ಜೆರುಸಲೇಂ: ಇರಾನ್‌ನ ನಟಾಂಜ್ ಪರಮಾಣು ಸ್ಥಾವರದ ಮೇಲೆ ಶನಿವಾರ ನಡೆದ ದಾಳಿಗೆ ಪ್ರತಿಯಾಗಿ, ಇರಾನ್ ಈಗ ಇಸ್ರೇಲ್‌ನ ಅತ್ಯಂತ ಸೂಕ್ಷ್ಮ ಪರಮಾಣು ಸಂಶೋಧನಾ ಕೇಂದ್ರಗಳಿರುವ ಡಿಮೋನಾ ಮತ್ತು ಅರಾದ್ ಪಟ್ಟಣಗಳ ಮೇಲೆ ಭೀಕರ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದೆ. ನೂರಾರು ಕಿಲೋಗ್ರಾಂ ತೂಕದ ಕ್ಷಿಪಣಿಗಳು ಜನವಸತಿ ಪ್ರದೇಶಗಳಿಗೆ ಅಪ್ಪಳಿಸಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇರಾನ್ ಉಡಾಯಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆಯನ್ನು ಭೇದಿಸಿ ನೇರವಾಗಿ ವಸತಿ ಕಟ್ಟಡಗಳಿಗೆ ಅಪ್ಪಳಿಸಿವೆ. ದಾಳಿಯ ರಭಸಕ್ಕೆ ಬಹುಮಹಡಿ ಕಟ್ಟಡಗಳ ಮುಂಭಾಗದ ಭಾಗಗಳು ಸಂಪೂರ್ಣ ಛಿದ್ರವಾಗಿದ್ದು, ನೆಲದಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿವೆ. ಆಕಾಶದಿಂದ ಬೆಂಕಿಯ ಚೆಂಡುಗಳು ಬೀಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇಸ್ರೇಲ್ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.
WATCH: Impressive footage of Iranian missile hit on Israel’s Dimona tonight. pic.twitter.com/xtBvxQvR9Z
— Clash Report (@clashreport) March 21, 2026
117 ಮಂದಿಗೆ ಗಾಯ: 10 ಜನರ ಸ್ಥಿತಿ ಗಂಭೀರ
ಇಸ್ರೇಲ್‌ನ ತುರ್ತು ವೈದ್ಯಕೀಯ ಸೇವೆಯಾದ ಮ್ಯಾಗೆನ್ ಡೇವಿಡ್ ಅಡೋಮ್ (MDA) ನೀಡಿರುವ ಮಾಹಿತಿಯಂತೆ,ಅರಾದದ್‌ನಲ್ಲಿ 84 ಜನರು ಗಾಯಗೊಂಡಿದ್ದು, ಈ ಪೈಕಿ 10 ಜನರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಡಿಮೋನಾದಲ್ಲಿ ಅಂದರೆ ಶಿಮೊನ್ ಪೆರೆಸ್ ನೆಗೆವ್ ಪರಮಾಣು ಸಂಶೋಧನಾ ಕೇಂದ್ರವಿರುವ ಈ ಪಟ್ಟಣದಲ್ಲಿ 33 ಮಂದಿ ಗಾಯಗೊಂಡಿದ್ದಾರೆ.
ಇಸ್ರೇಲ್ ರಕ್ಷಣಾ ಪಡೆಗಳ (IDF) ವಕ್ತಾರ ಬ್ರಿಗೇಡಿಯರ್ ಜನರಲ್ ಎಫೀ ಡೆಫ್ರಿನ್ ಪ್ರತಿಕ್ರಿಯಿಸಿ, ನಮ್ಮ ವಾಯು ರಕ್ಷಣಾ ವ್ಯವಸ್ಥೆಗಳು ಕಾರ್ಯನಿರ್ವಹಿಸಿದವು. ಆದರೆ, ಕೆಲವು ಕ್ಷಿಪಣಿಗಳನ್ನು ತಡೆಯಲು ಸಾಧ್ಯವಾಗಲಿಲ್ಲ. ಇದು ಯಾವುದೇ ಅಸಾಮಾನ್ಯ ಶಸ್ತ್ರಾಸ್ತ್ರವಲ್ಲದಿದ್ದರೂ, ಶಸ್ತ್ರಾಸ್ತ್ರಗಳ ತೂಕ ಹೆಚ್ಚಿದ್ದರಿಂದ ಹಾನಿ ಅಧಿಕವಾಗಿದೆ ಎಂದು ತಿಳಿಸಿದ್ದಾರೆ. ಘಟನೆಯ ಬಗ್ಗೆ ಐಡಿಎಫ್ ತನಿಖೆಗೆ ಆದೇಶಿಸಿದೆ.
ಇರಾನ್ ಈ ಮಟ್ಟಕ್ಕೆ ಕೋಪಗೊಂಡು ದಾಳಿ ನಡೆಸಲು, ಶನಿವಾರ ಇರಾನ್‌ನ ನಟಾಂಜ್ (Natanz) ಪರಮಾಣು ಪುಷ್ಟೀಕರಣ ಘಟಕದ ಮೇಲೆ ನಡೆದ ವೈಮಾನಿಕ ದಾಳಿ ಕಾರಣವಾಗಿದೆ. ಈ ದಾಳಿಯಿಂದ ಹಲವು ಕಟ್ಟಡಗಳು ಹಾನಿಗೀಡಾಗಿದ್ದವು. ಆದರೆ, ಇರಾನ್‌ನ ಮಿಜಾನ್ ಸುದ್ದಿ ಸಂಸ್ಥೆಯ ಪ್ರಕಾರ, ಸ್ಥಾವರದಲ್ಲಿ ಯಾವುದೇ ವಿಕಿರಣ ಸೋರಿಕೆ ವರದಿಯಾಗಿಲ್ಲ. ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆ ಕೂಡ ವಿಕಿರಣಶೀಲ ಪರಿಣಾಮಗಳ ಸಾಧ್ಯತೆಯನ್ನು ತಳ್ಳಿಹಾಕಿದೆ.
ಪ್ರಸ್ತುತ ಇಸ್ರೇಲ್‌ನಲ್ಲಿ ಹೋಮ್ ಫ್ರಂಟ್ ಕಮಾಂಡ್ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಜನರು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸೂಚಿಸಲಾಗಿದೆ.
