ಇರಾನ್‌ನಲ್ಲಿ ಅಯತೊಲ್ಲಾ ಅಲಿ ಖಮೇನಿ ಸರ್ಕಾರದ ವಿರುದ್ಧ ಆರಂಭವಾದ ಪ್ರತಿಭಟನೆಗಳು ಈಗ ದೇಶಾದ್ಯಂತ ಉಗ್ರ ಹೋರಾಟ, ಆತಂಕ ಮತ್ತು ರಕ್ತಪಾತದ ರೂಪ ತಾಳಿದೆ. ತಮ್ಮದೇ ದೇಶದ ನಾಗರಿಕರ ವಿರುದ್ಧ ಭದ್ರತಾ ಪಡೆಗಳು ದಾಳಿ ನಡೆಸುವಂತೆ ಮಾಡಿರುವ ಅಯಾತೊಲ್ಲಾ ಅಲಿ ಖಮೇನಿ ನೇತೃತ್ವದ ಸರ್ಕಾರದ ಕ್ರಮಗಳು ಜಾಗತಿಕ ಮಟ್ಟದಲ್ಲಿ ತೀವ್ರ ಟೀಕೆಗೆ ಗುರಿಯಾಗಿವೆ.
ಇದುವರೆಗೆ ಇರಾನಿನಲ್ಲಿ ಕನಿಷ್ಠ 646ಕ್ಕೂ ಹೆಚ್ಚು ನಾಗರಿಕರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ ಎಂಬ ವರದಿಗಳು ಹೊರಬಿದ್ದಿವೆ. ಪ್ರತಿಭಟನೆ ಆರಂಭವಾದ ದಿನದಿಂದಲೇ ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಖಮೇನಿ ಸರ್ಕಾರವು 10 ಸಾವಿರಕ್ಕೂ ಹೆಚ್ಚು ಜನರನ್ನು ಬಂಧನದಲ್ಲಿಟ್ಟಿದೆ ಎಂದು ಹೇಳಲಾಗುತ್ತಿದೆ. ಬಂಧಿತರಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ಪತ್ರಕರ್ತರು ಹಾಗೂ ಸಾಮಾನ್ಯ ನಾಗರಿಕರೂ ಸೇರಿದ್ದಾರೆ.
ಇರಾನಿನ ಶವಾಗಾರಗಳಲ್ಲಿಯೂ ಶವಗಳನ್ನು ಇರಿಸಲು ಜಾಗವಿಲ್ಲದ ಸ್ಥಿತಿ ನಿರ್ಮಾಣವಾಗಿದ್ದು, ಆರೋಗ್ಯ ಸಿಬ್ಬಂದಿ ಶವಗಳನ್ನು ಒಂದರ ಮೇಲೊಂದು ಮೂಟೆಗಳಂತೆ ತುಂಬಿರುವ ದೃಶ್ಯಗಳು ಮನಕಲಕುವಂತಿವೆ. ಕೆಲವು ಪ್ರದೇಶಗಳಲ್ಲಿ ನಮಾಜ್ ಮಾಡುವ ಪ್ರಾರ್ಥನಾ ಸ್ಥಳಗಳಿಗೂ ಶವಗಳನ್ನು ರವಾನೆ ಮಾಡಲಾಗುತ್ತಿದೆ.
ಹಿಂಸಾಚಾರ, ಭಯ ಮತ್ತು ದಮನದ ನಡುವೆಯೂ ಇರಾನ್ ಜನರು ಹಿಂದೆ ಸರಿಯುತ್ತಿಲ್ಲ. ನೂರಾರು ಮಂದಿ ಹತ್ಯೆಗೀಡಾದರೂ, ಪ್ರತಿಭಟನೆಗಳು ದೇಶದ ವಿವಿಧ ನಗರಗಳಲ್ಲಿ ಮುಂದುವರಿದಿವೆ. ಮಹಿಳೆಯರ ಹಕ್ಕು, ಸ್ವಾತಂತ್ರ್ಯ, ಆರ್ಥಿಕ ಸಂಕಷ್ಟ ಮತ್ತು ಧಾರ್ಮಿಕ ದೌರ್ಜನ್ಯದ ವಿರುದ್ಧ ಜನರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದಾಗಿ ಖಮೇನಿ ಸರ್ಕಾರ ಪತನದ ಸನಿಹಕ್ಕೆ ಬಂದು ನಿಂತಿದೆಯೇ? ಎಂಬ ಪ್ರಶ್ನೆ ಜೋರಾಗಿ ಕೇಳಿಬರುತ್ತಿದೆ.
ಈ ಸಂಕಷ್ಟದ ಗಮನವನ್ನು ಬೇರೆಡೆಗೆ ತಿರುಗಿಸಲು ಖಮೇನಿ ಯುದ್ಧದ ಮಾತುಗಳನ್ನು ಆಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಅಮೆರಿಕ ಸೇನಾ ನೆಲೆಗಳು ಮತ್ತು ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಅದಕ್ಕೆ ಪ್ರತಿಯಾಗಿ, ಇರಾನ್ ವಿರುದ್ಧ ಅಮೆರಿಕ ಹಾಗೂ ಇಸ್ರೇಲ್ ಸೇನಾ ಕಾರ್ಯಾಚರಣೆ ನಡೆಸುವ ಸಾಧ್ಯತೆಯ ಕುರಿತ ಚರ್ಚೆಯೂ ಜೋರಾಗಿದೆ.
