(ಟೆಹ್ರಾನ್/ಕೊಲಂಬೊ): ಮಧ್ಯಪ್ರಾಚ್ಯದಲ್ಲಿ ಫೆಬ್ರವರಿ 28ರಂದು ಆರಂಭವಾದ ಇಸ್ರೇಲ್-ಇರಾನ್ ಯುದ್ಧ ಇಂದಿಗೆ (ಮಾರ್ಚ್ 04) ಐದನೇ ದಿನಕ್ಕೆ ಕಾಲಿಟ್ಟಿದೆ. ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ವಿರುದ್ಧ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆ ಉಲ್ಬಣಗೊಂಡಿದ್ದು, ಈ ಮಧ್ಯೆ ಶ್ರೀಲಂಕಾ ಕರಾವಳಿಯಲ್ಲಿ ಸಂಭವಿಸಿದ ಭೀಕರ ದುರಂತವೊಂದು ಯುದ್ಧದ ಭೀಕರತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಹಡಗಿನ ಮೇಲೆ ಸಬ್‌ಮರೈನ್ ದಾಳಿ
ಶ್ರೀಲಂಕಾದ ಕರಾವಳಿ ಪ್ರದೇಶದಲ್ಲಿ ಇರಾನ್‌ಗೆ ಸೇರಿದ ಹಡಗಿನ ಮೇಲೆ ಸಬ್‌ಮರೈನ್ ದಾಳಿ ನಡೆಸಿದೆ. ಈ ದಾಳಿಯ ಪರಿಣಾಮವಾಗಿ ಕನಿಷ್ಠ 100 ಮಂದಿ ಕಾಣೆಯಾಗಿದ್ದು, 78 ಮಂದಿ ಗಾಯಗೊಂಡಿರುವುದಾಗಿ ಶ್ರೀಲಂಕಾ ರಕ್ಷಣಾ ಮೂಲಗಳು ತಿಳಿಸಿವೆ. ಸಮುದ್ರದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಬಹ್ರೇನ್ ಮೇಲೆ ಡ್ರೋನ್ ದಾಳಿ
ಇರಾನ್ ನಡೆಸಿದ ಡ್ರೋನ್ ದಾಳಿಯಲ್ಲಿ ಬಹ್ರೇನ್ ನಲ್ಲಿ ಹಲವು ಕಟ್ಟಡಗಳು ಹಾನಿಯಾಗಿರುವುದಾಗಿ ವರದಿಯಾಗಿದೆ. ಇರಾನ್ 74 ಕ್ಷಿಪಣಿಗಳು ಹಾಗೂ 95 ಡ್ರೋನ್‌ಗಳನ್ನು ಪ್ರಯೋಗಿಸಿದ್ದು, ಅವುಗಳಲ್ಲಿ ಬಹುತೇಕವನ್ನು ತಡೆದಿರುವುದಾಗಿ ಬಹ್ರೇನ್ ಸೈನ್ಯ ತಿಳಿಸಿದೆ. ನಾಗರಿಕರು ಸುರಕ್ಷಿತ ಸ್ಥಳಗಳಲ್ಲಿ ಇರಬೇಕೆಂದು ಸರ್ಕಾರ ಸೂಚನೆ ನೀಡಿದ್ದು, ಕ್ಷಿಪಣಿ ಬಿದ್ದ ಪ್ರದೇಶಗಳಿಗೆ ಯಾರೂ ತೆರಳಬಾರದೆಂದು ಎಚ್ಚರಿಸಿದೆ.
ಎಫ್-35 ಯುದ್ಧವಿಮಾನ ಹೊಡೆದುರುಳಿಸಿದ ಇಸ್ರೇಲ್?
ಯುದ್ಧದ ಮಧ್ಯೆ ಇಸ್ರೇಲ್ ಮಹತ್ವದ ಮಾಹಿತಿ ಹೊರಹಾಕಿದೆ. ಇರಾನ್‌ನ ಎಫ್-35 ಮಾನವ ಚಾಲಿತ ಯುದ್ಧವಿಮಾನವನ್ನು ಹೊಡೆದುರುಳಿಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ. ಯುದ್ಧ ಆರಂಭವಾದ ನಂತರ ಮೊದಲ ಬಾರಿಗೆ ಇಂತಹ ದಾಳಿ ನಡೆದಿರುವುದಾಗಿ ವರದಿ ಹೇಳುತ್ತದೆ.
ಯಾವ ದೇಶದಲ್ಲಿ ಎಷ್ಟು ಸಾವು?
ಈ ಯುದ್ಧದಲ್ಲಿ ಈವರೆಗೆ ಹಲವು ರಾಷ್ಟ್ರಗಳಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
-
ಇರಾನ್: ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ 787 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಮಿನಾಬ್ ಪ್ರದೇಶದ ಪ್ರಾಥಮಿಕ ಶಾಲಾ ಮಕ್ಕಳು ಸೇರಿದ್ದಾರೆ ಎಂಬ ವರದಿ ಮಾಡಿದೆ.
-
ಲೆಬನಾನ್: ಇಸ್ರೇಲ್ ದಾಳಿಯಿಂದ 50 ಮಂದಿ ಮೃತಪಟ್ಟಿದ್ದಾರೆ.
-
ಇಸ್ರೇಲ್: ಇರಾನ್ ಕ್ಷಿಪಣಿ ದಾಳಿಯಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ.
-
ಕುವೈತ್: ಇರಾನ್ ಮಿಸೈಲ್ ದಾಳಿಯಲ್ಲಿ ಇಬ್ಬರು ಸೈನಿಕರು ಸೇರಿ ಮೂವರು ಸಾವನ್ನಪ್ಪಿದ್ದಾರೆ.
-
ಯುಎಇ: ಡ್ರೋನ್ ದಾಳಿಯಲ್ಲಿ ಮೂವರು ಮೃತಪಟ್ಟಿದ್ದಾರೆ.
-
ಬಹ್ರೇನ್: ಸಲ್ಮಾನ್ ಇಂಡಸ್ಟ್ರಿಯಲ್ ಸಿಟಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
-
ಒಮಾನ್: ಡ್ರೋನ್ ದಾಳಿಯಿಂದ ಒಬ್ಬರು ಸಾವಿಗೀಡಾಗಿದ್ದಾರೆ.
-
ಅಮೆರಿಕ ಸೇನಾ ನೆಲೆ (ಕುವೈತ್): ಇರಾನ್ ಡ್ರೋನ್ ದಾಳಿಯಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ.
ಯುದ್ಧ ಮತ್ತಷ್ಟು ವಿಸ್ತರಿಸುವ ಭೀತಿ
ಅಮೆರಿಕ ಕುವೈತ್‌ನಲ್ಲಿರುವ ತನ್ನ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡ ದಾಳಿಯನ್ನು ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
