನು ತಡೆಯುವುದೇ ನಮ್ಮ ಮುಖ್ಯ ಗುರಿ. ಅದಕ್ಕಾಗಿಯೇ ನಾವು ಈ ಸಂಘರ್ಷದಲ್ಲಿ ಭಾಗಿಯಾಗಿದ್ದೇವೆ,” ಎಂದು ಹೇಳುವ ಮೂಲಕ ತಮ್ಮ ನಿಲುವನ್ನು ಕಠಿಣಗೊಳಿಸಿದ್ದಾರೆ. ಈ ಬೆಳವಣಿಗೆಗಳಿಂದಾಗಿ ಮಧ್ಯಪ್ರಾಚ್ಯದಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ.
