ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿದ್ದು, ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಬಳಿಕ ಪರಿಸ್ಥಿತಿ ಯುದ್ಧದ ವಾತಾವರಣಕ್ಕೆ ತಿರುಗಿದೆ. ಇಸ್ರೇಲ್ ಮತ್ತು ಅಮೆರಿಕ ನಡೆಸಿದ ಜಂಟಿ ಏರ್‌ಸ್ಟ್ರೈಕ್‌ಗೆ ಪ್ರತಿಯಾಗಿ ಇರಾನ್ ಭಾರೀ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಆರಂಭಿಸಿದೆ. ಈ ಪ್ರತಿದಾಳಿಯ ಪರಿಣಾಮವಾಗಿ ಮಧ್ಯ ಇಸ್ರೇಲ್‌ನ ಬೆಟ್ ಶೆಮೇಶ್ ನಗರದಲ್ಲಿ 10 ಮಂದಿ ಸಾವಿಗೀಡಾಗಿದ್ದು, 23 ಮಂದಿ ಗಾಯಗೊಂಡಿದ್ದಾರೆ.
ಇಸ್ರೇಲ್ ತುರ್ತು ಸೇವಾ ಸಂಸ್ಥೆ ಮ್ಯಾಗೆನ್ ಡೇವಿಡ್ ಆಡಮ್ (ಎಂಡಿಎ) ನೀಡಿದ ಮಾಹಿತಿಯ ಪ್ರಕಾರ, ಕ್ಷಿಪಣಿಗಳು ವಾಸಸ್ಥಳ ಕಟ್ಟಡವೊಂದಕ್ಕೆ ನೇರವಾಗಿ ಅಪ್ಪಳಿಸಿದ್ದರಿಂದ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದ ಪರಿಣಾಮ ಕಟ್ಟಡದ ಭಾಗಶಃ ಧ್ವಂಸಗೊಂಡಿದ್ದು, ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸಲು ತುರ್ತು ಸಿಬ್ಬಂದಿ ಹೋರಾಟ ನಡೆಸುತ್ತಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಇರಾನ್ ಈ ದಾಳಿಯನ್ನು “ಪ್ರತೀಕಾರದ ಮೊದಲ ಹಂತ” ಎಂದು ಘೋಷಿಸಿದ್ದು, ಇಸ್ರೇಲ್ ಮೇಲೆ 200ಕ್ಕೂ ಹೆಚ್ಚು ಮಿಸೈಲ್‌ಗಳು ಹಾಗೂ 12 ಕ್ಕೂ ಹೆಚ್ಚು ಡ್ರೋನ್‌ಗಳನ್ನು ಪ್ರಯೋಗಿಸಿದೆ ಎಂದು ತಿಳಿಸಿದೆ. ಇಸ್ರೇಲ್ ರಕ್ಷಣಾ ವ್ಯವಸ್ಥೆ ಹಲವಾರು ಮಿಸೈಲ್‌ಗಳನ್ನು ಗಗನದಲ್ಲಿ ತಡೆದಿದ್ದರೂ, ಕೆಲವು ಗುರಿ ತಲುಪಿವೆ ಎಂದು ಮೂಲಗಳು ಹೇಳಿವೆ.
ಇದರಿಂದ ಇಸ್ರೇಲ್‌ನಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದೆ. ನಾಗರಿಕರಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಶಾಲೆಗಳು, ಸಾರ್ವಜನಿಕ ಕಚೇರಿಗಳು ಮತ್ತು ವ್ಯಾಪಾರ ಕೇಂದ್ರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಸೈರನ್‌ಗಳು ಮೊಳಗುತ್ತಿದೆ.
ಇದರೊಂದಿಗೆ ಇರಾನ್ ತನ್ನ ದಾಳಿಯನ್ನು ಗಲ್ಫ್ ರಾಷ್ಟ್ರಗಳತ್ತವೂ ವಿಸ್ತರಿಸಿದೆ. ಖತಾರ್, ಸೌದಿ ಅರೇಬಿಯಾ, ದುಬೈ, ಸಿರಿಯಾ ಮತ್ತು ಯುಎಇ ಕಡೆಗೆ ಡ್ರೋನ್ ಹಾಗೂ ಕ್ಷಿಪಣಿ ದಾಳಿಗಳನ್ನು ನಡೆಸುತ್ತಿರುವುದಾಗಿ ವರದಿಯಾಗಿದೆ.
ಇಸ್ರೇಲ್-ಅಮೆರಿಕ ಜಂಟಿ ದಾಳಿಯಲ್ಲಿ ಖಮೇನಿ ಮೃತಪಟ್ಟಿದ್ದಾರೆ ಎಂಬ ವರದಿ ಹೊರಬಂದ ಬಳಿಕ ಇರಾನ್ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. “ಈ ದಾಳಿಗೆ ಕಠಿಣ ಪ್ರತೀಕಾರ ನೀಡಲಾಗುವುದು” ಎಂದು ಇರಾನ್ ಉನ್ನತ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು.
ಮಧ್ಯಪ್ರಾಚ್ಯದ ಈ ಉದ್ವಿಗ್ನ ಪರಿಸ್ಥಿತಿಯ ಪರಿಣಾಮ ಜಾಗತಿಕ ಮಟ್ಟದಲ್ಲೂ ಕಾಣಿಸುತ್ತಿದೆ. ಅಂತರಾಷ್ಟ್ರೀಯ ಸಮುದಾಯವು ತಕ್ಷಣ ಶಾಂತಿ ಮಾತುಕತೆಗಳಿಗೆ ಕರೆ ನೀಡಿದೆ. ಯುಎನ್ ಸೇರಿದಂತೆ ಹಲವು ರಾಷ್ಟ್ರಗಳು ಎರಡೂ ದೇಶಗಳಿಗೆ ಸಂಯಮ ಪಾಲಿಸುವಂತೆ ಮನವಿ ಮಾಡಿವೆ.