ಟೆಹ್ರಾನ್, ಮಾರ್ಚ್ 26: ಪಶ್ಚಿಮ ಏಷ್ಯಾದಲ್ಲಿ ಉದ್ಧೃತ ಸ್ಥಿತಿಗೆ ತಲುಪಿರುವ ಯುದ್ಧದ ನಡುವೆ ಇರಾನ್ ಅಮೆರಿಕಕ್ಕೆ ತಿರುಗೇಟು ನೀಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆ ಕದನವಿರಾಮಕ್ಕೆ 15 ಅಂಶಗಳ ಶಾಂತಿ ಯೋಜನೆಯನ್ನು ಪ್ರಸ್ತಾಪಿಸಿದ್ದರು. ಆದರೆ ಈ ನಿರ್ಧಾರವನ್ನು ತಿರಸ್ಕರಿಸಿರುವ ಇರಾನ್, ತನ್ನದೇ ಆದ 5 ಕಠಿಣ ಷರತ್ತುಗಳನ್ನು ನಿಗದಿಪಡಿಸಿ ಅಮೆರಿಕಕ್ಕೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಕಳೆದ ಎರಡು ದಿನಗಳಿಂದ ಟ್ರಂಪ್ ಅವರು “ಯುದ್ಧ ಸಾಕಾಗಿದೆ” ಎಂಬಂತೆ ವರ್ತಿಸುತ್ತಿದ್ದರು. ಇರಾನ್ ಜೊತೆ ಕದನವಿರಾಮದ ಸುಳಿವು ನೀಡಿದ್ದರು. ಆದರೆ ಅವರ ಈ ಪ್ರಯತ್ನವನ್ನು ದೃಢವಾಗಿ ತಿರಸ್ಕರಿಸಿರುವ ಇರಾನ್, “ಈ ಯುದ್ಧವನ್ನು ಯಾವಾಗ ಕೊನೆಗೊಳಿಸಬೇಕು, ಹೇಗೆ ಕೊನೆಗೊಳಿಸಬೇಕೆಂದು ಟ್ರಂಪ್ ನಿರ್ಧರಿಸಲು ನಾವು ಅವಕಾಶ ನೀಡುವುದಿಲ್ಲ. ನಾವು ಹಾಕುವ ಷರತ್ತುಗಳನ್ನು ಪೂರೈಸಿದರೆ ಮಾತ್ರ ಯುದ್ಧವನ್ನು ಕೊನೆಗೊಳಿಸುತ್ತೇವೆ” ಎಂದು ಖಡಕ್ ಆಗಿ ಹೇಳಿದೆ.
ಪಶ್ಚಿಮ ಏಷ್ಯಾ ಸಂಘರ್ಷದಲ್ಲಿ ಇರಾನ್ ಈಗ ದೃಢ ನಿಲುವನ್ನು ತೆಗೆದುಕೊಂಡಿದ್ದು, ಅಮೆರಿಕ ಈ ಪ್ರದೇಶದಲ್ಲಿ ಅತಿಯಾಗಿ ಮೂಗು ತೂರಿಸುತ್ತಿದೆ ಎಂದು ಟೀಕಿಸಿದೆ. ಯುದ್ಧವನ್ನು ಕೊನೆಗೊಳಿಸಲು ಇರಾನ್ ನಿಗದಿಪಡಿಸಿರುವ 5 ಪ್ರಮುಖ ಷರತ್ತುಗಳು ಹೀಗಿವೆ.
1. ಆಕ್ರಮಣಶೀಲತೆ ಮತ್ತು ಹತ್ಯೆಗಳ ಸಂಪೂರ್ಣ ನಿಲುಗಡೆ: ಅಮೆರಿಕ ಮತ್ತು ಇಸ್ರೇಲ್ ನಿಂದ ಆಕ್ರಮಣಶೀಲತೆ ಮತ್ತು ಟಾರ್ಗೆಟ್ ಮಾಡಿದ ಹತ್ಯೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
2. ಭವಿಷ್ಯದ ಮಿಲಿಟರಿ ಕ್ರಮದ ವಿರುದ್ಧ ಭರವಸೆ: ಇರಾನ್ ವಿರುದ್ಧ ಮುಂದಿನ ದಿನಗಳಲ್ಲಿ ಯಾವುದೇ ಮಿಲಿಟರಿ ಕ್ರಮ ಅಥವಾ ದಾಳಿ ನಡೆಸುವುದಿಲ್ಲ ಎಂದು ಅಮೆರಿಕ ಭರವಸೆ ನೀಡಬೇಕು.
3. ಯುದ್ಧ ನಷ್ಟಕ್ಕೆ ಪರಿಹಾರ: ಯುದ್ಧ ಸಂಬಂಧಿತ ನಷ್ಟಗಳು ಮತ್ತು ಹಾನಿಗಳಿಗೆ ಸೂಕ್ತವಾದ ಪರಿಹಾರವನ್ನು ಅಮೆರಿಕ ನೀಡಬೇಕು.
4. ಎಲ್ಲಾ ಪ್ರಾದೇಶಿಕ ರಂಗಗಳಲ್ಲಿ ಹಗೆತನದ ಅಂತ್ಯ: ಮಿತ್ರ ಗುಂಪುಗಳು ಸೇರಿದಂತೆ ಎಲ್ಲಾ ಪ್ರಾದೇಶಿಕ ರಂಗಗಳಲ್ಲಿ ಹಗೆತನಕ್ಕೆ ಸಂಪೂರ್ಣ ಅಂತ್ಯ ಹಾಡಬೇಕು.
5. ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ಅಧಿಕಾರದ ಮಾನ್ಯತೆ: ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್‌ಗೆ ಅಧಿಕಾರದ ಅಧಿಕೃತ ಮಾನ್ಯತೆ ನೀಡಬೇಕು.
“ನಮ್ಮ ಈ ಷರತ್ತುಗಳನ್ನು ಒಪ್ಪಿದ ಮೇಲೆಯೇ ಯುದ್ಧ ಕೊನೆಗೊಳ್ಳುತ್ತದೆ. ಯಾವುದೇ ಕದನ ವಿರಾಮದ ಸಮಯವನ್ನು ಇರಾನ್ ಮಾತ್ರ ನಿರ್ಧರಿಸುತ್ತದೆಯೇ ವಿನಃ ಬೇರೆ ದೇಶಗಳು ಇದನ್ನು ನಿರ್ಧರಿಸುವಂತಿಲ್ಲ” ಎಂದು ಇರಾನಿನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಎಲ್ಲಾ ಷರತ್ತುಗಳು ಈಡೇರುವವರೆಗೆ ಮಿಲಿಟರಿ ಕಾರ್ಯಾಚರಣೆಗಳು ಮುಂದುವರಿಯುತ್ತವೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
