ಟೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಮೊಜ್ತಬಾ ಖಮೇನಿ (Mojtaba Khamenei), ತಮ್ಮ ಮೊದಲ ಭಾಷಣದಲ್ಲೇ ಜಾಗತಿಕ ಸಮುದಾಯಕ್ಕೆ ಬಿಸಿ ಮುಟ್ಟಿಸಿದ್ದಾರೆ. ವಿಶ್ವದ ತೈಲ ಪೂರೈಕೆಯ ಜೀವನಾಡಿಯಾಗಿರುವ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಯಾವುದೇ ಕಾರಣಕ್ಕೂ ತೆರೆಯುವುದಿಲ್ಲ ಮತ್ತು ಅಮೆರಿಕದ ವಿರುದ್ಧದ ಸಂಘರ್ಷ ಮುಂದುವರಿಯಲಿದೆ ಎಂದು ಘೋಷಿಸಿದ್ದಾರೆ.
ಗುರುವಾರ ಇರಾನ್‌ನ ಸರ್ಕಾರಿ ದೂರದರ್ಶನದಲ್ಲಿ ಮೊಜ್ತಬಾ ಖಮೇನಿ ಅವರ ಲಿಖಿತ ಸಂದೇಶವನ್ನು ಸುದ್ದಿ ನಿರೂಪಕರು ಓದಿದ್ದು, ಮಧ್ಯಪ್ರಾಚ್ಯದ ನೆರೆಹೊರೆಯವರ ಮೇಲಿನ ದಾಳಿಗಳು ಮುಂದುವರಿಯಲಿವೆ. ಅಮೆರಿಕ ತನ್ನ ಸೇನಾ ನೆಲೆಗಳನ್ನು ತಕ್ಷಣವೇ ಈ ಪ್ರದೇಶದಿಂದ ತೆರವುಗೊಳಿಸಬೇಕು. ಒಂದು ವೇಳೆ ಕಾರ್ಯಾಚರಣೆ ಮುಂದುವರಿಸಿದರೆ ಭೀಕರ ದಾಳಿಯನ್ನು ಎದುರಿಸಬೇಕಾಗುತ್ತದೆ ಎಂದು ಪತ್ರದ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಪ್ರತಿ ಸಾವಿಗೂ ಪ್ರತೀಕಾರದ ಪ್ರತಿಜ್ಞೆ
ಇತ್ತೀಚಿನ ವಾಯುದಾಳಿಗಳಲ್ಲಿ ಇರಾನ್ ಅನುಭವಿಸಿದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿಗೆ ಸೇಡು ತೀರಿಸಿಕೊಳ್ಳುವುದಾಗಿ ಮೊಜ್ತಬಾ ಪ್ರತಿಜ್ಞೆ ಮಾಡಿದ್ದಾರೆ. ಇರಾನ್ ಮಣ್ಣಿನ ಮೇಲೆ ಬಿದ್ದ ಪ್ರತಿ ಹನಿ ರಕ್ತಕ್ಕೂ ಪ್ರತೀಕಾರ ತೀರಿಸಿಕೊಳ್ಳುತ್ತೇವೆ. ಅಮೆರಿಕದ ನೆಲೆಗಳು ನಮ್ಮ ಗುರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಮತ್ತೊಂದೆಡೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಸಂಘರ್ಷ ಕೊನೆಗೊಳಿಸಲು ಅಮೆರಿಕ ಮತ್ತು ಇಸ್ರೇಲ್ ಮುಂದೆ ಮೂರು ಪ್ರಮುಖ ಷರತ್ತುಗಳನ್ನು ಇರಿಸಿದ್ದಾರೆ:
-
ಹಕ್ಕುಗಳ ಮಾನ್ಯತೆ: ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಬೇಕು.
-
ಭದ್ರತೆಯ ಖಾತರಿ: ಭವಿಷ್ಯದಲ್ಲಿ ಇರಾನ್ ಮೇಲೆ ಯಾವುದೇ ದಾಳಿಗಳು ನಡೆಯುವುದಿಲ್ಲ ಎಂಬ ದೃಢವಾದ ಅಂತರರಾಷ್ಟ್ರೀಯ ಗ್ಯಾರಂಟಿ ಬೇಕು.
-
ಯುದ್ಧದ ಪರಿಹಾರ: ಇಲ್ಲಿಯವರೆಗೆ ಯುದ್ಧದಿಂದ ಉಂಟಾಗಿರುವ ಎಲ್ಲಾ ಹಾನಿಗಳಿಗೆ ಅಮೆರಿಕ ಮತ್ತು ಇಸ್ರೇಲ್ ಪರಿಹಾರ ನೀಡಬೇಕು.
ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ಮಾತನಾಡಿದ ಪೆಜೆಶ್ಕಿಯಾನ್, ಶಾಂತಿಗೆ ಇರಾನ್ ಸಿದ್ಧವಿದೆ. ಆದರೆ, ಜಿಯೋನಿಸ್ಟ್ ಆಡಳಿತ (ಇಸ್ರೇಲ್) ಮತ್ತು ಅಮೆರಿಕದಿಂದ ಹೊತ್ತಿಸಲ್ಪಟ್ಟ ಈ ಬೆಂಕಿಯನ್ನು ಆರಿಸಲು ನಮ್ಮ ಷರತ್ತುಗಳನ್ನು ಈಡೇರಿಸಲೇಬೇಕು ಎಂದು ಸ್ಪಷ್ಟಪಡಿಸಿದ್ದಾರೆ.ಒಟ್ಟಾರೆಯಾಗಿ, ಮೊಜ್ತಬಾ ಖಮೇನಿ ಅವರ ಉಗ್ರ ನಿಲುವು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ.
